ದಿಲ್ಲಿಯಲ್ಲಿ ಕೊಂಚ ತಗ್ಗಿದ ವಾಯುಮಾಲಿನ್ಯ: ತ್ವರಿತ ಕ್ರಮಕ್ಕೆ ಸರಕಾರಕ್ಕೆ ನಿವಾಸಿಗಳ ಆಗ್ರಹ

Update: 2023-11-07 15:05 GMT

Photo- PTI

ಹೊಸದಿಲ್ಲಿ: ಸೋಮವಾರ ಸಂಜೆ ‘ಗಂಭೀರ’ ವರ್ಗದಲ್ಲಿದ್ದ ದಿಲ್ಲಿಯಲ್ಲಿನ ವಾಯುಮಾಲಿನ್ಯ ಮಂಗಳವಾರ ಕೊಂಚ ತಗ್ಗಿದ್ದು,‘ಅತ್ಯಂತ ಕಳಪೆ ’ವರ್ಗದಲ್ಲಿ ಉಳಿದುಕೊಂಡಿದೆ. ಮಂಗಳವಾರ ಬೆಳಿಗ್ಗೆ ವಾಯು ಗುಣಮಟ್ಟ ಸೂಚ್ಯಂಕ 394 ಇದ್ದು,ಅದು ಸೋಮವಾರ ಸಂಜೆ 421ರಷ್ಟಿತ್ತು.

ಹೀಗಿದ್ದರೂ, ದಿಲ್ಲಿಯಲ್ಲಿ ಉಸಿರಾಟ ವ್ಯವಸ್ಥೆಯಲ್ಲಿ ಆಳವಾಗಿ ಪ್ರವೇಶಿಸುವ ಮತ್ತು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗುವ ಸಾಮರ್ಥ್ಯವನ್ನು ಹೊಂದಿರುವ ಪಿಎಂ 2.5 ಸೂಕ್ಷ್ಮಕಣಗಳ ಸಾಂದ್ರತೆಯು ಸರಕಾರವು ನಿಗದಿಗೊಳಿಸಿರುವ ಪ್ರತಿ ಘನ ಮೀಟರ್‌ಗೆ 60 ಮೈಕ್ರೋಗ್ರಾಮ್‌ಗಳ ಮಿತಿಗಿಂತ ಏಳೆಂಟು ಪಟ್ಟು ಮತ್ತು ವಿಶ್ವ ಆರೋಗ್ಯ ಸಂಸ್ಥೆಯು ನಿಗದಿಗೊಳಿಸಿರುವ ಪ್ರತಿ ಘನ ಮೀಟರ್‌ಗೆ 15 ಮೈಕ್ರೋಗ್ರಾಮ್‌ಗಳ ಆರೋಗ್ಯಕರ ಮಿತಿಗಿಂತ 30-40 ಪಟ್ಟು ಹೆಚ್ಚಾಗಿದೆ.

ನಗರದ ಹಲವಾರು ನಿವಾಸಿಗಳು ಉಸಿರಾಟದ ತೊಂದರೆ ಮತ್ತು ನೇತ್ರ ಸಮಸ್ಯೆಗಳ ಬಗ್ಗೆ ದೂರಿಕೊಂಡಿದ್ದಾರೆ. ಸರಕಾರವು ಈ ನಿಟ್ಟಿನಲ್ಲಿ ಏನನ್ನೂ ಮಾಡುತ್ತಿಲ್ಲ ,ಅದು ತಕ್ಷಣ ಎಚ್ಚೆತ್ತುಕೊಂಡು ಸಾಧ್ಯವಿರುವ ಎಲ್ಲ ಕ್ರಮಗಳನ್ನೂ ಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದ್ದಾರೆ.

ಹೆಚ್ಚಿನ ಮಟ್ಟದ ವಾಯುಮಾಲಿನ್ಯಕ್ಕೆ ದೀರ್ಘ ಕಾಲ ಒಡ್ಡಿಕೊಂಡರೆ ಅದು ಅಸ್ತಮಾ,ಬ್ರಾಂಕೈಟಿಸ್ ಮತ್ತು ದೀರ್ಘಕಾಲದ ಪ್ರತಿರೋಧಕ ಶ್ವಾಸಕೋಶ ಕಾಯಿಲೆ (ಸಿಒಪಿಡಿ)ಯಂತಹ ಉಸಿರಾಟ ಸಮಸ್ಯೆಗಳ ಉಲ್ಬಣಕ್ಕೆ ಕಾರಣವಾಗುತ್ತದೆ ಮತ್ತು ಹೃದ್ರೋಗದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ವೈದ್ಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನೆರೆಯ ಹರ್ಯಾಣ,ರಾಜಸ್ಥಾನ ಮತ್ತು ಉತ್ತರ ಪ್ರದೇಶಗಳ ಹಲವಾರು ನಗರಗಳಲ್ಲಿಯೂ ವಾಯುಮಾಲಿನ್ಯವು ಅಪಾಯಕಾರಿ ಮಟ್ಟಕ್ಕೆ ಹೆಚ್ಚಿರುವುದು ವರದಿಯಾಗಿದೆ. ದಿಲ್ಲಿಯಲ್ಲಿ ಇದೇ ಸ್ಥಿತಿ ಇನ್ನೂ ಐದಾರು ದಿನಗಳ ಕಾಲ ಮುಂದುವರಿಯುವ ಸಾಧ್ಯತೆಯಿದೆ ಎಂದು ಭೂವಿಜ್ಞಾನಗಳ ಸಚಿವಾಲಯದ ಏರ್ ಕ್ವಾಲಿಟಿ ಅರ್ಲಿ ವಾರ್ನಿಂಗ್ ಸಿಸ್ಟಮ್ ತಿಳಿಸಿದೆ. ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಹದಗೆಡುತ್ತಿರುವ ವಾಯು ಗುಣಮಟ್ಟದ ಹಿನ್ನೆಲೆಯಲ್ಲಿ ಗುರುಗ್ರಾಮ ಮತ್ತು ಫರೀದಾಬಾದ್‌ಗಳಲ್ಲಿ ಶಾಲೆಗಳಿಗೆ ನ.12ರವರೆಗೆ ರಜೆ ಸಾರಲಾಗಿದೆ. 

Tags:    

Writer - ವಾರ್ತಾಭಾರತಿ

contributor

Editor - Althaf

contributor

Byline - ವಾರ್ತಾಭಾರತಿ

contributor

Similar News