ಶರದ್ ಪವಾರ್ ನೇತೃತ್ವದ ಎನ್‌ಸಿಪಿ ಬಣ ಸೇರ್ಪಡೆಯಾದ ಅಜಿತ್ ಪವಾರ್ ಬಣದ ನಾಯಕರು
ಪುಣೆ: ಚುನಾವಣಾ ರಾಜ್ಯವಾದ ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ತೊರೆದಿರುವ ಹಲವು ನಾಯಕರು ಹಾಗೂ ಕಾರ್ಪೊರೇಟರ್‌ಗಳು, ಶರದ್ ಪವಾರ್ ನೇತೃತ್ವದ ಎನ್‌ಸಿಪಿಗೆ ಪುಣೆಯಲ್ಲಿರುವ ಶರದ್ ಪವಾರ್ ನಿವಾಸದಲ್ಲಿ ಬುಧವಾರ ಸೇರ್ಪಡೆಯಾಗಿದ್ದಾರೆ.
ಪುಣೆಯಲ್ಲಿನ ಶರದ್ ಪವಾರ್ ನಿವಾಸದಲ್ಲಿ ಶರದ್ ಪವಾರ್ ನೇತೃತ್ವದ ಎನ್‌ಸಿಪಿಗೆ ಸೇರ್ಪಡೆಯಾದ ನಾಯಕರ ಪೈಕಿ ಪಿಂಪ್ರಿ-ಚಿಂಚ್ವಾಡ್ ಎನ್‌ಸಿಪಿ (ಅಜಿತ್ ಪವಾರ್ ಬಣ) ಘಟಕದ ಮುಖ್ಯಸ್ಥರಾದ ಅಜಿತ್ ಗವ್ಹಾನೆ ಕೂಡಾ ಸೇರಿದ್ದಾರೆ. ಇವರೊಂದಿಗೆ, ಪಿಂಪ್ರಿ-ಚಿಂಚ್ವಾಡ್ ಘಟಕದ ಹಿರಿಯ ನಾಯಕರು ಮಂಗಳವಾರ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿಗೆ ರಾಜೀನಾಮೆ ಸಲ್ಲಿಸಿದ್ದರು.
ಈ ಪಕ್ಷಾಂತರದ ಕುರಿತು ಪ್ರತಿಕ್ರಿಯಿಸಿರುವ ಎನ್‌ಸಿಪಿ(ಶರದ್ ಪವಾರ್ ಬಣ)ಯ ಕಾರ್ಯಾಧ್ಯಕ್ಷೆ ಸುಪ್ರಿಯಾ ಸುಳೆ, "ಪಕ್ಷದಲ್ಲಿ ಪ್ರತಿಯೊಬ್ಬರಿಗೂ ವಿಭಿನ್ನ ಅನುಭವವಾಗಿರಬೇಕು ಎಂದು ನನಗನ್ನಿಸುತ್ತಿದೆ" ಎಂದು ಹೇಳಿದ್ದಾರೆ.
ಅಜಿತ್ ಪವಾರ್ ಬಣದಲ್ಲಿದ್ದ ಅಜಿತ್ ಗವ್ಹಾನೆ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಭಸೋರಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸುವ ಬಯಕೆ ಹೊಂದಿದ್ದರು. ಆದರೆ, ಭಸೋರಿ ವಿಧಾನಸಭಾ ಕ್ಷೇತ್ರದ ಹಾಲಿ ಶಾಸಕ ಮಹೇಶ್ ಲಂಗ್ಡೆಗೆ ಮಹಾಯುತಿ ಟಿಕೆಟ್ ದೊರೆಯುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ. ಇದರಿಂದ ಅಸಮಾಧಾನಗೊಂಡಿರುವ ಅಜಿತ್ ಗವ್ಹಾನೆ ಅಜಿತ್ ಪವಾರ್ ನೇತೃತ್ವದ ಎನ್‌ಸಿಪಿ ತೊರೆದಿದ್ದಾರೆ ಎನ್ನಲಾಗಿದೆ.