ಸಿಬಿಐ ನೀಡಿದ ಸಮನ್ಸ್ ಗೆ ಲಿಖಿತ ಪ್ರತಿಕ್ರಿಯೆ ಸಲ್ಲಿಸಿದ ಅಖಿಲೇಶ್
ಲಖನೌ: ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗುವಂತೆ ಸಿಬಿಐ ನೀಡಿದ್ದ ಸಮನ್ಸ್ ಗೆ ಲಿಖಿತ ಪ್ರತಿಕ್ರಿಯೆ ಸಲ್ಲಿಸಿರುವುದಾಗಿ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ ಅವರು ಗುರುವಾರ ತಿಳಿಸಿದ್ದಾರೆ ಎಂದು ಪಿಟಿಐ ಸುದ್ದಿ ಸಂಸ್ಥೆ ವರದಿ ಮಾಡಿದೆ.
ಸಮಾಜವಾದಿ ಪಕ್ಷದ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಘಟಕದಂತೆ ಸಿಬಿಐ ಕಾರ್ಯ ನಿರ್ವಹಿಸುತ್ತಿದೆ. ಲೋಕಸಭಾ ಚುನಾವಣೆಯಲ್ಲಿ ಉತ್ತರ ಪ್ರದೇಶದ ಜನರು ಕೇಂದ್ರದ ಬಿಜೆಪಿ ಸರಕಾರವನ್ನು ಕಿತ್ತೊಗೆಯಲಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
‘ಬಿಜೆಪಿಗೆ ಸಮಾಜವಾದಿ ಪಕ್ಷವೇ ಪ್ರಮುಖ ಗುರಿಯಾಗಿದೆ. 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಕೆಲ ವಿಷಯಗಳಿಗೆ ಸಂಬಂಧಿಸಿದಂತೆ ನನಗೆ ನೋಟಿಸ್ ಬಂದಿತ್ತು. ಈಗ ಮತ್ತೆ ಚುನಾವಣೆ ಸಮೀಪಿಸುತ್ತಿರುವುದರಿಂದ ಇನ್ನೊಮ್ಮೆ ನೋಟಿಸ್ ಬಂದಿದೆ’ ಎಂದು ಎಕ್ಸ್ ನಲ್ಲಿಯೂ ಪ್ರತಿಕ್ರಿಯೆಸಿದ್ದಾರೆ.
“ಬಿಜೆಪಿಯು 10 ವರ್ಷಗಳಲ್ಲಿ ಸಾಕಷ್ಟು ಕೆಲಸಗಳನ್ನು ಮಾಡಿದ್ದರೆ, ಏಕೆ ಹಿಂಜರಿಕೆ? ಚುನಾವಣೆ ಬಂದಾಗ ನೋಟಿಸ್ ಬರುತ್ತದೆ ಎಂಬುದು ನನಗೆ ಗೊತ್ತು”ಎಂದು ಅವರು ಪ್ರಶ್ನಿಸಿದ್ದರು