ಮಾಯಾವತಿ ಅವರ ಬಿಎಸ್‌ಪಿಯನ್ನು ಇಂಡಿಯಾ ಮೈತ್ರಿಕೂಟಕ್ಕೆ ಸೇರಿಸಿದಲ್ಲಿ ತಾವು ಹೊರನಡೆಯುವುದಾಗಿ ಎಚ್ಚರಿಸಿದ ಅಖಿಲೇಶ್ ಯಾದವ್
ಹೊಸದಿಲ್ಲಿ: ಮಾಯಾವತಿ ನೇತೃತ್ವದ ಬಹುಜನ ಸಮಾಜ ಪಕ್ಷವನ್ನು ಇಂಡಿಯಾ ಮೈತ್ರಿಕೂಟಕ್ಕೆ ಸೇರಿಸಿದಲ್ಲಿ ತಾವು ಮೈತ್ರಿಕೂಟ ತೊರೆಯುವುದಾಗಿ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಡಿಸೆಂಬರ್ 19ರಂದು ನಡೆದ ಮೈತ್ರಿಕೂಟ ಸಭೆಯಲ್ಲಿ ಹೇಳುವ ಮೂಲಕ ಭಾಗವಹಿಸಿದ ಮುಖಂಡರಿಗೆ ಆಘಾತ ನೀಡಿದ್ದಾರೆನ್ನಲಾಗಿದೆ. ಮಾಯಾವತಿ ಅವರನ್ನು ಮೈತ್ರಿಕೂಟಕ್ಕೆ ಸೇರಿಸಲು ನಡೆಸಲಾಗುತ್ತಿರುವ ಪ್ರಯತ್ನಗಳು ತಮಗೆ ತಿಳಿದಿವೆ ಎಂದೂ ಅವರು ಹೇಳಿದ್ದಾರೆನ್ನಲಾಗಿದೆ.
ಆದರೆ ಇಂಡಿಯಾ ಮೈತ್ರಿಕೂಟ ಇಲ್ಲಿಯ ತನಕ ನಡೆದ ನಾಲ್ಕು ಸಭೆಗಳಲ್ಲಿ ಯಾವೊಂದು ಸಭೆಯಲ್ಲೂ ಬಿಎಸ್‌ಪಿಯನ್ನು ಮೈತ್ರಿಕೂಟಕ್ಕೆ ಸೇರಿಸುವ ಬಗ್ಗೆ ಚರ್ಚೆ ನಡೆದಿರದೇ ಇರುವುದರಿಂದ ಅಖಿಲೇಶ್ ಅವರು ಈ ಮಾತುಗಳನ್ನಾಡಲು ಕಾರಣವೇನೆಂದು ವಿಪಕ್ಷ ನಾಯಕರಿಗೆ ತಿಳಿಯದಾಗಿದೆ ಎಂದು newindianexpress.com ವರದಿ ಮಾಡಿದೆ.
ಕಾಂಗ್ರೆಸ್ ಪಕ್ಷದ ಒಂದು ಪ್ರಬಲ ವಿಭಾಗವು ಉತ್ತರ ಪ್ರದೇಶದಲ್ಲಿ ಬಿಎಸ್‌ಪಿ ಜೊತೆ ನಂಟು ಬೆಳೆಸಲು ಉತ್ಸುಕವಾಗಿದೆ ಮತ್ತು ಮೈತ್ರಿಕೂಟದಲ್ಲಿ ಈ ವಿಷಯ ಪ್ರಸ್ತಾಪವಾಗಬಹುದೆಂದು ಅಖಿಲೇಶ್ ನಂಬಿದ್ದಾರೆಂದು ಹೇಳಲಾಗಿದ್ದು ಇಂತಹ ಯಾವುದೇ ಬೆಳವಣಿಗೆ ಹತ್ತಿಕ್ಕುವ ಉದ್ದೇಶದಿಂದಲೇ ಅವರು ಮೈತ್ರಿಕೂಟ ಸಭೆಯಲ್ಲಿ ಪರೋಕ್ಷ ಎಚ್ಚರಿಕೆ ನೀಡಿದ್ದಾರೆನ್ನಲಾಗಿದೆ.
ಇಂಡಿಯಾ ಮೈತ್ರಿಕೂಟ ಹಾಗೂ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದಿಂದ ದೂರವಿರುವ ಮಾಯಾವತಿ ಈ ಬೆಳವಣಿಗೆ ಬಗ್ಗೆ ಪ್ರತಿಕ್ರಿಯಿಸಿ “ಜನರು ಮತ್ತು ದೇಶಕ್ಕಾಗಿ ಭವಿಷ್ಯದಲ್ಲಿ ಯಾರಿಗೆ ಯಾರ ಸಹಾಯ ಬೇಕೆಂಬುದು ಯಾರಿಗೂ ತಿಳಿದಿಲ್ಲ,” ಎಂದು ಹೇಳಿದರು. ಅಖಿಲೇಶ್ ಯಾದವ್ ಅವರನ್ನು ನೇರವಾಗಿ ಗುರಿಯಾಗಿಸಿ ಮಾತನಾಡಿದ ಮಾಯಾವತಿ ಇಂತಹ ಹೇಳಿಕೆಗಳನ್ನು ನೀಡುವ ಪಕ್ಷಗಳು ನಂತರ ಮುಜುಗರಕ್ಕೊಳಗಾಗಬೇಕಾದೀತು ಎಂದಿದ್ದಾರೆ. ಅಖಿಲೇಶ್ ವಿರುದ್ಧ ತಕ್ಷಣ ಮಾಯಾವತಿ ತಿರುಗೇಟು ನೀಡಿರುವುದು ಅವರು ವಿಪಕ್ಷದೊಂದಿಗೆ ಹೊಂದಾಣಿಕೆಗೆ ಸಿದ್ಧ ಎಂಬುದನ್ನು ಸೂಚಿಸುತ್ತದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯವಾಗಿದೆ.