ಕ್ರೈಸ್ತರು, ಮುಸ್ಲಿಮರ ವಿರುದ್ಧ ದ್ವೇಷ ಭಾಷಣ ಆರೋಪ: ಚೆನ್ನೈ ಪೊಲೀಸ್ ಇನ್ಸ್ ಪೆಕ್ಟರ್ ಅಮಾನತು
ಚೆನ್ನೈ: ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರು ಇತರ ಸಮುದಾಯಗಳ ವಿರುದ್ಧ ದ್ವೇಷ ಭಾಷಣವನ್ನು ಮುದ್ರಿಸಿ, ಆ ಧ್ವನಿಮುದ್ರಿಕೆಯನ್ನು ವಾಟ್ಸ್ ಆ್ಯಪ್ ಗುಂಪೊಂದಕ್ಕೆ ಹಂಚಿಕೊಂಡಿರುವುದು ಕಂಡು ಬಂದಿರುವ ಹಿನ್ನೆಲೆಯಲ್ಲಿ ಅವರನ್ನು ಗ್ರೇಟರ್ ಚೆನ್ನೈ ಪೊಲೀಸ್ ಆಯುಕ್ತ ಸಂದೀಪ್ ರೈ ರಾಥೋಡ್ ಅಮಾನತುಗೊಳಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.
ಆರೋಪಿ ಪೊಲೀಸ್ ಅಧಿಕಾರಿಯನ್ನು ಪಿ. ರಾಜೇಂದ್ರನ್ ಎಂದು ಗುರುತಿಸಲಾಗಿದ್ದು, ಅವರು ಪುಳಿನತೋಪೆಯ ಸಂಚಾರಿ ತನಿಖಾ ದಳದಲ್ಲಿ ಇನ್ಸ್ ಪೆಕ್ಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಆ ವೈರಲ್ ಧ್ವನಿಮುದ್ರಿಕೆಯಲ್ಲಿ ಜನತೆ ಧಾರ್ಮಿಕ ವಿಭಜನೆಯ ಹೇಳಿಕೆಗಳನ್ನು ಪೋಸ್ಟ್ ಮಾಡಬಾರದು ಎಂದು ಹೇಳುವ ಮುನ್ನ, ಅವರು ಬಲಪಂಥೀಯತೆ ಪರ ಹೇಳಿಕೆಗಳನ್ನು ನೀಡಿರುವುದನ್ನು ಕೇಳಬಹುದಾಗಿದೆ.
ಸಾಮಾಜಿಕ ಮಾಧ್ಯಮದಲ್ಲಿ ಆಕ್ಷೇಪಾರ್ಹ ಅನಿಸಿಕೆಯನ್ನು ವ್ಯಕ್ತಪಡಿಸಿರುವುದರಿಂದ ರಾಜೇಂದ್ರನ್ ಅವರನ್ನು ಅಮಾನತಿನಲ್ಲಿರಿಸಲಾಗಿದೆ ಎಂದು ಗ್ರೇಟರ್ ಚೆನ್ನೈ ಪೊಲೀಸರು ಸೋಮವಾರ ಟ್ವೀಟ್ ಮಾಡಿದ್ದಾರೆ.
ಕ್ರಿಸ್ಟೋಫರ್ ಎಂಬ ವ್ಯಕ್ತಿ ಆಧ್ಯಾತ್ಮಿಕ ಗೀತೆಯನ್ನು ಪೋಸ್ಟ್ ಮಾಡಿದ್ದಕ್ಕೆ ಪ್ರತಿಯಾಗಿ ರಾಜೇಂದ್ರನ್ ಈ ಆಕ್ಷೇಪಾರ್ಹ ಧ್ವನಿ ಸಂದೇಶವನ್ನು ಬಿಡುಗಡೆ ಮಾಡಿದ್ದರು.
ರಾಜೇಂದ್ರನ್ ವಿರುದ್ಧ ತನಿಖೆ ನಡೆಸಿದ್ದ ಅಧಿಕಾರಿಗಳು ಅವರನ್ನು ಅಮಾನತಿನಲ್ಲಿರಿಸಿದ್ದು, ಇಲಾಖಾ ತನಿಖೆ ಇನ್ನೂ ಬಾಕಿಯಿದೆ.
ಈ ಕುರಿತು indianexpress.com ಸುದ್ದಿ ಸಂಸ್ಥೆಗೆ ಪ್ರತಿಕ್ರಿಯಿಸಿರುವ ಹೆಚ್ಚುವರಿ ಪೊಲೀಸ್ ಆಯುಕ್ತ (ಸಂಚಾರ) ಕಪಿಲ್ ಕುಮಾರ್ ಸರತ್ಕರ್, ಪೊಲೀಸ್ ಸಿಬ್ಬಂದಿಗಳು ತರಬೇತಿಯಲ್ಲಿರುವಾಗ ಅವರಿಗೆ ಸೂಕ್ಷ್ಮ ವಿಷಯಗಳ ಕುರಿತು ಹೇಗೆ ವರ್ತಿಸಬೇಕು ಎಂಬ ಕುರಿತು ಮಾರ್ಗದರ್ಶನ ನೀಡಲಾಗಿರುತ್ತದೆ ಎಂದು ತಿಳಿಸಿದ್ದಾರೆ.
“ತರಬೇತಿ ಅವಧಿಯಲ್ಲಿ ಅವರಿಗೆ ಸಂವೇದನಾಶೀಲರಾಗಿರಬೇಕು ಹಾಗೂ ಅವರ ವೈಯಕ್ತಿಕ ನಂಬಿಕೆಗಳು ಅವರ ಕರ್ತವ್ಯದ ಮೇಲೆ ಪ್ರತಿಫಲನಗೊಳ್ಳಬಾರದು ಎಂದು ತಿಳಿಸಲಾಗಿರುತ್ತದೆ. ಇಂತಹ ಘಟನೆಗಳೇನಾದರೂ ನಡೆದರೆ, ನಾವೀಗ ಈ ಪ್ರಕರಣದಲ್ಲಿ ಕೈಗೊಂಡಿರುವಂತೆ ಕಠಿಣ ಕ್ರಮ ಕೈಗೊಳ್ಳಲಾಗುತ್ತದೆ” ಎಂದು ಸರತ್ಕರ್ ಎಚ್ಚರಿಸಿದ್ದಾರೆ.
“ಇದಲ್ಲದೆ, ಸಂಯಮ ಮೂಡಿಸುವ ನಿಯಮಿತ ಕಾರ್ಯಕ್ರಮಗಳಲ್ಲಿ ನಾವು ಲಿಂಗ ಸಂವೇದನೆ, ಅಲ್ಪಸಂಖ್ಯಾತರು ಇತ್ಯಾದಿ ವಿಚಾರಗಳನ್ನು ಹೇಗೆ ನಿಭಾಯಿಸಬೇಕು ಎಂಬುದರ ಕುರಿತು ಅಧಿಕಾರಿಗಳಿಗೆ ಸಲಹೆ ನೀಡಿರುತ್ತೇವೆ. ದುರ್ಬಲ ವರ್ಗಗಳೆಡೆಗಿನ ಅವರ ಧೋರಣೆಯ ಮೇಲೆ ನಾವು ನಿಗಾ ವಹಿಸಿರುತ್ತೇವೆ ಮತ್ತು ಸೂಕ್ತ ಕ್ರಮಗಳನ್ನು ಕೈಗೊಳ್ಳುತ್ತೇವೆ” ಎಂದೂ ಅವರು ಹೇಳಿದ್ದಾರೆ.