ಲೋಕಸಭಾ ಚುನಾವಣೆ ನಂತರ ಈಗ ರದ್ದಾಗಿರುವ ಚುನಾವಣಾ ಬಾಂಡ್‌ಗೆ ಪರ್ಯಾಯ ಯೋಜನೆ?
ಹೊಸದಿಲ್ಲಿ: ಎಚುನಾವಣಾ ಬಾಂಡ್‌ಗಳನ್ನು ಸುಪ್ರೀಂ ಕೋರ್ಟ್ ಅಸಂವಿಧಾನಿಕ ಎಂದು ಘೋಷಿಸಿ ರದ್ದುಗೊಳಿಸಿರುವ ಹಿನ್ನೆಲೆಯಲ್ಲಿ ಅದರ ಸ್ಥಾನ ತುಂಬುವ ಪರ್ಯಾಯ ಯೋಜನೆಯನ್ನು ಲೋಕಸಭಾ ಚುನಾವಣೆ ನಂತರ ಜಾರಿಗೊಳಿಸುವ ಸಾಧ್ಯತೆಯಿದೆ ಎಂದು Mint ವರದಿ ಮಾಡಿದೆ. ಈ ಪ್ರಸ್ತಾವಿತ ಹೊಸ ಯೋಜನೆಗೆ ಸಂಬಂಧಿಸಿದಂತೆ ವಿತ್ತ ಸಚಿವಾಲಯವು ಕಾರ್ಯನಿರ್ವಹಿಸುತ್ತಿದೆ ಎನ್ನಲಾಗಿದೆ. ಈ ಪ್ರಸ್ತಾವಿತ ಯೋಜನೆಯು ಈಗ ರದ್ದುಗೊಂಡ ಯೋಜನೆ ಹೊಂದಿದ್ದ ಪಾರದರ್ಶಕತೆ ಮತ್ತಿತರ ಅಂಶಗಳ ಕೊರತೆಯನ್ನು ನೀಗಿಸಲಿದೆ ಎನ್ನಲಾಗಿದೆ. ಈ ಕುರಿತಂತೆ ಚರ್ಚೆಗಳು ಆರಂಭಿಕ ಹಂತದಲ್ಲಿವೆ ಎನ್ನಲಾಗಿದೆ. ಆದರೆ ಯಾವುದೇ ಹೊಸ ಯೋಜನೆಗೆ ಅಗತ್ಯವಿರುವ ಶಾಸನಾತ್ಮಕ ಬದಲಾವಣೆಗಳ ಕುರಿತು ಚರ್ಚೆ ಇನ್ನಷ್ಟೇ ಆರಂಭಗೊಳ್ಳಬೇಕಿದೆ.
ಈ ಕುರಿತಂತೆ ಕೇಂದ್ರ ವಿತ್ತ ಸಚಿವಾಲಯ, ಕಾರ್ಪೊರೇಟ್ ವ್ಯವಹಾರಗಳ ಸಚಿವಾಲಯ ಹಾಗೂ ಪ್ರಧಾನಿ ಕಚೇರಿಯಿಂದ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ.
ಆದರೆ ಪ್ರಧಾನಿ ನರೇಂದ್ರ ಮೋದಿ ತಮ್ಮ ಇತ್ತೀಚಿನ ಸಂದರ್ಶನವೊಂದರಲ್ಲಿ ಯಾವುದೇ ಯೋಜನೆಯು ಪರಿಪೂರ್ಣವಲ್ಲ ಎಂದು ಒಪ್ಪಿಕೊಂಡಿದ್ದರಲ್ಲದೆ ಲೋಪಗಳನ್ನು ಸರಿಪಡಿಸುವ ಅಗತ್ಯವನ್ನೂ ಒತ್ತಿ ಹೇಳಿದ್ದರು.
ರಾಜಕೀಯ ಪಕ್ಷಗಳಿಗೆ ದೇಣಿಗೆ ನೀಡುವ ಕುರಿತಾದ ಯಾವುದೇ ಯೋಜನೆ ಜಾರಿಗೆ ಮುನ್ನ ರಾಜಕೀಯ ಪಕ್ಷಗಳ ಸಹಮತ ಅಗತ್ಯವೆಂಬ ಅಭಿಪ್ರಾಯವನ್ನು ಹಲವು ತಜ್ಞರು ವ್ಯಕ್ತಪಡಿಸಿದ್ದಾರೆ.