ಅಮೇಥಿ ಹತ್ಯಾಕಾಂಡ | ಆರೋಪಿಯು ಪೂನಂ ಜೊತೆ ಬಲವಂತದಿಂದ ಚಿತ್ರಗಳನ್ನು ತೆಗೆದುಕೊಂಡಿದ್ದ : ಕುಟುಂಬದ ಆರೋಪ

Update: 2024-10-06 15:37 GMT

PC : NDTV 

ಅಮೇಥಿ : ಆರೋಪಿ ಚಂದನ ವರ್ಮಾ ಮೃತ ಪೂನಂ ಜೊತೆ ಬಲವಂತದಿಂದ ತೆಗೆದುಕೊಂಡಿದ್ದ ಚಿತ್ರಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರ ಮಾಡಲಾಗುತ್ತಿದೆ ಎಂದು ಅಮೇಥಿಯಲ್ಲಿ ಕೊಲೆಯಾದ ದಲಿತ ಕುಟುಂಬದ ಸಂಬಂಧಿಕರು ಆರೋಪಿಸಿದ್ದಾರೆ.

ಪೂನಂ ನೀಡಿದ್ದ ದೂರಿನ ಮೇರೆಗೆ ಪೋಲಿಸರು ಕ್ರಮವನ್ನು ತೆಗೆದುಕೊಂಡಿದ್ದರೆ ಈ ಕೊಲೆಗಳನ್ನು ತಪ್ಪಿಸಬಹುದಿತ್ತು ಎಂದೂ ಅವರು ಆರೋಪಿಸಿದ್ದಾರೆ.

ಗುರುವಾರ ದಲಿತ ಸಮುದಾಯಕ್ಕೆ ಸೇರಿದ ಶಿಕ್ಷಕ ಸುನೀಲಕುಮಾರ(35),ಅವರ ಪತ್ನಿ ಪೂನಂ ಹಾಗೂ ಅವರ ಐದು ಮತ್ತು ಎರಡು ವರ್ಷಗಳ ಇಬ್ಬರು ಮಕ್ಕಳನ್ನು ಭವಾನಿ ನಗರದಲ್ಲಿಯ ಅವರ ನಿವಾಸದಲ್ಲಿ ಆರೋಪಿ ವರ್ಮಾ ಗುಂಡಿಕ್ಕಿ ಹತ್ಯೆ ಮಾಡಿದ್ದ. ದಿಲ್ಲಿಗೆ ಪರಾರಿಯಾಗಲು ಯತ್ನಿಸುತ್ತಿದ್ದ ವರ್ಮಾನನ್ನು ಶುಕ್ರವಾರ ರಾತ್ರಿ ನೊಯ್ಡಾದ ಟೋಲ್ ಪ್ಲಾಝಾ ಬಳಿ ಪೋಲಿಸರು ಬಂಧಿಸಿದ್ದರು. ಮೃತರ ಅಂತ್ಯಸಂಸ್ಕಾರ ಶನಿವಾರ ಅವರ ಸ್ವಗ್ರಾಮದಲ್ಲಿ ನೆರವೇರಿದೆ.

ಪೋಲಿಸರ ಪ್ರಕಾರ, ವರ್ಮಾ ಪೂನಂ ಜೊತೆ ತನ್ನ ಸಂಬಂಧ ಹಳಸಿದ ಬಳಿಕ ಇಡೀ ಕುಟುಂಬವನ್ನು ಹತ್ಯೆ ಮಾಡಿದ್ದಾನೆ. ಆದರೆ ಇದನ್ನು ಅಲ್ಲಗಳೆದಿರುವ ಸಂಬಂಧಿಕರು ಎರಡು ತಿಂಗಳ ಹಿಂದೆ ಪೂನಂ ಸಲ್ಲಿಸಿದ್ದ ದೂರಿನ ಮೇಲೆ ಪೋಲಿಸರು ಕ್ರಮವನ್ನು ತೆಗೆದುಕೊಂಡಿದ್ದರೆ ಕುಟುಂಬವನ್ನು ಸಾವಿನಿಂದ ರಕ್ಷಿಸಬಹುದಿತ್ತು ಎಂದು ಹೇಳಿದ್ದಾರೆ.

‘ವರ್ಮಾ ತನ್ನೊಂದಿಗೆ ಮಾತನಾಡುವಂತೆ ನನ್ನ ಸೋದರಿಯನ್ನು ಒತ್ತಾಯಿಸುತ್ತಿದ್ದ. ಆತ ಬಲವಂತದಿಂದ ಆಕೆಯೊಂದಿಗೆ ಚಿತ್ರಗಳನ್ನು ತೆಗೆದುಕೊಂಡಿದ್ದ ’ ಎಂದು ಪೂನಂ ಸೋದರ ಭಾನು ತಿಳಿಸಿದರು.

ವರ್ಮಾನನ್ನು ಶನಿವಾರ ರಾಯಬರೇಲಿ ಜೈಲಿಗೆ ಸ್ಥಳಾಂತರಿಸಲಾಗಿದ್ದು, ಹತ್ಯೆಗಳಿಗೆ ಬಳಕೆಯಾಗಿದ್ದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳುವ ಸಂದರ್ಭದಲ್ಲಿ ಕಸ್ಟಡಿಯಿಂದ ತಪ್ಪಿಸಿಕೊಳ್ಳಲು ಆತ ಪ್ರಯತ್ನಿಸಿದ್ದ. ಸಬ್ - ಇನ್ಸ್ಪೆಕ್ಟರ್ ಬಳಿಯಿಂದ ಪಿಸ್ತೂಲನ್ನು ಕಿತ್ತುಕೊಳ್ಳಲು ಪ್ರಯತ್ನಿಸಿದಾಗ ಪೋಲಿಸರು ಆತನ ಕಾಲಿಗೆ ಗುಂಡು ಹಾರಿಸಿದ್ದರು.

ಅಪರಾಧವನ್ನು ವರ್ಮಾ ಒಪ್ಪಿಕೊಂಡಿದ್ದಾನೆ. ಕುಟುಂಬದ ಹತ್ಯೆಯ ಬಳಿಕ ಸ್ವಯಂ ಗುಂಡು ಹಾರಿಸಿಕೊಂಡು ಆತ್ಮಹತ್ಯೆಗೆ ಪ್ರಯತ್ನಿಸಿದ್ದನಾದರೂ ಗುರಿ ತಪ್ಪಿತ್ತು ಮತ್ತು ಮತ್ತೊಮ್ಮೆ ಪ್ರಯತ್ನಿಸಲು ಆತನಿಗೆ ಧೈರ್ಯವಿರಲಿಲ್ಲ ಎಂದು ಪೋಲಿಸರು ತಿಳಿಸಿದರು.

ಈ ನಡುವೆ ಮೃತರ ಸಂಬಂಧಿಗಳು ಶನಿವಾರ ಬಿಜೆಪಿ ಶಾಸಕ ಮನೋಜ ಪಾಂಡೆ ಅವರೊಂದಿಗೆ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರನ್ನು ಭೇಟಿಯಾಗಿದ್ದರು. ಘಟನೆಯ ಬಗ್ಗೆ ದುಃಖ ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ಮೃತರಿಗೆ ನ್ಯಾಯವನ್ನು ಒದಗಿಸುವ ಮತ್ತು ಆರೋಪಿ ವಿರುದ್ಧ ಅತ್ಯಂತ ಕಠಿಣ ಕ್ರಮದ ಭರವಸೆಯನ್ನು ನೀಡಿದ್ದಾರೆ ಎಂದು ಪಾಂಡೆ ಸುದ್ದಿಸಂಸ್ಥೆಗೆ ತಿಳಿಸಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News