ಓಲಾ ಇವಿ ಸ್ಕೂಟರ್ ಗಳನ್ನು ರಿಪೇರಿ ಮಾಡುವ ಬದಲು ಪೂರ್ಣ ಮರುಪಾವತಿ ಮಾಡಿ : ಸ್ಟ್ಯಾಂಡಪ್ ಕಾಮಿಡಿಯನ್ ಕುನಾಲ್ ಕಾಮ್ರ

Update: 2024-10-06 17:01 GMT

ಕುನಾಲ್ ಕಾಮ್ರ , ಭವೀಶ್ ಅಗರ್ವಾಲ್ | PC : Credit: PIT, X/@bhash

ಹೊಸದಿಲ್ಲಿ: ಓಲಾ ಸಂಸ್ಥಾಪಕ ಭವೀಶ್ ಅಗರ್ವಾಲ್ ಮತ್ತು ಸ್ಟ್ಯಾಂಡಪ್ ಕಾಮಿಡಿಯನ್ ಕುನಾಲ್ ಕಾಮ್ರ ನಡುವೆ ವಾಗ್ಯುದ್ಧ ನಡೆದಿದ್ದು, ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

ಓಲಾ ಸಂಸ್ಥಾಪಕ ಭವೀಶ್ ಅಗರ್ವಾಲ್, ಓಲಾ ಗೀಗಾ ಫ್ಯಾಕ್ಟರಿ ಎದುರು ರಿಪೇರಿಗಾಗಿ ಸಾಲಾಗಿ ನಿಂತಿರುವ ವಿದ್ಯುತ್ ಚಾಲಿತ ಸ್ಕೂಟರ್ ಗಳ ಚಿತ್ರವನ್ನು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದರು. ಆ ಪೋಸ್ಟ್ ಗೆ ಪ್ರತಿಕ್ರಿಯಿಸಿದ್ದ ಸ್ಟ್ಯಾಂಡಪ್ ಕಾಮಿಡಿಯನ್, “ಭಾರತೀಯರಿಗೆ ಧ್ವನಿ ಇದೆಯೆ? ಅವರು ಇದಕ್ಕೇ ಯೋಗ್ಯರೆ? ದ್ವಿಚಕ್ರ ವಾಹನಗಳು ಹಲವಾರು ದಿನಗೂಲಿ ನೌಕರರ ಜೀವನಾಡಿಯಾಗಿದೆ” ಎಂದು ಹೇಳಿದ್ದರು.

ಇಷ್ಟು ಮಾತ್ರವಲ್ಲದೆ, ಕೇಂದ್ರ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಯನ್ನು ಟ್ಯಾಗ್ ಮಾಡಿದ್ದ ಕುನಾಲ್ ಕಾಮ್ರ, “ಭಾರತೀಯರು ಈ ರೀತಿ ವಿದ್ಯುತ್ ಚಾಲಿತ ವಾಹನಗಳನ್ನು ಬಳಸುವುದೆ?” ಎಂದು ಪ್ರಶ್ನಿಸಿದ್ದರು. ಅಲ್ಲದೆ ಗ್ರಾಹಕ ವ್ಯವಹಾರಗಳ ಇಲಾಖೆಯ ಅಧಿಕೃತ ಖಾತೆಯಾದ @jagograhakjago ಅನ್ನೂ ಟ್ಯಾಗ್ ಮಾಡಿದ್ದ ಅವರು, “ಈ ಬಗ್ಗೆ ನಿಮ್ಮ ಪ್ರತಿಕ್ರಿಯೆಯೇನು?” ಎಂದು ಪ್ರಶ್ನಿಸಿದ್ದರು.

“ಓಲಾ ವಿದ್ಯುತ್ ಚಾಲಿತ ಸ್ಕೂಟರ್ ಬಗ್ಗೆ ಸಮಸ್ಯೆ ಇರುವವರು ಮೇಲಿನ ಎಲ್ಲರನ್ನೂ ಟ್ಯಾಗ್ ಮಾಡಿ ನಿಮ್ಮ ಪ್ರತಿಕ್ರಿಯೆಯನ್ನು ಇಲ್ಲಿ ಹಾಕಿ..” ಎಂದೂ ಬರೆದಿದ್ದರು.

ಈ ಪ್ರತಿಕ್ರಿಯೆಗೆ ಉತ್ತರಿಸಿರುವ ಭವೀಶ್ ಅಗರ್ವಾಲ್, “ಇಷ್ಟೊಂದು ಕಾಳಜಿ ವಹಿಸುವ ಕುನಾಲ್ ಕಾಮ್ರಾ ಅವರೆ, ಬನ್ನಿ ಮತ್ತು ನಮಗೆ ನೆರವು ನೀಡಿ! ನೀವು ಈ ಪೇಯ್ಡ್ ಟ್ವೀಟ್ ಗೆ ಪಡೆದಿರುವ ಹಣ ಅಥವಾ ನಿಮ್ಮ ಕಾಮಿಡಿ ವೃತ್ತಿ ಜೀವನದ ಫ್ಲಾಪ್ ಶೋನಲ್ಲಿ ಗಳಿಸಿರುವ ಹಣಕ್ಕಿಂತ ಹೆಚ್ಚು ಹಣವನ್ನು ನಾನು ನೀಡುತ್ತೇನೆ. ಅಥವಾ ಸುಮ್ಮನೆ ಕುಳಿತಿರಿ. ನಾವು ನೈಜ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸುವತ್ತ ಗಮನ ಹರಿಸೋಣ” ಎಂದು ತಿರಗೇಟು ನೀಡಿದ್ದಾರೆ.

ತನ್ನನ್ನು ಫ್ಲಾಪ್ ಕಾಮಿಡಿಯನ್ ಎಂದು ಲೇವಡಿ ಮಾಡಿದ ಅಗರ್ವಾಲ್ ಗೆ ಪ್ರತ್ಯುತ್ತರ ನೀಡಿರುವ ಕುನಾಲ್ ಕಾಮ್ರ, ತಮ್ಮ ಕಾರ್ಯಕ್ರಮಕ್ಕೆ ಕಿಕ್ಕಿರಿದು ನೆರೆದಿರುವ ಜನ ಚಪ್ಪಾಳೆ ತಟ್ಟುತ್ತಿರುವುದು ಹಾಗೂ ಸಂಭ್ರಮ ಪಡುತ್ತಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಮಾತ್ರವಲ್ಲದೆ ಓಲಾ ಸಂಸ್ಥಾಪಕ ಭವೀಶ್ ಅಗರ್ವಾಲ್ ರನ್ನು ದುರಹಂಕಾರಿ ಮತ್ತು ಕೀಳು ದರ್ಜೆಯ ವ್ಯಕ್ತಿ ಎಂದು ಛೇಡಿಸಿದ್ದಾರೆ.

ಈ ಮಾತಿಗೆ ಮತ್ತೆ ಪ್ರತಿಕ್ರಿಯಿಸಿರುವ ಅಗರ್ವಾಲ್, “ಏಟು ಬಿತ್ತಾ? ನೋವಾಯಿತಾ? ನಮ್ಮ ಸರ್ವೀಸ್ ಸೆಂಟರ್ ಗೆ ಬನ್ನಿ. ತುಂಬಾ ಕೆಲಸವಿದೆ. ನಿಮ್ಮ ಫ್ಲಾಪ್ ಶೋಗಳು ನೀಡುವುದಕ್ಕಿಂತ ಹೆಚ್ಚು ಮೊತ್ತವನ್ನು ನಾನು ಪಾವತಿಸುತ್ತೇನೆ” ಎಂದು ವ್ಯಂಗ್ಯವಾಡಿದ್ದಾರೆ. ಈ ಮಾತಿಗೆ ಮರು ಪ್ರತಿಕ್ರಿಯೆ ನೀಡಿರುವ ಕುನಾಲ್ ಕಮ್ರ, “ವಿದ್ಯುತ್ ಚಾಲಿತ ಓಲಾ ಸ್ಕೂಟರ್ ಅನ್ನು ಮರಳಿಸಲು ಬಯಸುವವರಿಗೆ ಹಾಗೂ ಕಳೆದ ನಾಲ್ಕು ತಿಂಗಳಲ್ಲಿ ಅದನ್ನು ಖರೀದಿಸಿರುವವರಿಗೆ ಸಂಪೂರ್ಣ ಮರುಪಾವತಿ ಮಾಡಿ” ಎಂದು ಸವಾಲೆಸೆದಿದ್ದಾರೆ.

ನನಗೆ ನಿಮ್ಮ ದುಡ್ಡು ಬೇಕಿಲ್ಲ. ಆದರೆ, ಜನರು ತಮ್ಮ ಕೆಲಸದ ಸ್ಥಳಗಳಿಗೆ ತೆರಳಲು ಸಾಧ್ಯವಾಗದಿರುವುದಕ್ಕೆ ನಿಮ್ಮ ಉತ್ತರದಾಯಿತ್ವದ ಅಗತ್ಯವಿದೆ ಎಂದು ಅವರು ಆಗ್ರಹಿಸಿದ್ದಾರೆ. ನಿಮಗೆ ಗ್ರಾಹಕರ ಬಗ್ಗೆ ನೈಜ ಕಾಳಜಿ ಇದೆ ಎಂಬುದನ್ನು ಪ್ರದರ್ಶಿಸಿ ಎಂದೂ ಕಿವಿಮಾತು ಹೇಳಿದ್ದಾರೆ. 

ಇದಕ್ಕೆ ಮತ್ತೆ ಪ್ರತಿಕ್ರಿಯಿಸಿರುವ ಅಗರ್ವಾಲ್, “ಸೇವಾ ವಿಳಂಬ ಎದುರಿಸುತ್ತಿರುವ ಗ್ರಾಹಕರಿಗೆ ನಮ್ಮ ಬಳಿ ಸಾಕಷ್ಟು ಪರಿಹಾರ ಯೋಜನೆಗಳಿವೆ. ಒಂದು ವೇಳೆ ನೀವು ಕಾಳಜಿಯುಳ್ಳ ವ್ಯಕ್ತಿಯಾಗಿದ್ದರೆ, ನಿಮಗಿದು ತಿಳಿದಿರುತ್ತಿತ್ತು. ನೀವು ಇದರಿಂದ ನುಣುಚಿಕೊಳ್ಳಲು ಪ್ರಯತ್ನಿಸಬೇಡಿ. ಅರಾಮದಾಯಕ ಕುರ್ಚಿಯಲ್ಲಿ ಕುಳಿತು ಟೀಕೆ ಮಾಡುವ ಬದಲು ಒಂದಿಷ್ಟು ನೈಜ ಕೆಲಸ ಮಾಡಿ” ಎಂದು ಹೇಳಿದ್ದಾರೆ.

ಇವರೀರ್ವರ ಚರ್ಚೆಯ ನಡುವೆ ಪ್ರವೇಶಿಸಿರುವ ವಿದ್ಯುತ್ ಚಾಲಿತ ಓಲಾ ಸ್ಕೂಟರ್ ಗ್ರಾಹಕರು, ಕಂಪನಿಯ ಸೇವಾ ಗುಣಮಟ್ಟದ ಬಗ್ಗೆ ದೂರಿದ್ದು, ಈ ಸಮಸ್ಯೆಗಳನ್ನು ಪರಿಹರಿಸುವಂತೆ ಅಗರ್ವಾಲ್ ರನ್ನು ಆಗ್ರಹಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News