ಬಿಜೆಪಿ ಗೋವಾದಲ್ಲಿ ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುತ್ತಿದೆ : ರಾಹುಲ್ ಗಾಂಧಿ
ಮುಂಬೈ : ಕೆಥೋಲಿಕ್ ಮಿಶನರಿ ಸಂತ ಫ್ರಾನ್ಸಿಸ್ ಝೇವಿಯರ್ ಕುರಿತು ಹೇಳಿಕೆಗಾಗಿ ರಾಜ್ಯಆರೆಸ್ಸೆಸ್ ಘಟಕದ ಮಾಜಿ ಮುಖ್ಯಸ್ಥ ಸುಭಾಷ್ ವೆಲಿಂಗಕರ್ ವಿರುದ್ಧ ಪ್ರತಿಭಟನೆಗಳಿಂದ ಗೋವಾದಲ್ಲಿ ಉಂಟಾಗಿರುವ ಉದ್ವಿಗ್ನತೆಗಳ ನಡುವೆಯೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಯವರು ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುತ್ತಿರುವುದಕ್ಕಾಗಿ ರವಿವಾರ ಬಿಜೆಪಿ ಮತ್ತು ಸಂಘ ಪರಿವಾರದ ವಿರುದ್ಧ ದಾಳಿ ನಡೆಸಿದ್ದಾರೆ.
ಗೋವಾದ ಆಕರ್ಷಣೆಯು ಅದರ ನೈಸರ್ಗಿಕ ಸೌಂದರ್ಯ ಹಾಗೂ ಅದರ ವೈವಿಧ್ಯಮಯ ಮತ್ತು ಸೌಹಾರ್ದಪೂರ್ಣ ಜನತೆಯ ಪ್ರೀತಿ ಮತ್ತು ಆತಿಥ್ಯದಲ್ಲಿದೆ ಎಂದು ಅವರು ಎಕ್ಸ್ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಪ್ರಮೋದ್ ಸಾವಂತ್ ನೇತೃತ್ವದ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿರುವ ರಾಹುಲ್, ದುರದೃಷ್ಟವಶಾತ್ ಬಿಜೆಪಿ ಆಡಳಿತದಡಿ ಈ ಸಾಮರಸ್ಯದ ಮೇಲೆ ದಾಳಿ ನಡೆಯುತ್ತಿದೆ. ಬಿಜೆಪಿ ಉದ್ದೇಶಪೂರ್ವಕವಾಗಿ ಕೋಮು ಉದ್ವಿಗ್ನತೆಯನ್ನು ಪ್ರಚೋದಿಸುತ್ತಿದೆ. ಮಾಜಿ ಆರೆಸ್ಸೆಸ್ ನಾಯಕರೋರ್ವರು ಮುಸ್ಲಿಮರ ವಿರುದ್ಧ ಆರ್ಥಿಕ ಬಹಿಷ್ಕಾರಕ್ಕೆ ಕರೆ ನೀಡುವ ಮೂಲಕ ಕ್ರೈಸ್ತರು ಮತ್ತು ಸಂಘ ಪರಿವಾರವನ್ನು ಪ್ರಚೋದಿಸುತ್ತಿದ್ದಾರೆ ಎಂದಿದ್ದಾರೆ.
ಭಾರತದಾದ್ಯಂತ ಉನ್ನತ ಮಟ್ಟದ ಬೆಂಬಲದೊಂದಿಗೆ ಸಂಘ ಪರಿವಾರವು ಇಂತಹ ಕೃತ್ಯಗಳನ್ನು ನಿರ್ಭೀತಿಯಿಂದ ಮುಂದುವರಿಸಿದೆ ಎಂದು ಹೇಳಿರುವ ರಾಹುಲ್, ಗೋವಾದಲ್ಲಿ ಬಿಜೆಪಿಯ ತಂತ್ರವು ಸ್ಪಷ್ಟವಾಗಿದೆ. ಅದು ಜನರನ್ನು ವಿಭಜಿಸುತ್ತಿದೆ ಮತ್ತು ಇದೇ ವೇಳೆ ಹಸಿರು ಭೂಮಿಯನ್ನು ಕಾನೂನುಬಾಹಿರವಾಗಿ ಪರಿವರ್ತಿಸುವ ಮತ್ತು ಪರಿಸರ ನಿಯಮಗಳನ್ನು ಉಲ್ಲಂಘಿಸುವ ಮೂಲಕ ರಾಜ್ಯದ ಪರಿಸರ ಸೂಕ್ಷ್ಮ ಪ್ರದೇಶಗಳ ದುರ್ಬಳಕೆಯಲ್ಲಿ ತೊಡಗಿಕೊಂಡಿದೆ. ಇದು ಗೋವಾದ ನೈಸರ್ಗಿಕ ಮತ್ತು ಸಾಮಾಜಿಕ ಪರಂಪರೆಯ ಮೇಲಿನ ದಾಳಿಯಾಗಿದೆ. ಬಿಜೆಪಿಯ ಪ್ರಯತ್ನಗಳಿಗೆ ಸವಾಲು ಒಡ್ಡಲಾಗುವುದು. ಗೋವಾ ಮತ್ತು ಇಡೀ ಭಾರತದ ಜನರು ಈ ವಿಭಜಕ ಕಾರ್ಯಸೂಚಿಯನ್ನು ನೋಡುತ್ತಿದ್ದಾರೆ ಹಾಗೂ ಒಗ್ಗಟ್ಟಾಗಿದ್ದಾರೆ ಎಂದು ಹೇಳಿದ್ದಾರೆ.