ಚುನಾಯಿತ ಮಹಿಳಾ ಪ್ರತಿನಿಧಿಯ ವಜಾ ಪ್ರಕರಣವನ್ನು ಲಘುವಾಗಿ ಪರಿಗಣಿಸುವಂತಿಲ್ಲ: ಸುಪ್ರೀಂಕೋರ್ಟ್

Update: 2024-10-06 16:00 GMT

ಸುಪ್ರೀಂಕೋರ್ಟ್ | PC : PTI 

ಹೊಸದಿಲ್ಲಿ : ಸಾರ್ವಜನಿಕ ಕ್ಷೇತ್ರದಲ್ಲಿನ ಚುನಾಯಿತ ಪ್ರತಿನಿಧಿಯನ್ನು ಅದರಲ್ಲೂ ವಿಶೇಷವಾಗಿ ಗ್ರಾಮೀಣ ಕ್ಷೇತ್ರಗಳ ಮಹಿಳೆಯರನ್ನು ಹುದ್ದೆಯಿಂದ ತೆಗೆದುಹಾಕುವುದನ್ನು ಲಘುವಾಗಿ ಪರಿಗಣಿಸಬಾರದೆಂದು ಸುಪ್ರೀಂಕೋರ್ಟ್ ತಿಳಿಸಿದೆ ಹಾಗೂ ಮಹಾರಾಷ್ಟ್ರದ ಗ್ರಾಮಪಂಚಾಯತ್‌ವೊಂದರ ಮಹಿಳಾ ಸರಪಂಚರೊಬ್ಬರನ್ನು ಹುದ್ದೆಯಿಂದ ವಜಾಗೊಳಿಸಿದ ಆದೇಶವನ್ನು ಬದಿಗಿರಿಸಿದೆ.

ಸರಪಂಚ ಹುದ್ದೆಗೆ ಮಹಿಳೆಯೊಬ್ಬರು ಆಯ್ಕೆಯಾಗಿರುವುದನ್ನು ಕೆಲವು ಗ್ರಾಮಸ್ಥರಿಗೆ ಸಹಿಸಲು ಸಾಧ್ಯವಾಗುವುದಿಲ್ಲವೆಂಬುದಕ್ಕೆ ಇದೊಂದು ದೊಡ್ಡ ನಿದರ್ಶನವೆಂದು ನ್ಯಾಯಮೂರ್ತಿಗಳಾದ ಸೂರ್ಯಕಾಂತ ಹಾಗೂ ಉಜ್ಜಲ್ ಭೂಯಾನ್ ಅವರನ್ನೊಳಗೊಂಡ ನ್ಯಾಯಪೀಠ ಅಭಿಪ್ರಾಯಿಸಿತು.

ತಮ್ಮ ಪರವಾಗಿ ಮಹಿಳಾ ಸರಪಂಚರು ನಿರ್ಧಾರಗಳನ್ನ ಕೈಗೊಳ್ಳುತ್ತಾರೆ ಹಾಗೂ ತಾವು ಆಕೆಯ ನಿರ್ದೇಶನಗಳನ್ನು ಪಾಲಿಸಬೇಕೆಂಬ ವಾಸ್ತವವನ್ನು ಒಪ್ಪಿಕೊಳ್ಳಲು ಕೆಲವು ಗ್ರಾಮಸ್ಥರು ಸಿದ್ಧರಿಲ್ಲದೆ ಇರುವ ಪ್ರಕರಣ ಇದಾಗಿದೆ.

ಸಾರ್ವಜನಿಕ ಹುದ್ದೆಗಳು, ಅದರಲ್ಲೂ ವಿಶೇಷವಾಗಿ ಚುನಾಯಿತ ಸಂಸ್ಥೆಗಳಲ್ಲಿ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ಸೇರಿದಂತೆ ಲಿಂಗ ಸಮಾನತೆ ಹಾಗೂ ಮಹಿಳಾ ಸಬಲೀಕರಣದ ಪ್ರಗತಿಪರ ಗುರಿಯನ್ನು ಸಾಧಿಸಲು ಒಂದು ದೇಶವಾಗಿ ನಾವು ಪ್ರಯತ್ನಿಸುತ್ತಿರುವಾಗ, ಇಂತಹ ವಿದ್ಯಮಾನಗಳು ಪರಿಸ್ಥಿತಿಯನ್ನು ಇನ್ನಷ್ಟು ಜಟಿಲಗೊಳಿಸುತ್ತದೆ. ತಳಮಟ್ಟದಲ್ಲಿ ನಡೆದಿರುವ ಇಂತಹ ಘಟನೆಗಳು ದೇಶದ ಸಾಧನೆಯಲ್ಲಾಗಿರುವ ಪ್ರಗತಿಯ ಮೇಲೆ ಕರಾಳ ನೆರಳು ಕವಿಯುವಂತೆ ಮಾಡಿದೆ ಎಂದು ನ್ಯಾಯಪೀಠ ತಿಳಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News