ಜಂತರ್ ಮಂತರ್‌ನಲ್ಲಿ ಉಪವಾಸ ಮುಷ್ಕರ ನಡೆಸಲು ಅನುಮತಿ ನಿರಾಕರಣೆ : ಪರ್ಯಾಯ ಸ್ಥಳ ಕೋರಿದ ಸೋನಮ್ ವಾಂಗ್ಚುಕ್
ಹೊಸದಿಲ್ಲಿ : ಲಡಾಖ್ ಅನ್ನು ಸಂವಿಧಾನದ ಆರನೇ ಪರಿಚ್ಛೇದಕ್ಕೆ ಸೇರಿಸುವಂತೆ ಆಗ್ರಹಿಸಿ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ನಡೆಸಲು ಹೊಸದಿಲ್ಲಿಯ ಜಂತರ್ ಮಂತರ್ನಲ್ಲಿ ಅವಕಾಶ ನಿರಾಕರಿಸಿರುವ ಬಗ್ಗೆ ಪರಿಸರ ಹೋರಾಟಗಾರ ಸೋನಮ್ ವಾಂಗ್ಚುಕ್ ರವಿವಾರ ಹತಾಶೆ ವ್ಯಕ್ತಪಡಿಸಿದ್ದಾರೆ.
ಜಂತರ್ ಮಂತರ್ನಲ್ಲಿ ಅನಿರ್ದಿಷ್ಟಾವಧಿ ಉಪವಾಸ ಮುಷ್ಕರ ನಡೆಸುವ ತನ್ನ ಮನವಿಯನ್ನು ತಿರಸ್ಕರಿಸಿ ದಿಲ್ಲಿ ಪೊಲೀಸರು ಕಳುಹಿಸಿದ ಪತ್ರದ ಪ್ರತಿಯನ್ನು ವಾಂಗ್ಚುಕ್ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಹಂಚಿಕೊಂಡಿದ್ದಾರೆ.
ಇನ್ನೊಂದು ನಿರಾಕರಣೆ, ಇನ್ನೊಂದು ಹತಾಶೆ. ಅಂತಿಮವಾಗಿ ಇಂದು ಬೆಳಗ್ಗೆ ನಾವು ಪ್ರತಿಭಟನೆಗಳಿಗೆ ನಿಯೋಜಿತವಾದ ಅಧಿಕೃತದ ಸ್ಥಳದ ಕುರಿತ ಈ ನಿರಾಕರಣೆ ಪತ್ರವನ್ನು ಸ್ವೀಕರಿಸಿದೆವು ಎಂದು ಅವರು ಹೇಳಿದ್ದಾರೆ.
‘‘ಮುಷ್ಕರ ನಡೆಸಲು ಜಂತರ್ ಮಂತರ್‌ನಲ್ಲಿ
ಅನುಮತಿ ನೀಡದೇ ಇದ್ದರೆ, ಯಾವ ಸ್ಥಳದಲ್ಲಿ ಅನುಮತಿ ನೀಡಲಾಗುವುದು ಎಂದು ನಮಗೆ ತಿಳಿಸಿ. ನಾವು ಎಲ್ಲಾ ಕಾನೂನಿಗೆ ಬದ್ಧರಾಗಿದ್ದೇವೆ ಹಾಗೂ ನಮ್ಮ ಸಮಸ್ಯೆಗಳನ್ನು ಶಾಂತಿಯುತವಾದ ರೀತಿಯಲ್ಲಿ ವ್ಯಕ್ತಪಡಿಸುತ್ತೇವೆ. ಮಹಾತ್ಮಾ ಗಾಂಧಿ ಅವರ ದೇಶದಲ್ಲಿ ಅವರ ದಾರಿಗಳನ್ನು ಅನುಸರಿಸಲು ಇಷ್ಟೊಂದು ಕಷ್ಟ ಯಾಕೆ?. ದಾರಿ ಇರಲೇ ಬೇಕು’’ ಎಂದು ಅವರು ಹೇಳಿದ್ದಾರೆ.
ತುರ್ತಾಗಿ ಕಳುಹಿಸಲಾದ ಮನವಿಯನ್ನು ಸ್ವೀಕರಿಸಿದ್ದೇವೆ. ಸಭೆ ಸೇರುವ ಬಗ್ಗೆ ನಿಗದಿತ ಸಮಯ ಮಿತಿಯನ್ನು ಉಲ್ಲೇಖಿಸಿಲ್ಲ ಎಂದು ದಿಲ್ಲಿ ಪೊಲೀಸರು ಪತ್ರದಲ್ಲಿ ಹೇಳಿದ್ದಾರೆ. ಮಾರ್ಗಸೂಚಿ ಪ್ರಕಾರ ಜಂತರ್ ಮಂತರ್ನಲ್ಲಿ ಯಾವುದೇ ಪ್ರತಿಭಟನೆ ನಡೆಸಲು ಕನಿಷ್ಠ 10 ದಿನಗಳ ಮುನ್ನ ಅರ್ಜಿ ಸಲ್ಲಿಸಬೇಕು. ಅಲ್ಲದೆ ಪ್ರತಿಭಟನೆಯನ್ನು ಬೆಳಗ್ಗೆ 10 ಗಂಟೆಯಿಂದ ಸಂಜೆ 5 ಗಂಟೆ ಒಳಗೆ ನಡೆಸಬೇಕು ಎಂದು ಪೊಲೀಸರು ತಿಳಿಸಿದ್ದಾರೆ.
ಪ್ರತಿಭಟನಾಕಾರರನ್ನು ಪ್ರತಿನಿಧಿಸಿರುವ ಲೇಹ್ ಅಪೆಕ್ಸ್ ಬಾಡಿಯ ಸಂಚಾಲಕ ಜಿಗಮತ್ ಪಲ್ಜೋರ್, ಮುಷ್ಕರ ನಡೆಸಲು ನಾವು ಪರ್ಯಾಯ ಸ್ಥಳದ ಬಗ್ಗೆ ಆಲೋಚಿಸುತ್ತಿದ್ದೇವೆ. ಈ ಬಗ್ಗೆ ಪೊಲೀಸರು ಹಾಗೂ ಸರಕಾರದೊಂದಿಗೆ ಮಾತುಕತೆ ನಡೆಸುತ್ತಿದ್ದೇವೆ ಎಂದಿದ್ದಾರೆ.