ಸಾವಿರಾರು ಎನ್‌ಜಿಒಗಳ ಪರವಾನಿಗೆಗಳ ರದ್ದತಿಗಳ ನಡುವೆ ವಿದೇಶಿ ದೇಣಿಗೆ ಸ್ವೀಕಾರಕ್ಕೆ ಅನುಮತಿಗೆ ಅರ್ಜಿ ಸಲ್ಲಿಸಿದ ರಾಮ ಮಂದಿರ ಟ್ರಸ್ಟ್
ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಸುಮಾರು 900 ಕೋಟಿ ರೂ.ಗಳನ್ನು ವೆಚ್ಚ ಮಾಡಿದ ಬಳಿಕ ತನ್ನ ಖಜಾನೆಯಲ್ಲಿ ಇನ್ನೂ 3,000 ಕೋಟಿ ರೂ.ಗಳನ್ನು ಹೊಂದಿರುವ ಮಂದಿರ ಟ್ರಸ್ಟ್ ಇದೀಗ ವಿದೇಶಿ ದೇಣಿಗೆಗಳ ಸ್ವೀಕಾರಕ್ಕೆ ಅನುಮತಿಯನ್ನು ಕೋರಿ ಅರ್ಜಿಯನ್ನು ಸಲ್ಲಿಸಿದೆ ಎಂದು theprint.in ವರದಿ ಮಾಡಿದೆ.
ಮಂದಿರದ ನಿರ್ಮಾಣ ಮತ್ತು ವ್ಯವಸ್ಥಾಪನೆಗಾಗಿ ಸ್ಥಾಪಿಸಲ್ಪಟ್ಟಿರುವ ಶ್ರೀ ರಾಮ ಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ವಿದೇಶಿ ದೇಣಿಗೆಗಳ ನಿಯಂತ್ರಣ ಕಾಯ್ದೆ (ಎಫ್‌ಸಿಆರ್‌ಎ)ಯಡಿ ನೋಂದಣಿಗಾಗಿ ಅರ್ಜಿಯನ್ನು ಸಲ್ಲಿಸಿದೆ. ಸರಕಾರದಿಂದ ಎಫ್‌ಸಿಆರ್‌ಎ ಪರವಾನಿಗೆಗಳು ರದ್ದುಗೊಂಡಿರುವ ಎನ್‌ಜಿಒಗಳ ಸಂಖ್ಯೆ ಹೆಚ್ಚುತ್ತಿರುವ ನಡುವೆಯೇ ಈ ಬೆಳವಣಿಗೆ ನಡೆದಿದೆ. ಇದು ತನ್ನನ್ನು ಟೀಕಿಸುವ ಸಂಘಟನೆಗಳನ್ನು ಹತ್ತಿಕ್ಕುವ ಬಿಜೆಪಿ ಸರಕಾರದ ಕ್ರಮದ ಭಾಗವಾಗಿದೆ ಎಂದು ರಾಜಕೀಯ ವಿಶ್ಲೇಷಕರು ಮತ್ತು ನಾಗರಿಕ ಹಕ್ಕುಗಳ ಗುಂಪುಗಳು ಅಭಿಪ್ರಾಯಿಸಿವೆ.
ಜನವರಿ 2020ರಲ್ಲಿ 10,000ಕ್ಕೂ ಅಧಿಕ ಎನ್‌ಜಿಒಗಳ ಎಫ್‌ಸಿಆರ್‌ಎ ಪರವಾನಿಗೆಗಳನ್ನು ರದ್ದುಗೊಳಿಸಿದ್ದ ಸರಕಾರವು ಜನವರಿ 2022ರಲ್ಲಿ ಮದರ್ ತೆರೇಸಾರ ಮಿಶನರೀಸ್ ಆಫ್ ಚಾರಿಟಿ,ಆಕ್ಸ್‌ಫಾಮ್ ಇಂಡಿಯಾ,ದಿಲ್ಲಿ ವಿವಿ, ಐಐಟಿ ದಿಲ್ಲಿ ಮತ್ತು ಜಾಮಿಯಾ ಮಿಲ್ಲಿಯಾ ವಿವಿಗಳಂತಹ ಪ್ರತಿಷ್ಠಿತ ಸಂಸ್ಥೆಗಳು ಸೇರಿದಂತೆ ಸುಮಾರು 6,000 ಎಫ್‌ಸಿಆರ್‌ಎ ಪರವಾನಿಗೆಗಳನ್ನು ರದ್ದುಗೊಳಿಸಿತ್ತು. ತೀರ ಇತ್ತೀಚಿಗೆ ಸೆಂಟರ್ ಫಾರ್ ಪಾಲಿಸಿ ರೀಸರ್ಚ್‌ನಂತಹ ಚಿಂತನ ಚಾವಡಿಗಳು ಹಾಗೂ ಮಕ್ಕಳು,ಮಹಿಳೆಯರು ಮತ್ತು ಲಿಂಗಾಧಾರಿತ ಹಿಂಸಾಚಾರದಲ್ಲಿ ಬದುಕುಳಿದರಿಗಾಗಿ ಕೆಲಸ ಮಾಡುತ್ತಿರುವ ಮೂರು ಎನ್‌ಜಿಒಎಗಳ ಪರವಾನಿಗೆಗಳನ್ನೂ ರದ್ದುಗೊಳಿಸಲಾಗಿದೆ ಎಂದು wire.in ವರದಿ ಮಾಡಿದೆ.
ಪರವಾನಿಗೆ ರದ್ದತಿಗಳು ಮತ್ತು ಎಫ್‌ಸಿಆರ್‌ಎ ನಿಯಮಾವಳಿಗೆ ತಿದ್ದುಪಡಿಗಳ ನಡುವೆ ಎನ್‌ಜಿಒಗಳು ಅಪಾರವಾದ ಅನುಸರಣೆ ಹೊರೆಯನ್ನು ಎದುರಿಸುತ್ತಿವೆ. ಎಫ್‌ಸಿಆರ್‌ಎ ಪರವಾನಿಗೆ ರದ್ದುಗೊಂಡ ಸಂಸ್ಥೆಗಳು ವಿದೇಶಿ ಹಣವನ್ನು ಸ್ವೀಕರಿಸುವ ಅರ್ಹತೆಯನ್ನು ಕಳೆದುಕೊಳ್ಳುವುದರ ಜೊತೆಗೆ ವಿದೇಶಿ ದೇಣಿಗೆಗಳಿಂದ ಅವು ಸೃಷ್ಟಿಸಿರುವ ಎಲ್ಲ ಆಸ್ತಿಗಳನ್ನೂ ಸರಕಾರವು ವಶಪಡಿಸಿಕೊಳ್ಳುತ್ತದೆ.
ಸರಕಾರದ ಈ ಕ್ರಮವು ಎಷ್ಟೊಂದು ಭಾರೀ ಪರಿಣಾಮವನ್ನು ಬೀರುತ್ತದೆ ಎಂದರೆ ಯಾರಾದರೂ ದೂರದಿಂದಲೇ ನಕಾರಾತ್ಮಕ ಗಮನವನ್ನು ಸೆಳೆಯಬಹುದಾದ ಯಾವುದನ್ನಾದರೂ ಸಹ ಮಾಡುವುದನ್ನು ಸಹ ಅದು ತಡೆಯುತ್ತದೆ. ಪರಿಸ್ಥಿತಿಯು ದೇಶಿಯ ದಾನಿಗಳ ಮೇಲೆಯೂ ಏಕರೂಪವಾಗಿ ಪರಿಣಾಮವನ್ನು ಬೀರುತ್ತದೆ,ಪರವಾನಿಗೆ ರದ್ದುಗೊಂಡ ಸಂಸ್ಥೆಗೆ ದೇಣಿಗೆಯನ್ನು ನೀಡಿದ್ದರಿಂದ ತಾವೂ ತಪ್ಪಿತಸ್ಥರು ಎಂದು ಅವರು ಚಿಂತಿಸುವಂತೆ ಮಾಡುತ್ತದೆ ಎಂದು ಸೆಂಟರ್ ಫಾರ್ ಸೋಷಿಯಲ್ ಇಂಪ್ಯಾಕ್ಟ್ ಆ್ಯಂಡ್ ಫಿಲಾಂಥ್ರಪಿಯ ನಿರ್ದೇಶಕಿ ಇಂಗ್ರಿಡ್ ಶ್ರೀನಾಥ ಹೇಳಿದರು.
ಇಂತಹ ರದ್ದತಿಗಳುಂಟು ಮಾಡುವ ಅಹಿತಕರ ಪರಿಣಾಮಗಳ ಕುರಿತಂತೆ ಅವರು,‘ಒಟ್ಟಾರೆಯಾಗಿ ಇದು ನಮ್ಮ ಪ್ರಜಾಪ್ರಭುತ್ವದ ಬೇರುಗಳಿಗೇ ಬೆದರಿಕೆಯೊಡ್ಡುತ್ತದೆ,ಏಕೆಂದರೆ ಧ್ವನಿ ಉಡುಗಿಸಲಾಗಿರುವ ನಾಗರಿಕ ಸಮಾಜವು ತನ್ನ ಪಾತ್ರವನ್ನು ನಿರ್ವಹಿಸಲು ಸಾಧ್ಯವಾಗುವುದಿಲ್ಲ. ಸರಕಾರ,ಉದ್ಯಮಗಳು ಮತ್ತು ಮಾಧ್ಯಮಗಳನ್ನು ಉತ್ತರದಾಯಿಯಾಗಿಸಲು ಅದಕ್ಕೆ ಸಾದ್ಯವಾಗುವುದಿಲ್ಲ. ಶೋಷಿತರ ಪರವಾಗಿ ಧ್ವನಿಯೆತ್ತಲು ಅಥವಾ ಸರಕಾರದ ನೀತಿಗಳು ಅಂತರ್ಗತ ಮತ್ತು ಪ್ರಜಾಸತ್ತಾತ್ಮಕವಾಗಿರುತ್ತವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಸಾಧ್ಯವಾಗುವುದಿಲ್ಲ’ ಎಂದರು.
ಈ ನಡುವೆ ಮಂದಿರ ಟ್ರಸ್ಟ್‌ನ ಪ್ರಧಾನ ಕಾರ್ಯದರ್ಶಿ ಚಂಪತ್ ರಾಯ್ ಅವರು,‘ಮಂದಿರ ನಿರ್ಮಾಣಕ್ಕಾಗಿ ವಿದೇಶಿ ದೇಣಿಗೆಗಳನ್ನು ಸ್ವೀಕರಿಸಲು ಟ್ರಸ್ಟ್ ಈವರೆಗೆ ಸರಕಾರಕ್ಕೆ ಯಾವುದೇ ಅರ್ಜಿಯನ್ನು ಸಲ್ಲಿಸಿರಲಿಲ್ಲ. ಅದಕ್ಕೆ ಕಾನೂನಾತ್ಮಕ ಕಾರಣಗಳಿದ್ದವು. ಈಗ ನಾವು ಎಲ್ಲ ಔಪಚಾರಿಕತೆಗಳನ್ನು ಪೂರೈಸಿದ್ದೆವೆ ಮತ್ತು ಎಫ್‌ಸಿರ್‌ಎ ಅಡಿ ಟ್ರಸ್ಟ್‌ನ ನೋಂದಣಿಗಾಗಿ ಅರ್ಜಿಯನ್ನು ಸಲ್ಲಿಸಿದ್ದೇವೆ’ ಎಂದು ತಿಳಿಸಿದ್ದಾರೆ.