ಕಾನೂನು-ವ್ಯವಸ್ಥೆ ನಿಭಾಯಿಸಲು ಆಗದಿದ್ದರೆ ಅಮಿತ್ ಶಾ ರಾಜೀನಾಮೆ ಕೊಡಲಿ : ಅರವಿಂದ್‌ ಕೇಜ್ರಿವಾಲ್ ವಾಗ್ದಾಳಿ

Update: 2024-12-03 14:55 GMT

 ಅರವಿಂದ್‌ ಕೇಜ್ರಿವಾಲ್ | PC : PTI 

ಹೊಸದಿಲ್ಲಿ: ಬಿಜೆಪಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧದ ದಾಳಿಯನ್ನು ಮಂಗಳವಾರ ತೀವ್ರಗೊಳಿಸಿರುವ ಆಮ್ ಆದ್ಮಿ ಪಕ್ಷ (ಆಪ್)ದ ಮುಖ್ಯಸ್ಥ ಅರವಿಂದ್‌ ಕೇಜ್ರಿವಾಲ್, ರಾಷ್ಟ್ರ ರಾಜಧಾನಿಯ ‘‘ಕ್ಷೀಣಿಸುತ್ತಿರುವ’’ ಕಾನೂನು ಮತ್ತು ವ್ಯವಸ್ಥೆ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗದಿದ್ದರೆ ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಹೇಳಿದ್ದಾರೆ.

‘‘ಎಲ್ಲೆಡೆ ಹಾಹಾಕಾರ ಪರಿಸ್ಥಿತಿಯಿದ್ದು, ಅಪರಾಧಗಳ ಸಂಖ್ಯೆ ಹೆಚ್ಚುತ್ತಿದೆ. ಜನರು ಮನೆಯಿಂದ ಹೊರಗೆ ಕಾಲಿಡಲು ಹೆದರುತ್ತಿದ್ದಾರೆ’’ ಎಂದು ಪೀತಾಂಪುರ ಕೊಳೆಗೇರಿಯಲ್ಲಿ ತನ್ನ ಮನೆಯ ಹೊರಗಡೆ ಕೊಲೆಗೀಡಾಗಿರುವ ಯುವಕನೊಬ್ಬನ ಸಂಬಂಧಿಕರನ್ನು ಭೇಟಿಯಾದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಹೇಳಿದರು.

‘‘ಈ ಪ್ರದೇಶದಲ್ಲಿ ಏಳರಿಂದ ಎಂಟರಷ್ಟಿದ್ದ ಸ್ಥಳೀಯ ಪಾತಕಿಗಳು ಇಬ್ಬರು ಯುವಕರ ಮೇಲೆ ದಾಳಿ ಮಾಡಿದ್ದಾರೆ. ಅವರ ಪೈಕಿ ಓರ್ವನಾಗಿರುವ ಮನೀಶ್‌ರಿಗೆ ದುಷ್ಕರ್ಮಿಗಳು ಹಲವು ಬಾರಿ ಇರಿದಿದ್ದಾರೆ. ಅವರನ್ನು ಸರಿಯಾದ ಸಮಯದಲ್ಲಿ ಆಸ್ಪತ್ರೆಗೆ ಕರೆದುಕೊಂಡು ಹೋಗಲು ಸಾಧ್ಯವಾಗದ ಕಾರಣಕ್ಕಾಗಿ ಅವರು ಮೃತಪಟ್ಟಿದ್ದಾರೆ. ಇನ್ನೋರ್ವ ಸಂತ್ರಸ್ತ ಬದುಕಿದ್ದಾರೆ. ಪೊಲೀಸರು ಸಾಕ್ಷಿಯಾಗಿ ಅವರ ಹೇಳಿಕೆಯನ್ನು ಇನ್ನು ಪಡೆದುಕೊಂಡಿಲ್ಲ’’ ಎಂದು ಕೇಜ್ರಿವಾಲ್ ನುಡಿದರು.

‘‘ದಿಲ್ಲಿಯ ಕಾನೂನು ಮತ್ತು ವ್ಯವಸ್ಥೆಯನ್ನು ನಿಭಾಯಿಸಲು ಅಮಿತ್ ಶಾ ಅವರಿಗೆ ಸಾಧ್ಯವಾಗದಿದ್ದರೆ ಮತ್ತು ದೇಶಾದ್ಯಂತ ರಾಜಕೀಯ ಪ್ರವಾಸಗಳನ್ನು ಮಾಡುವುದು ಮಾತ್ರ ಅವರ ಉದ್ದೇಶವಾಗಿದ್ದರೆ, ಅವರು ರಾಜೀನಾಮೆ ಕೊಡಬೇಕು’’ ಎಂದು ದಿಲ್ಲಿಯ ಮಾಜಿ ಮುಖ್ಯಮಂತ್ರಿ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News