ದಿಲ್ಲಿಯಲ್ಲಿ ವಾಯುಗುಣಮಟ್ಟ ತೀವ್ರ ಕುಸಿತ | ಆನಂದ ವಿಹಾರ್‌ಲ್ಲಿ ಅತ್ಯಧಿಕ ವಾಯುಮಾಲಿನ್ಯ
ಹೊಸದಿಲ್ಲಿ :ದೀಪಾವಳಿಯ ದಿನವಾದ ಗುರುವಾರ ವಾಯುಗುಣಮಟ್ಟ ಸೂಚ್ಯಂಕವು (ಏಕ್ಯೂಐ) ‘ತೀವ್ರ’ತೆಯ ಶ್ರೇಣಿಗೆ ಕುಸಿದಿದೆ. ಕಳೆದ ವರ್ಷದ ದೀಪಾವಳಿಯಂದು ದಿಲ್ಲಿಯಲ್ಲಿ ವಾಯುಗುಣಮಟ್ಟವು ಎಂಟು ವರ್ಷಗಳಲ್ಲಿ ಅತ್ಯುತ್ತಮ ಗುಣಮಟ್ಟವನ್ನು ದಾಖಲಿಸಿದ್ದು, ಸರಾಸರಿ ಎಕ್ಯುಐ 218ರಷ್ಟಿತ್ತು.
ಬುಧವಾರ ಬೆಳಗ್ಗೆ 8:00 ಗಂಟೆಗೆ ವಾಯುಗುಣಮಟ್ಟವು 274 ಆಗಿದ್ದು, ಗುರುವಾರ ಬೆಳಗ್ಗೆ 7:00 ಗಂಟೆಯ ಸುಮಾರಿಗೆ ಅದು 329ಕ್ಕೆ ಕುಸಿದಿದೆ ಎಂದು ಕೇಂದ್ರೀಯ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ತಿಳಿಸಿದೆ.
ದಕ್ಷಿಣ-ಆಗ್ನೇಯದಿಂದ ವಾಯವ್ಯದತ್ತ ವಾಯುಮಾರುತಗಳು ಪಥವನ್ನು ಬದಲಾಯಿಸಿದ್ದು, ಇದರ ಪರಿಣಾಮವಾಗಿ ಪಂಜಾಬ್, ಹರ್ಯಾಣ ರಾಜ್ಯಗಳ ಹೊಲಗಳಲ್ಲಿ ಕೂಳೆಗಳನ್ನು ಸುಡುವುದರಿಂದ ಉಂಟಾಗುವ ಹೊಗೆಯನ್ನು ಅವು ರಾಜಧಾನಿ ದಿಲ್ಲಿಗೆ ಹೊತ್ತು ತರುತ್ತಿವೆ ಎಂದು ಸ್ಕೈಮೆಟ್ ಹವಾಮಾನ ಸೇವೆಗಳ ಅಧಿಕಾರಿ ಮಹೇಶ್ ಪಲಾವಟ್ ತಿಳಿಸಿದ್ದಾರೆ. ಅಲ್ಲದೆ ಪಟಾಕಿಗಳನ್ನು ಸಿಡಿಸುವುದರಿಂದ ದಿಲ್ಲಿಯಲ್ಲಿ ವಾಯುಗುಣಮಟ್ಟವು ಇನ್ನಷ್ಟು ಹದಗೆಡಲಿದೆ ಎಂದವರು ಎಚ್ಚರಿಕೆ ನೀಡಿದ್ದಾರೆ.
ದಿಲ್ಲಿಯ ಆನಂದ ವಿಹಾರ್ ಪ್ರದೇಶವು ಅತ್ಯಂತ ಕಳಪೆ ವಾಯುಗುಣಮಟ್ಟವನ್ನು ದಾಖಲಿಸಿದ್ದು, ಅಲ್ಲಿ ಎಕ್ಯೂಐ 419 ಆಗಿತ್ತು. ವಝೀರ್‌ಪುರ (396),ಜಹಾಂಗೀರ್‌ಪುರಿ (395), ಆರ್.ಕೆ.ಪುರಂ (384), ಪಂಜಾಬಿ ಬಾಘ್ (369), ಅೋಂಕ್ ವಿಹಾರ್ (368), ಮುಂಡ್ಕಾ (367), ದ್ವಾರಕಾ -ಸೆಕ್ಟರ್ 8 (359), ರೋಹಿಣಿ (357) ಹಾಗೂ ಬುರಾರಿ ಕ್ರಾಸಿಂಗ್ (353) ತೀವ್ರ ವಾಯುಗುಣಮಟ್ಟ ಕುಸಿತವನ್ನು ಕಂಡ ರಾಜಧಾನಿಯ ಇತರ ಪ್ರದೇಶಗಳಾಗಿವೆ.
ವಾಯುಗುಣಮಟ್ಟ ಸೂಚ್ಯಂಕವು 401-500 ಆಗಿದ್ದರೆ ಅತ್ಯಂತ ತೀವ್ರ, 301-400 ಅತ್ಯಂತ ಕಳಪೆ, 201-300 ಕಳಪೆ, 101-200 ಸಾಧಾರಣ, 51-100 ತೃಪ್ತಿಕರ ಹಾಗೂ 0-50 ಉತ್ತಮ ಎಂದು ಪರಿಗಣಿಸಲಾಗಿದೆ.