ಅನಂತ್ ಅಂಬಾನಿ ವಿವಾಹ ಪೂರ್ವ ಸಂಭ್ರಮಾಚರಣೆ: ಜಾಮ್ನಗರ್ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ವಿಮಾನ ಹಾರಾಟಕ್ಕೆ ಸವಲತ್ತು ಒದಗಿಸಿದ್ದ ಐಎಎಫ್
ಹೊಸದಿಲ್ಲಿ: ಇತ್ತೀಚೆಗೆ ರಿಲಯನ್ಸ್ ಇಂಡಸ್ಟ್ರೀಸ್ ಮುಖ್ಯಸ್ಥ ಮುಕೇಶ್ ಅಂಬಾನಿ ಅವರ ಪುತ್ರ ಅನಂತ್ ಅಂಬಾನಿ ಅವರ ವಿವಾಹಪೂರ್ವ ಆಚರಣೆಗಳು ಜಾಮ್ನಗರ್‌ನಲ್ಲಿ ನಡೆದಾಗ ಆಗಮಿಸಿದ ಜಗತ್ತಿನ ಗಣ್ಯಾತಿಗಣ್ಯರ ಕಾರಣ ಅಲ್ಲಿನ ವಿಮಾನ ನಿಲ್ದಾಣದ ಮೂಲಕ ಬಹಳಷ್ಟು ಹೆಚ್ಚಾದ ವಿಮಾನ ಹಾರಾಟಗಳನ್ನು ನಿಭಾಯಿಸಲು ಭಾರತೀಯ ವಾಯು ಪಡೆ ಕೂಡ ಕೈಜೋಡಿಸಿತ್ತೆಂಬ ಅಂಶ ಬಯಲಾಗಿದೆ ಎಂದು thehindu.com ವರದಿ ಮಾಡಿದೆ.
ರಕ್ಷಣಾ ಕಾರ್ಯದರ್ಶಿಗೆ ಪತ್ರ ಬರೆದಿದ್ದ ರಿಯಲನ್ಸ್ ಗ್ರೂಪ್ ಫೆಬ್ರವರಿ 23 ರಿಂದ ಮಾರ್ಚ್ 4ರ ತನಕ ವಿಮಾನ ನಿಲ್ದಾಣವು ದಿನದ 24 ಗಂಟೆಯೂ ಕಾರ್ಯಾಚರಿಸುವಂತಾಗಲು ವಾಯುಪಡೆಯ ಸಹಾಯ ಕೋರಿತ್ತು. ರಕ್ಷಣಾ ಕಾರ್ಯದರ್ಶಿಯು ವಾಯು ಪಡೆ ಮುಖ್ಯಸ್ಥರಿಗೆ ಈ ಕುರಿತು ಪತ್ರ ಬರೆದಿತ್ತು. ನಂತರ ಜಾಮ್ನಗರ್ ಏರ್ ಬೇಸ್ ದಿನದ 24 ಗಂಟೆಯೂ ಕಾರ್ಯಾಚರಿಸಲು ಆರಂಭಿಸಿತ್ತು. ರಿಲಯನ್ಸ್ ಸಂಸ್ಥೆ ಆರಂಭದಲ್ಲಿ 30ರಿಂದ 40 ವಿಮಾನಗಳ ಹಾರಾಟದ ಬಗ್ಗೆ ತಿಳಿಸಿದ್ದರೂ ವಾಸ್ತವವಾಗಿ 600ಕ್ಕೂ ಹೆಚ್ಚು ವಿಮಾನಗಳ ಹಾರಾಟ ಐದು ದಿನಗಳ ಅವಧಿಯಲ್ಲಿ ನಡೆಸಲಾಗಿತ್ತು.
ಜಾಮ್ನಗರ್ ಡುಯಲ್ ಯೂಸರ್ ಏರ್‌ಫೀಲ್ಡ್ ಆಗಿದ್ದು ಇಲ್ಲಿನ ನಾಗರಿಕ ವಿಮಾನ ಹಾರಾಟಗಳನ್ನು ವಿಮಾನ ನಿಲ್ದಾಣಗಳ ಪ್ರಾಧಿಕಾರದ ಸಹಯೋಗದೊಂದಿಗೆ ಐಎಎಫ್ ನಿರ್ವಹಿಸುತ್ತದೆ.
ಪ್ರಾಥಮಿಕವಾಗಿ ವಾಯು ಪಡೆಯ ಬಳಕೆಗಾಗಿ ಇರುವುದರಿಂದ ಜಾಮ್ನಗರ್ ವಿಮಾನ ನಿಲ್ದಾಣದ ಸಿವಿಲ್ ಏಪ್ರನ್ ತೀರಾ ಚಿಕ್ಕದಾಗಿದ್ದು ಮೂರರಿಂದ ನಾಲ್ಕು ವಿಮಾನಗಳನ್ನು ನಿರ್ವಹಿಸಬಹುದಾಗಿದೆ.
ಐಎಎಫ್ ಹೆಚ್ಚುವರಿ ಸಿಬ್ಬಂದಿಗಳನ್ನು ನೇಮಿಸಿ ರಸ್ತೆಗಳು, ಟ್ಯಾಕ್ಸಿ ಟ್ರ್ಯಾಕ್‌ಗಳನ್ನು ನಿರ್ಮಿಸಿತ್ತಲ್ಲದೆ. ರನ್-ವೇ ಪಕ್ಕದ ಜಾಗಗಳನ್ನೂ ತೆರವುಗೊಳಿಸಿ ಗಣ್ಯರು ಆಗಮಿಸುವ ದೊಡ್ಡ ವಿಮಾನಗಳಿಗೆ ಯಾವುದೇ ತೊಂದರೆಯಾಗದಂತೆ ನೋಡಿಕೊಂಡಿತ್ತು. ಹತ್ತು ಪಿಟ್ ಸ್ಟಾಪ್‌ಗಳನ್ನೂ ನಿರ್ಮಿಸಲಾಗಿತ್ತು.
ರಿಯಲನ್ಸ್ ಈ ಉದ್ದೇಶಗಳಿಗೆ ಒದಗಿಸಿದ್ದ ಸಿಬ್ಬಂದಿ ಕಡಿಮೆಯಾಗಿದ್ದರಿಂದ ಐಎಎಫ್ ತಾನೇ ಹೆಚ್ಚುವರಿ ಸಿಬ್ಬಂದಿಗಳನ್ನು ಒದಗಿಸಿತ್ತು. ಮೇಲಾಗಿ ಮುಂಬೈ ವಿಮಾನ ನಿಲ್ದಾಣವು ಶೆಡ್ಯೂಲ್ಡ್ ಅಲ್ಲದ ವಿಮಾನಗಳ ಹಾರಾಟಕ್ಕೆ ನಾಲ್ಕು ಗಂಟೆಗಳ ಕಾಲ ಮುಚ್ಚಿದ್ದರಿಂದ ಐಎಎಫ್ ತನ್ನ ಟೆಕ್ನಿಕಲ್ ಪ್ರದೇಶವನ್ನು ತೆರೆದಿಟ್ಟುಕೊಳ್ಳಬೇಕಾಯಿತು.