ಬಾಂಗ್ಲಾದೇಶದಲ್ಲಿ ಪ್ರತಿಭಟನೆ ನಡೆಸಿದ್ದ ಮುಸ್ಲಿಂ ಕುಟುಂಬವನ್ನು ಹಿಂದೂ ಕುಟುಂಬ ಎಂದು ಸುಳ್ಳು ಸುದ್ದಿ ಬಿತ್ತರಿಸಿದ್ದ ANI ಸುದ್ದಿ ಸಂಸ್ಥೆ

Update: 2024-08-14 08:33 GMT

ಹೊಸದಿಲ್ಲಿ: ಬಾಂಗ್ಲಾದೇಶದ ಮಾಜಿ ಪ್ರಧಾನಿ ಶೇಕ್ ಹಸೀನಾ ಪದಚ್ಯುತಗೊಂಡ ಬೆನ್ನಿಗೇ ಅಲ್ಲಿ ಹಿಂಸಾಚಾರ ಭುಗಿಲೆದ್ದಿದೆ. ಈ ಹಿಂಸಾಚಾರದ ಕುರಿತು ವರದಿ ಮಾಡಿದ್ದ ANI ಸುದ್ದಿ ಸಂಸ್ಥೆ, ಬಾಂಗ್ಲಾದೇಶದ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಕುಟುಂಬವೊಂದು ತಮ್ಮ ನಾಪತ್ತೆಯಾಗಿರುವ ಪುತ್ರನನ್ನು ಹುಡುಕಿ ಕೊಡುವಂತೆ ಪ್ರತಿಭಟನೆ ನಡೆಸಿದೆ ಎಂದು ವಿಡಿಯೊವೊಂದನ್ನು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿತ್ತು.

ಆ ವಿಡಿಯೊದಲ್ಲಿ ವಯೋವೃದ್ಧ ತಂದೆಯೊಬ್ಬರು, “ನಾನು ನನ್ನ ಜೀವವನ್ನೇ ಕೊಡುತ್ತೇನೆ. ಆದರೆ, ನನ್ನ ಮಗುವಿಗೆ ನ್ಯಾಯ ದೊರೆಯಬೇಕಿದೆ. ನನ್ನ ಮಗು ಎಲ್ಲಿ? ನನ್ನ ಮಗುವಿನ ಕುರಿತು ವಿಚಾರಿಸಲು ಮನೆಯಿಂದ ಮನೆಗೆ ತೆರಳುತ್ತಿದ್ದೇನೆ. ಆದರೆ, ಯಾರೂ ನನ್ನ ಮಾತುಗಳನ್ನು ಕೇಳಿಸಿಕೊಳ್ಳುತ್ತಿಲ್ಲ” ಎಂದು ಪ್ರತಿಭಟಿಸುತ್ತಿರುವುದು ಸೆರೆಯಾಗಿದೆ.

ಆದರೆ, ಈ ವಿಡಿಯೊದಲ್ಲಿರುವ ವ್ಯಕ್ತಿಯು ಹಿಂದೂ ಸಮುದಾಯದ ವ್ಯಕ್ತಿಯಲ್ಲ; ಬದಲಿಗೆ, ಮುಸ್ಲಿಂ ಸಮುದಾಯದ ವ್ಯಕ್ತಿ ಎಂಬುದು ಬೆಳಕಿಗೆ ಬಂದಿದೆ. ಇದರ ಬೆನ್ನಿಗೇ ANI ಸುದ್ದಿ ಸಂಸ್ಥೆ ಆ ವಿಡಿಯೊವನ್ನು ತನ್ನ ಎಕ್ಸ್ ಸಾಮಾಜಿಕ ಮಾಧ್ಯಮ ಖಾತೆಯಿಂದ ಅಳಿಸಿ ಹಾಕಿತ್ತು. ಆದರೆ, ಹಲವಾರು ಸಾಮಾಜಿಕ ಮಾಧ್ಯಮ ಬಳಕೆದಾರರು ಅದೇ ವಿಡಿಯೊವನ್ನು ಹಂಚಿಕೊಂಡು, ಬಾಂಗ್ಲಾದೇಶದಲ್ಲಿ ಅಲ್ಪಸಂಖ್ಯಾತ ಹಿಂದೂಗಳ ಮೇಲೆ ದೌರ್ಜನ್ಯ ನಡೆಯುತ್ತಿದೆ ಎಂದು ಆರೋಪಿಸುತ್ತಿದ್ದಾರೆ. ಆದರೆ, ಇದು ಸುಳ್ಳು ಸುದ್ದಿ.

2013ರಲ್ಲಿ ನಾಪತ್ತೆಯಾಗಿದ್ದ ತಮ್ಮ ಪುತ್ರನಿಗಾಗಿ ಮುಹಮ್ಮದ್ ಬಬೂಲ್ ಹವಲ್ದಾರ್ ಎಂಬವರು ಪ್ರತಿಭಟಿಸಿದ್ದಾರೆ. ಆದರೆ, ಈ ದೃಶ್ಯದ ತುಣುಕನ್ನು ಹಿಂದೂ ವ್ಯಕ್ತಿ ತಮ್ಮ ಪುತ್ರ ಮನೆಗೆ ಮರಳಬೇಕು ಎಂದು ರೋಧಿಸುತ್ತಿದ್ದಾರೆ ಎಂದು ತಪ್ಪಾಗಿ ವರದಿ ಮಾಡಲಾಗಿದೆ.

ಈ ಕುರಿತು ಎಕ್ಸ್ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿರುವ ಆಲ್ಟ್ ನ್ಯೂಸ್ ನ ಸಹ ಸಂಸ್ಥಾಪಕ ಮುಹಮ್ಮದ್ ಝುಬೇರ್, “ಈ ಸುಳ್ಳು ಸುದ್ದಿಯನ್ನು ಮೊದಲು ಹಂಚಿಕೊಂಡಿದ್ದು ಸ್ಮಿತಾ ಪ್ರಕಾಶ್ ಅವರ ANI ಸುದ್ದಿ ಸಂಸ್ಥೆ. ಆದರೆ, ಅದು ಸುಳ್ಳು ಸುದ್ದಿ ಎಂದು ಖಾತ್ರಿಯಾದ ನಂತರ, ಆ ಪೋಸ್ಟ್ ಅನ್ನು ಅಳಿಸಿ ಹಾಕಿತ್ತು. ಆದರೆ, ದಾರಿ ತಪ್ಪಿಸುವ ಶೀರ್ಷಿಕೆಯೊಂದಿಗೆ ಹಂಚಿಕೊಳ್ಳಲಾಗಿರುವ ಆ ವಿಡಿಯೊವನ್ನು ಬಲಪಂಥೀಯ ಖಾತೆಗಳು ಹಾಗೂ ANI ಸುದ್ದಿ ಜಾಲವನ್ನು ಅವಲಂಬಿಸಿರುವ ಸುದ್ದಿ ವಾಹಿನಿಗಳು ಹಂಚಿಕೊಳ್ಳುತ್ತಿವೆ. ತಲೆಗೆ ಟೋಪಿ ಧರಿಸಿಕೊಂಡಿರುವ ವ್ಯಕ್ತಿಯ ಚಿತ್ರವು ನಾಪತ್ತೆಯಾಗಿರುವ ತನ್ನ ಪುತ್ರ ಮುಹಮ್ಮದ್ ಸುನಿ ಹವಲ್ದಾರ್ ಗಾಗಿ ಪ್ರತಿಭಟಿಸುತ್ತಿರುವ ವ್ಯಕ್ತಿಯ ಚಿತ್ರವಾಗಿದೆ. ತಮ್ಮ ಕುಟುಂಬದ ಸದಸ್ಯ ನಾಪತ್ತೆಯಾಗಿರುವುದನ್ನು ಪ್ರತಿಭಟಿಸಲು ನೆರೆದಿರುವುದೂ ಕೂಡಾ ಮುಸ್ಲಿಂ ಕುಟುಂಬಗಳಾಗಿವೆ” ಎಂದು ಬರೆದುಕೊಂಡಿದ್ದಾರೆ.

ಈ ಪೋಸ್ಟ್ ಗೆ ಪ್ರತಿಕ್ರಿಯಿಸಿರುವ Tind Posting ಎಂಬ ಎಕ್ಸ್ ಸಾಮಾಜಿಕ ಮಾಧ್ಯಮ ಖಾತೆಯೊಂದು, “ದಕ್ಷಿಣ ಏಶ್ಯಾದ ಮುಂಚೂಣಿ ಸುದ್ದಿ ಸಂಸ್ಥೆಯೊಂದು ಸುದ್ದಿಯನ್ನು ಹಂಚಿಕೊಳ್ಳುವಾಗ, ಸೂಕ್ತವಾಗಿ ಪರಿಶೀಲಿಸಲು ಸಾಧ್ಯವಾಗಲಿಲ್ಲವೇ? ನಾನು ನಂಬುವುದಿಲ್ಲ” ಎಂದು ಹೇಳಿದೆ.

ಈ ಸುಳ್ಳು ಇಲ್ಲೇ ಬಯಲಾಗಿದೆ ಎಂದು ಭಾವಿಸಿದರೂ, ಫೇಸ್ ಬಕ್ ಹಾಗೂ ಇನ್ಸ್ಟಾಗ್ರಾಮ್ ಫೀಡ್ ಗಳಲ್ಲಿ ಈ ಸುದ್ದಿ ಪ್ರಸಾರ ಮುಂದುವರಿದೇ ಇದೆ ಎಂದೂ ಹೇಳಿದ್ದಾರೆ.

ಇಷ್ಟು ಹೊತ್ತಿಗಾಗಲೇ ವಾಟ್ಸಾಪ್ ಯೂನಿವರ್ಸಿಟಿಯು ಈ ಕುರಿತು ಕೃತಿಯೊಂದನ್ನೇ ರಚಿಸಿರಬಹುದು ಎಂದು ಅದು ವ್ಯಂಗ್ಯವಾಡಿದೆ.

ಸಾಮಾಜಿಕ ಮಾಧ್ಯಮಗಳಿಗೆ ಮೀಸಲಾಗಿದ್ದ ಸುಳ್ಳು ಸುದ್ದಿ ಪ್ರಸರಣವೀಗ ಮುಖ್ಯ ವಾಹಿನಿ ಮಾಧ್ಯಮಗಳನ್ನೂ ಆವರಿಸಿರುವುದು, ಸುದ್ದಿಯ ವಿಶ್ವಾಸಾರ್ಹತೆ ಕುರಿತು ಜನರಲ್ಲಿ ಸಂಶಯ ಮೂಡುವಂತೆ ಮಾಡಿದೆ. ಇದು ಮುಂದೊಮ್ಮೆ ಸಾಮಾಜಿಕ ಪ್ರಕ್ಷುಬ್ಧತೆಗೆ ಕಾರಣವಾಗುವ ಅಪಾಯವಿದೆ ಎಂದು ಸಾಮಾಜಿಕ ಹೋರಾಟಗಾರರು, ರಾಜಕೀಯ ವಿಶ್ಲೇಷಕರು ಆತಂಕ ವ್ಯಕ್ತಪಡಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - jafar sadik

contributor

Byline - ವಾರ್ತಾಭಾರತಿ

contributor

Similar News