ಅಣ್ಣಾಮಲೈ ಫೋಟೊ ಕಟ್ಟಿ ಮೇಕೆಯ ಬಲಿ; ಕಠಿಣ ಕ್ರಮಕ್ಕೆ ಬಿಜೆಪಿ ಆಗ್ರಹ

Update: 2024-06-06 16:14 GMT

Photograb : X \@arvinth_e

ಚೆನ್ನೈ : ತಮಿಳುನಾಡು ಬಿಜೆಪಿಯ ರಾಜ್ಯಾಧ್ಯಕ್ಷ ಕೆ. ಅಣ್ಣಾಮಲೈ ಅವರ ಫೋಟೋವನ್ನು ಮೇಕೆಯೊಂದರ ಕೊರಳಿಗೆ ಕಟ್ಟಿ ಅದನ್ನು ನಡು ರಸ್ತೆಯಲ್ಲಿ ಬಲಿಕೊಡುತ್ತಿರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಇದನ್ನು ರಾಜ್ಯ ಬಿಜೆಪಿ ಘಟಕ ಖಂಡಿಸಿದೆ.

ಈ ಘಟನೆ ಎಲ್ಲಿ ನಡೆದಿದೆ ಹಾಗೂ ಈ ವೀಡಿಯೋವನ್ನು ಯಾರು ಪೋಸ್ಟ್ ಮಾಡಿದ್ದಾರೆ ಎಂದು ತತ್ಕ್ಷಣ ತಿಳಿದು ಬಂದಿಲ್ಲ. ಅಲ್ಲದೆ, ವೀಡಿಯೊದ ಸತ್ಯಾಸತ್ಯತೆಯನ್ನು ಕೂಡ ಇದುವರೆಗೆ ಪರಿಶೀಲಿಸಲಾಗಿಲ್ಲ ಎಂದು ಹೇಳಲಾಗುತ್ತಿದೆ.

ಈ ಘಟನೆ ಕುರಿತು ಪ್ರತಿಕ್ರಿಯಿಸಿರುವ ಅಣ್ಣಾಮಲೈ ಅವರು, ಡಿಎಂಕೆ ಕಾರ್ಯಕರ್ತರು ತನ್ನ ವಿರುದ್ಧ ಆಕ್ರೋಶಗೊಂಡಿದ್ದರೆ, ಅವರು ತನ್ನ ಬಳಿ ಬರಬಹುದಿತ್ತು ಎಂದಿದ್ದಾರೆ.

ತಮಿಳುನಾಡು ಬಿಜೆಪಿಯ ಉಪಾದ್ಯಕ್ಷ ಹಾಗೂ ಪಕ್ಷದ ವಕ್ತಾರ ನಾರಾಯಣ ತ್ರಿಪಾಠಿ ಅವರು ಈ ವೀಡಿಯೊವನ್ನು ತನ್ನ ‘ಎಕ್ಸ್’ನಲ್ಲಿ ಅಪ್ಲೋಡ್ ಮಾಡಿದ್ದು, ಘಟನೆ ಕುರಿತು ಖಂಡನೆ ವ್ಯಕ್ತಪಡಿಸಿದ್ದಾರೆ. ರಾಜ್ಯ ಬಿಜೆಪಿ ಈ ವೀಡಿಯೊವನ್ನು ತನ್ನ ಅಧಿಕೃತ ‘ಎಕ್ಸ್’ ಹ್ಯಾಂಡಲ್ ನಲ್ಲಿ ಮರು ಪೋಸ್ಟ್ ಮಾಡಿದೆ.

‘‘ನಡು ರಸ್ತೆಯಲ್ಲಿ ಮೇಕೆಯನ್ನು ಕೊಲ್ಲುತ್ತಿರುವುದು ಹಾಗೂ ಅಣ್ಣಾಮಲೈ ವಿರುದ್ಧ ಘೋಷಣೆಗಳನ್ನು ಕೂಗುತ್ತಿರುವುದು, ಅವರ ಸೋಲನ್ನು ಸಂಭ್ರವಿಸುತ್ತಿರುವುದು ತಮಿಳುನಾಡಿನಲ್ಲಿ ಬಿಜೆಪಿಯ ಬೆಳವಣಿಗೆಗೆ ರಾಜಕೀಯ ಪಕ್ಷಗಳು ಹೆದರುತ್ತಿವೆ ಎಂಬುದನ್ನು ಸ್ಪಷ್ಟವಾಗಿ ತೋರಿಸಿದೆ. ಇದು ಅತ್ಯಂತ ಕೆಳ ಮಟ್ಟದ ರಾಜಕೀಯವನ್ನು ಪ್ರತಿಬಿಂಬಿಸಿದೆ’’ ಎಂದು ತ್ರಿಪಾಠಿ ಹೇಳಿದ್ದಾರೆ.

‘‘ವೀಡಿಯೊದಲ್ಲಿ ಪುಟ್ಟ ಮಕ್ಕಳು ಅಣ್ಣಾಮಲೈ ವಿರುದ್ಧ ಘೋಷಣೆಗಳನ್ನು ಕೂಗುವುದನ್ನು ಕಾಣಬಹುದು. ಮಕ್ಕಳಲ್ಲಿ ದ್ವೇಷ ಹಾಗೂ ಕೋಪವನ್ನು ಉತ್ತೇಜಿಸುವುದು ಖಂಡನಾರ್ಹ. ಇದು ಪ್ರತಿಪಕ್ಷಗಳ ಕ್ಷುಲ್ಲಕ, ಕೊಳಕು ರಾಜಕೀಯವನ್ನು ಪ್ರತಿಬಿಂಬಿಸಿದೆ. ಈ ಘಟನೆ ಕುರಿತು ಕಠಿಣ ಕ್ರಮ ತೆಗೆದುಕೊಳ್ಳುವಂತೆ ಹಾಗೂ ಈ ಕ್ರಿಮಿನಲ್ಗಳನ್ನು ಬಂಧಿಸುವಂತೆ ನಾವು ಆಗ್ರಹಿಸುತ್ತೇವೆ’’ ಎಂದು ನಾರಾಯಣ ತ್ರಿಪಾಠಿ ಹೇಳಿದ್ದಾರೆ. 

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News