ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿತ | ಕಳೆದ ಮೂರು ವಾರಗಳಲ್ಲಿ 13ನೇ ಘಟನೆ
ಸಹರ್ಸಾ: ಬುಧವಾರ ಬಿಹಾರದಲ್ಲಿ ಮತ್ತೊಂದು ಸೇತುವೆ ಕುಸಿದು ಬಿದ್ದಿದ್ದು, ಕಳೆದ ಮೂರು ವಾರಗಳಲ್ಲಿ ನಡೆದಿರುವ 13ನೇ ಸೇತುವೆ ಕುಸಿತ ಪ್ರಕರಣ ಇದಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಹರ್ಸಾ ಜಿಲ್ಲೆಯ ಮಹಿಷಿ ಗ್ರಾಮದಲ್ಲಿನ ಸೇತುವೆ ಬುಧವಾರ ಬೆಳಗ್ಗೆ ಕುಸಿದು ಬಿದ್ದಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿರುವ ಸಹರ್ಸಾ ಜಿಲ್ಲೆಯ ಹೆಚ್ಚುವರಿ ಜಿಲ್ಲಾಧಿಕಾರಿ ಜ್ಯೋತಿ ಕುಮಾರ್, "ಅದೊಂದು ಸಣ್ಣ ಸೇತುವೆಯಾಗಿರಬಹುದು ಅಥವಾ ಒಡ್ಡು ದಾರಿಯಾಗಿರಬಹುದು. ಜಿಲ್ಲೆಯ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಘಟನೆಯ ಕುರಿತು ನಾವು ಮತ್ತಷ್ಟು ಮಾಹಿತಿಯನ್ನು ಕಲೆ ಹಾಕಲು ಪ್ರಯತ್ನಿಸುತ್ತಿದ್ದೇವೆ" ಎಂದು ಹೇಳಿದ್ದಾರೆ.
ಈ ಘಟನೆಯಲ್ಲಿ ಯಾರಿಗೂ ಗಾಯ ಅಥವಾ ಜೀವಹಾನಿಯಾದ ವರದಿಯಾಗಿಲ್ಲ.
ಕಳೆದ ಕೆಲವು ವಾರಗಳಿಂದ ಸರಣಿಯೋಪಾದಿಯಾಗಿ ಕುಸಿಯುತ್ತಿರುವ ಸೇತುವೆಗಳ ಸಂಬಂಧ ಬಿಹಾರ ಸರಕಾರ ಇದುವರೆಗೆ ಕನಿಷ್ಠ 15 ಮಂದಿ ಇಂಜಿನಿಯರ್‌ಗಳನ್ನು ಅಮಾನತುಗೊಳಿಸಿದೆ. ಸಿವಾನ್, ಸರಣ್, ಮಧುಬನಿ, ಅರಾರಿಯ, ಪೂರ್ವ ಚಂಪಾರಣ್ ಹಾಗೂ ಕಿಶನ್‌ಗಂಜ್ ಸೇರಿದಂತೆ ವಿವಿಧ ಜಿಲ್ಲೆಗಳ ಹಲವು ಸೇತುವೆಗಳು ಕುಸಿದು ಬಿದ್ದಿವೆ.