ಬಿಜೆಪಿಯ ಭ್ರಷ್ಟಾಚಾರ ಅನಾವರಣಗೊಂಡಿದೆ: ರಾಹುಲ್ ಗಾಂಧಿ
ಹೊಸದಿಲ್ಲಿ : ಕೇಂದ್ರದಲ್ಲಿ ಅಧಿಕಾರದಲ್ಲಿರುವ ಬಿಜೆಪಿಯು ಭ್ರಷ್ಟಾಚಾರದಲ್ಲಿ ತೊಡಗಿದೆ ಎಂದು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಗುರುವಾರ ಆರೋಪಿಸಿದ್ದಾರೆ.
ಸುಪ್ರೀಂ ಕೋರ್ಟ್ ಚುನಾವಣಾ ಬಾಂಡ್ ಗಳನ್ನು ರದ್ದುಗೊಳಿಸಿದ ಬಳಿಕ ಅವರು ಈ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
‘‘ನರೇಂದ್ರ ಮೋದಿಯ ಭ್ರಷ್ಟ ನೀತಿಗಳಿಗೆ ಸಾಕ್ಷಿ ಈಗ ನಿಮ್ಮ ಮುಂದಿದೆ. ಲಂಚ ಮತ್ತು ಕಮಿಶನ್ ಸ್ವೀಕರಿಸಲು ಬಿಜೆಪಿಯು ಚುನಾವಣಾ ಬಾಂಡ್ ಗಳನ್ನು ಮಾಧ್ಯಮವನ್ನಾಗಿ ಮಾಡಿಕೊಂಡಿತ್ತು. ಇಂದು ಅದು ಸಾಬೀತುಗೊಂಡಿದೆ’’ ಎಂದು ರಾಹುಲ್ ಗಾಂಧಿ ಸಾಮಾಜಿಕ ಮಾಧ್ಯಮ ‘ಎಕ್ಸ್’ನಲ್ಲಿ ಬರೆದಿದ್ದಾರೆ.
ಸುಪ್ರೀಂ ಕೋರ್ಟ್ ತೀರ್ಪಿಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ‘‘ಮೋದಿ ಸರಕಾರದ ಕಪ್ಪು ಹಣ ಪರಿವರ್ತನಾ ಯೋಜನೆಯನ್ನು ಸುಪ್ರೀಂ ಕೋರ್ಟ್ ಇಂದು ವಿಫಲಗೊಳಿಸಿದೆ’’ ಎಂದು ಬಣ್ಣಿಸಿದರು.
‘‘ಸುಪ್ರೀಂ ಕೋರ್ಟ್ ನ ಮಾತು ಕೇಳಿಯಾದರೂ ಇಂಥ ಕೆಟ್ಟ ಯೋಚನೆಗಳಿಗೆ ಮೋದಿ ಸರಕಾರವು ಇನ್ನಾದರೂ ಪೂರ್ಣ ವಿರಾಮ ಹಾಕುವುದೆಂದು ನಾವು ಆಶಿಸುತ್ತೇವೆ. ಆ ಮೂಲಕ ಪ್ರಜಾಪ್ರಭುತ್ವ, ಪಾರದರ್ಶಕತೆ ಮತ್ತು ಸ್ಪರ್ಧೆಯಲ್ಲಿ ಸಮಾನತೆ ಉಳಿಯುತ್ತದೆಂದು ಭಾವಿಸುತ್ತೇವೆ’’ ಎಂದು ಅವರು ‘ಎಕ್ಸ್’ನಲ್ಲಿ ಬರೆದಿದ್ದಾರೆ.