ಉತ್ತರಪ್ರದೇಶ | ಸಂಭಲ್ ಘಟನೆ ಬೆನ್ನಲ್ಲೇ ವಿವಾದದಲ್ಲಿ ಮತ್ತೊಂದು ಮಸೀದಿ
ಲಕ್ನೋ: ಉತ್ತರ ಪ್ರದೇಶದ ಸಂಭಲ್ ಮಸೀದಿ ವಿವಾದದ ಬೆನ್ನಲ್ಲೇ ಬದೌನ್ ಜಿಲ್ಲೆಯ ಮಸೀದಿಯೊಂದು ವಿವಾದದ ಕೇಂದ್ರವಾಗಿದೆ. ಮೊಘಲ್ ದೊರೆಗಳು ಶಿವ ದೇವಾಲಯವನ್ನು ಕೆಡವಿ ಮಸೀದಿ ನಿರ್ಮಿಸಿದ್ದಾರೆ ಎಂದು ಹಿಂದೂ ಪರ ಅರ್ಜಿದಾರರು ಕೋರ್ಟ್ ಮೊರೆ ಹೋಗಿದ್ದಾರೆ.
ತ್ವರಿತ ನ್ಯಾಯಾಲಯದ ನ್ಯಾಯಾಧೀಶರಾದ ಅಮಿತ್ ಕುಮಾರ್ ಅವರು ಈ ಕುರಿತು ವಿಚಾರಣೆ ನಡೆಸಿದ್ದಾರೆ. ಜಾಮಾ ಮಸೀದಿ ಇಂತೇಜಾಮಿಯಾ ಸಮಿತಿಯ ಪರ ವಕೀಲ ಅನ್ವರ್ ಆಲಂ ಮಸೀದಿಯ ಪರವಾಗಿ ವಾದ ಮಂಡಿಸಿದ್ದು, ಶಿವ ದೇವಾಲಯವನ್ನು ಕೆಡವಿ ಮಸೀದಿ ನಿರ್ಮಿಸಲಾಗಿದೆ ಎಂಬ ವಾದವನ್ನು ತಳ್ಳಿ ಹಾಕುವಂತೆ ಮನವಿ ಮಾಡಿದ್ದಾರೆ. ಈ ಕುರಿತು ಹೆಚ್ಚಿನ ವಿಚಾರಣೆಯನ್ನು ನ್ಯಾಯಾಲಯ ಡಿ.10ಕ್ಕೆ ಮುಂದೂಡಿದೆ.
ನೀಲಕಂಠ ದೇವಾಲಯ ಕೆಡವಿ ಜಾಮಾ ಮಸೀದಿಯನ್ನು ನಿರ್ಮಿಸಲಾಗಿದೆ ಎಂದು ಹಿಂದೂ ಮಹಾಸಭಾದ ಮುಖಂಡ ಮುಖೇಶ್ ಪಟೇಲ್ ಎರಡು ವರ್ಷಗಳ ಹಿಂದೆ ಜಿಲ್ಲಾ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಸಂಬಂಧ ರಾಜ್ಯ ಸರ್ಕಾರದ ಪರ ವಕೀಲರು ಈಗಾಗಲೇ ತಮ್ಮ ವಾದವನ್ನು ಮಂಡಿಸಿದ್ದರು. ಜಾಮಾ ಮಸೀದಿ ಇರುವ ಸ್ಥಳದಲ್ಲಿ ನೀಲಕಂಠ ದೇವಾಲಯವಿದೆ ಎಂದು ಹೇಳಲು ಸಾಕಷ್ಟು ಪುರಾವೆಗಳಿವೆ. ಅಲ್ಲಿ ವಿಗ್ರಹಗಳಿವೆ, ಹಳೆಯ ಕಂಬಗಳಿವೆ. ಮುಸ್ಲಿಂ ದೊರೆಗಳು ದೇವಾಲಯವನ್ನು ಕೆಡವಿ ಶಿವಲಿಂಗವನ್ನು ಎಸೆದಿದ್ದಾರೆ ಎಂದು ಪಟೇಲ್ ಆರೋಪಿಸಿದ್ದಾರೆ.
13ನೇ ಶತಮಾನದ ದಿಲ್ಲಿ ಸುಲ್ತಾನರ ಮೊದಲ ರಾಜ ಕುತುಬ್-ಉದ್-ದಿನ್-ಐಬಕ್ ಅವಧಿಯಲ್ಲಿ ನೀಲಕಂಠ ದೇವಾಲಯವನ್ನು ಕೆಡವಲಾಯಿತು ಎಂದು ಹಿಂದೂ ವಾದಿಗಳು ಪ್ರತಿಪಾದಿಸುತ್ತಾರೆ.
ಮಸೀದಿ ಸಮಿತಿಯ ಪರ ವಕೀಲರು ಮಸೀದಿ 850 ವರ್ಷಗಳಷ್ಟು ಹಳೆಯದಾಗಿದೆ ಮತ್ತು ಅಲ್ಲಿ ಯಾವುದೇ ದೇವಾಲಯ ಅಸ್ತಿತ್ವದಲ್ಲಿರಲಿಲ್ಲ. ಗುಲಾಮ್ ರಾಜವಂಶದ ಸುಲ್ತಾನ್ ಶಮ್ಸ್-ಉದ್-ದಿನ್-ಅಲ್ತಮಾಶ್ 1223ರಲ್ಲಿ ಮಸೀದಿಯನ್ನು ನಿರ್ಮಿಸಿದ್ದಾನೆ ಎಂದು ಕೋರ್ಟ್ ನಲ್ಲಿ ವಾದಿಸಿದ್ದಾರೆ.