ಇಸ್ಲಾಂ ವಿರೋಧಿ ಹೇಳಿಕೆ | ಧಾರ್ಮಿಕ ನಾಯಕ ರಾಮಗಿರಿ ಮಹಾರಾಜ್ ವಿರುದ್ಧ ಎಫ್‌ಐಆರ್ ದಾಖಲು
ಹೊಸದಿಲ್ಲಿ : ಪ್ರವಾದಿ ಮುಹಮ್ಮದ್ ಹಾಗೂ ಇಸ್ಲಾಂ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದಲ್ಲಿ ಧಾರ್ಮಿಕ ನಾಯಕ ರಾಮಗಿರಿ ಮಹಾರಾಜ್ ಅವರ ವಿರುದ್ಧ ಮಹಾರಾಷ್ಟ್ರದ ಥಾಣೆ ಜಿಲ್ಲೆಯ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ನಾಸಿಕ್ ಜಿಲ್ಲೆಯ ಸಿನ್ನಾರ್ ತಾಲೂಕಿನ ಶಾಹ್ ಪಂಚಾಲೆ ಗ್ರಾಮದಲ್ಲಿ ನಡೆದ ಧಾರ್ಮಿಕ ಕಾರ್ಯಕ್ರಮದ ಸಂದರ್ಭ ರಾಮಗಿರಿ ಮಹಾರಾಜ್ ಅವರು ಈ ಹೇಳಿಕೆ ನೀಡಿದ್ದಾರೆ ಎನ್ನಲಾಗಿದೆ. ಈ ಹೇಳಿಕೆಯ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು.
ರಾಮಗಿರಿ ಮಹಾರಾಜ್ ಅವರ ವಿರುದ್ಧ ಮುಂಬ್ರಾ ಪೊಲೀಸರು ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಅವರ ವಿರುದ್ಧ ನಾಸಿಕ್ ಹಾಗೂ ಛತ್ರಪತಿ ಸಂಭಾಜಿನಗರ್ ಜಿಲ್ಲೆಗಳಲ್ಲಿ ಕೂಡ ಪ್ರಕರಣ ದಾಖಲಾಗಿದೆ.
ಈ ಆರೋಪಕ್ಕೆ ಪ್ರತಿಕ್ರಿಯಿಸಿರುವ ರಾಮಗಿರಿ ಮಹಾರಾಜ್, ‘‘ಹಿಂದೂಗಳು ಸಂಘಟಿತರಾಗಬೇಕೆಂಬುದೇ ಈ ಹೇಳಿಕೆಯ ಏಕೈಕ ಉದ್ದೇಶವಾಗಿತ್ತು. ಈಗ ನಾನು ಏನು ಬಂದರೂ ಎದುರಿಸುತ್ತೇನೆ. ಒಂದು ವೇಳೆ ಪ್ರಕರಣ ದಾಖಲಾದರೆ, ನೋಟಿಸು ಬಂದಾಗ ನೋಡಿಕೊಳ್ಳುತ್ತೇನೆ’’ ಎಂದಿದ್ದಾರೆ.