ಭಾರತದಲ್ಲಿ ಮುಸ್ಲಿಮರ ವಿರುದ್ಧದ ದ್ವೇಷ ಭಾಷಣಗಳಲ್ಲಿ ಸಾರ್ವಕಾಲಿಕ ಏರಿಕೆ

Update: 2024-02-26 08:25 GMT

ಸಾಂದರ್ಭಿಕ ಚಿತ್ರ (credit: newsclick.in)

ಹೊಸದಿಲ್ಲಿ: ಭಾರತದಲ್ಲಿ ಮುಸ್ಲಿಂ ವಿರೋಧಿ ದ್ವೇಷ ಭಾಷಣಗಳು 2023ರ ಪ್ರಥಮಾರ್ಧಕ್ಕೆ ಹೋಲಿಸಿದಾಗ ದ್ವಿತೀಯಾರ್ಧದಲ್ಲಿ ಶೇ 62ರಷ್ಟು ಹೆಚ್ಚಾಗಿತ್ತು ಎಂದು ವಾಷಿಂಗ್ಟನ್‌ ಮೂಲದ ಸಂಶೋಧನಾ ಗುಂಪು ಇಂಡಿಯಾ ಹೇಟ್‌ ಲ್ಯಾಬ್‌ ಹೇಳಿದೆ.

2023ರಲ್ಲಿ ಮುಸ್ಲಿಮರನ್ನು ಗುರಿಯಾಗಿಸಿ ಒಟ್ಟು 668 ದ್ವೇಷ ಭಾಷಣಗಳು ಅಥವಾ ಹಗೆ ನುಡಿಗಳ ಪ್ರಕರಣಗಳನ್ನು ದಾಖಲೀಕರಿಸಲಾಗಿದೆ. ಇವುಗಳಲ್ಲಿ 255 ಪ್ರಕರಣಗಳು ವರ್ಷದ ಪ್ರಥಮಾರ್ಧದಲ್ಲಿ ಹಾಗೂ 413 ಪ್ರಕರಣಗಳು ವರ್ಷದ ದ್ವಿತೀಯಾರ್ಧದಲ್ಲಿ ವರದಿಯಾಗಿವೆ ಎಂದು ಇಂದು ಬಿಡುಗಡೆಯಾದ ಇಂಡಿಯಾ ಹೇಟ್‌ ಲ್ಯಾಬ್‌ ವರದಿ ತಿಳಿಸಿದೆ.

ಶೇ 75ರಷ್ಟು ಅಥವಾ 498 ಪ್ರಕರಣಗಳು ಬಿಜೆಪಿ ಆಡಳಿತದ ರಾಜ್ಯಗಳಿಂದ ವರದಿಯಾಗಿದ್ದವು. ಮಹಾರಾಷ್ಟ್ರ, ಉತ್ತರ ಪ್ರದೇಶ ಮತ್ತು ಮಧ್ಯಪ್ರದೇಶದಲ್ಲಿ ಗರಿಷ್ಠ ಪ್ರಕರಣಗಳು ವರದಿಯಾಗಿವೆ.

ಇಸ್ರೇಲ್‌ ಮೇಲಿನ ಹಮಾಸ್‌ ದಾಳಿ ಹಾಗೂ ನಂತರ ಗಾಝಾ ಮೇಲೆ ಇಸ್ರೇಲ್‌ ದಾಳಿ ನಡೆಸಿದ ಅಕ್ಟೋಬರ್‌ 7 ಹಾಗೂ ಡಿಸೆಂಬರ್‌ 31ರ ನಡುವೆ ಭಾರತೀಯ ಮುಸ್ಲಿಮರನ್ನು ಗುರಿಯಾಗಿಸಿ 41 ದ್ವೇಷ ಭಾಷಣಗಳ ಪ್ರಕರಣಗಳು ವರದಿಯಾಗಿವೆ, ಇವುಗಳ ಪೈಕಿ ಶೇ20ರಷ್ಟು ಪ್ರಕರಣಗಳು 2023ರ ಕೊನೆಯ ಮೂರು ತಿಂಗಳುಗಳಲ್ಲಿ ದಾಖಲಾಗಿವೆ.

ದ್ವೇಷ ಭಾಷಣಗಳ ಕುರಿತಂತೆ ವಿಶ್ವ ಸಂಸ್ಥೆ ವ್ಯಾಖ್ಯಾನಿತ ಮಾನದಂಡವನ್ನಾಧರಿಸಿ ಈ ಪ್ರಕರಣಗಳನ್ನು ಗುರುತಿಸಿ ದಾಖಲೀಕರಿಸಲಾಗಿದೆ ಎಂದು ಇಂಡಿಯಾ ಹೇಟ್‌ ಲ್ಯಾಬ್‌ ಹೇಳಿದೆ.

ಹಿಂದೂ ರಾಷ್ಟ್ರೀಯವಾದಿ ಗುಂಪುಗಳ ಆನ್‌ಲೈನ್‌ ಚಟುವಟಿಕೆಗಳ ಮೇಲೆ ನಿಗಾ ಇರಿಸಿದ್ದಾಗಿ, ಸಾಮಾಜಿಕ ಜಾಲತಾಣಗಳಲ್ಲಿ ದ್ವೇಷದ ಭಾಷಣದ ವೀಡಿಯೋಗಳನ್ನು ಗಣನೆಗೆ ತೆಗೆದುಕೊಂಡಿರುವುದಾಗಿ ಹಾಗೂ ಭಾರತೀಯ ಮಾಧ್ಯಮ ವರದಿ ಮಾಡಿದ ಕೆಲವೊಂದು ಪ್ರಕರಣಗಳನ್ನೂ ಗಣನೆಗೆ ತೆಗೆದುಕೊಂಡು ವರದಿ ಸಿದ್ಧಪಡಿಸಿರುವುದಾಗಿ ಸಂಘಟನೆ ಹೇಳಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News