ನಾಗ್ ಟ್ಯಾಂಕ್ ವಿರೋಧಿ ಕ್ಷಿಪಣಿ ವ್ಯವಸ್ಥೆ, 5,000 ಲಘು ವಾಹನ ಖರೀದಿ ಕುರಿತ ಒಪ್ಪಂದಕ್ಕೆ ರಕ್ಷಣಾ ಸಚಿವಾಲಯ ಅಂಕಿತ

NAMICA | X/@alpha_defense
ಹೊಸದಿಲ್ಲಿ: ರಕ್ಷಣಾ ಸಚಿವಾಲಯ(ಎಂಒಡಿ) ಸಶಸ್ತ್ರ ಪಡೆಗಳಿಗಾಗಿ ಟ್ಯಾಂಕ್ ವಿರೋಧಿ ನಾಗ್ ಕ್ಷಿಪಣಿ ವ್ಯವಸ್ಥೆ(ಎನ್‌ಎಎಂಐಎಸ್) ಟ್ರ್ಯಾಕ್ಡ್ ಆವೃತ್ತಿಯ ಖರೀದಿಗಾಗಿ ಆರ್ಮರ್ಡ್ ವೆಹಿಕಲ್ಸ್ ನಿಗಮ ಲಿ.(ಎವಿಎನ್‌ಎಲ್) ಜೊತೆ ಮತ್ತು 5,000 ಲಘು ವಾಹನಗಳಿಗಾಗಿ ಫೋರ್ಸ್ ಮೋಟರ್ಸ್ ಲಿ. ಮತ್ತು ಮಹಿಂದ್ರ ಆ್ಯಂಡ್ ಮಹಿಂದ್ರ ಲಿ.ಜೊತೆ ಒಪ್ಪಂದಗಳಿಗೆ ಸಹಿ ಹಾಕಿದೆ. ಈ ಖರೀದಿಗಳಿಗೆ ಒಟ್ಟು ಸುಮಾರು 2,500 ಕೋ.ರೂ.ವೆಚ್ಚವಾಗಲಿದೆ.
ಡಿಆರ್‌ಡಿಒದ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಪ್ರಯೋಗಾಲಯ(ಡಿಆರ್‌ಡಿಎಲ್)ವು ಅಭಿವೃದ್ಧಿಗೊಳಿಸಿರುವ ಎನ್‌ಎಎಂಐಎಸ್ (ಟ್ರ್ಯಾಕ್ಡ್) ಶಸ್ತ್ರಾಸ್ತ್ರ ವ್ಯವಸ್ಥೆಯ ಖರೀದಿಗೆ 1,801.34 ಕೋ.ರೂ. ವೆಚ್ಚವಾಗಲಿದೆ ಎಂದು ಎಂಒಡಿ ಹೇಳಿಕೆಯಲ್ಲಿ ತಿಳಿಸಿದೆ. ಈ ವ್ಯವಸ್ಥೆಯನ್ನು ಮುಂಚೂಣಿಯ ಯಾಂತ್ರೀಕೃತ ಪದಾತಿ ದಳಗಳು ನಿರ್ವಹಿಸಲಿವೆ.
ಎನ್‌ಎಎಂಐಎಸ್ (ಟ್ರ್ಯಾಕ್ಡ್) ಅತ್ಯಾಧುನಿಕ ಟ್ಯಾಂಕ್ ವಿರೋಧಿ ಶಸ್ತ್ರಾಸ್ತ್ರ ವ್ಯವಸ್ಥೆಗಳಲ್ಲಿ ಒಂದಾಗಿದೆ. 500 ಮೀ.ನಿಂದ 4 ಕಿ.ಮೀ.ವರೆಗೆ ವ್ಯಾಪ್ತಿಯನ್ನು ಹೊಂದಿರುವ ಅದು ಎಲ್ಲ ಹವಾಮಾನ ಪರಿಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತದೆ. ಎಂಟು ಕೆ.ಜಿ.ತೂಕದ ಸಿಡಿತಲೆಯನ್ನು ಹೊಂದಿದ್ದು,ಪ್ರತಿ ಸೆಕೆಂಡಿಗೆ ಸುಮಾರು 230 ಮೀ.ವೇಗದಲ್ಲಿ ಚಲಿಸುತ್ತದೆ ಎಂದು ಬಲ್ಲ ಮೂಲಗಳು ತಿಳಿಸಿವೆ.
ಈ ವಾಹನವು ದಾಳಿಗೆ ಸನ್ನದ್ಧ ಸಂಯೋಜನೆಯೊಂದಿಗೆ ಆರು ನಾಗ್ ಕ್ಷಿಪಣಿಗಳನ್ನು ಹೊತ್ತೊಯ್ಯಬಲ್ಲದು. ಕ್ಷಿಪ್ರ ಉಡಾವಣಾ ಸಾಮರ್ಥ್ಯವನ್ನು ಹೊಂದಿದ್ದು, 20 ಸೆಕೆಂಡ್‌ಗಳಲ್ಲಿ ಎಲ್ಲ ಆರೂ ಕ್ಷಿಪಣಿಗಳನ್ನು ಉಡಾಯಿಸಬಹುದು.
ಲಘು ವಾಹನಗಳು
ಲಘು ವಾಹನಗಳನ್ನು 800 ಕೆ.ಜಿ.ಪೇಲೋಡ್ ಸಾಗಿಸಲು ಸಾಧ್ಯವಾಗುವಂತೆ ಅಧಿಕ ಶಕ್ತಿಯ ಇಂಜಿನ್‌ನೊಂದಿಗೆ ವಿನ್ಯಾಸಗೊಳಿಸಲಾಗಿದ್ದು, ಎಲ್ಲ ರೀತಿಯ ಭೂಪ್ರದೇಶಗಳು ಮತ್ತು ಕಾರ್ಯಾಚರಣೆ ಸ್ಥಿತಿಯಲ್ಲಿ ಬಳಸಬಹುದಾಗಿದೆ.
ಮುಂಚೂಣಿ ನೆಲೆಗಳಿಗೆ ಯೋಧರನ್ನು ತ್ವರಿತವಾಗಿ ಮತ್ತು ಸುಗಮವಾಗಿ ಸಾಗಿಸಲು ಲಘು ವಾಹನಗಳನ್ನು ಬಳಸಲಾಗುತ್ತದೆ. ಅವು ಗಾತ್ರದಲ್ಲಿ ಚಿಕ್ಕದಾಗಿರುವುದರಿಂದ ದೊಡ್ಡ ವಾಹನಗಳಿಗೆ ಕಷ್ಟಕರವಾದ ಒರಟು ಭೂಪ್ರದೇಶಗಳಲ್ಲಿ ಸಲೀಸಾಗಿ ಚಲಿಸಬಲ್ಲವು.
ಮುಂಚೂಣಿ ಘಟಕಗಳಿಗೆ ಉಪಕರಣಗಳು, ಮದ್ದುಗುಂಡುಗಳು ಮತ್ತು ಇತರ ಅಗತ್ಯ ಪೂರೈಕೆಗಳನ್ನು ತಲುಪಿಸಲು ಈ ಲಘು ವಾಹನಗಳು ನೆರವಾಗುತ್ತವೆ.