ತಮಿಳುನಾಡಿನ ದೇವಾಲಯಗಳಲ್ಲಿ ಅರ್ಚಕರಾಗಿ ಮಹಿಳೆಯರ ನೇಮಕ: ಸ್ಟಾಲಿನ್ ಘೋಷಣೆ

Update: 2023-09-14 17:37 GMT

ಎಂ.ಕೆ.ಸ್ಟಾಲಿನ್| Photo: PTI 

ಚೆನ್ನೈ: ದ್ರಾವಿಡ ಮಾದರಿಯ ಆಡಳಿತದ ನೀತಿಯಂತೆ, ತಮಿಳುನಾಡಿನಲ್ಲಿ ಶೀಘ್ರದಲ್ಲೇ ಮಹಿಳೆಯರು ದೇವಾಲಯದಲ್ಲಿ ಆರ್ಚಕರಾಗಿ ಕಾರ್ಯನಿರ್ವಹಿಸಲಿದ್ದಾರೆಂದು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಗುರುವಾರ ತಿಳಿಸಿದ್ದಾರೆ.

‘‘ಪೈಲಟ್ ಗಳು ಹಾಗೂ ಬಾಹ್ಯಾಕಾಶಯಾತ್ರಿಗಳಾಗಿ ಮಹಿಳೆಯರು ಸಾಧನೆಯನ್ನು ಮಾಡಿರುವ ಹೊರತಾಗಿಯೂ ಅವರನ್ನು ಅಪವಿತ್ರವೆಂದು ಪರಿಗಣಿಸಿ ದೇವಾಲಯಲ್ಲಿ ಪೌರೋಹಿತ್ಯದಂತಹ ಪವಿತ್ರವಾದ ಪಾತ್ರಗಳನ್ನು ನಿರ್ವಹಿಸುವುದರಂದ ದೂರವಿಡಲಾಗಿದೆ. ಸ್ತ್ರೀದೇವತೆಗಳ ದೇವಾಲಯದಲ್ಲೂ ಅವರನ್ನು ದೂರವಿಡಲಾಗಿದೆ. ಆದರೆ ಕೊನೆಗೂ ಇಲ್ಲಿ ಬದಲಾವಣೆಯಾಗಿದೆ’’ ಎಂದು ಸ್ಟಾಲಿನ್ ಅವರು ಸಾಮಾಜಿಕ ಜಾಲತಾಣ ‘x’ನಲ್ಲಿ ಪೋಸ್ಟ್ ಮಾಡಿದ್ದಾರೆ.

‘‘ನಮ್ಮ ದ್ರಾವಿಡ ಮಾದರಿಯ ಸರಕಾರವು ತಮಿಳುನಾಡಿನಲ್ಲಿ ಎಲ್ಲಾ ಜಾತಿಗಳವರನ್ನು ಅರ್ಚಕರಾಗಿ ನೇಮಿಸುವ ಮೂಲಕ ‘ತಂದೈ’ ಪೆರುಮಾಳ್ ಅವರ ಹೃದಯಕ್ಕೆ ತಾಗಿದ್ದ ಮುಳ್ಳನ್ನು ತೆಗೆದುಹಾಕಿದೆ. ಮಹಿಳೆಯರು ಈಗ ಗರ್ಭಗುಡಿಯೊಳಗೆ ಪ್ರವೇಶಿಸಲಿದ್ದು, ಎಲ್ಲರನ್ನೂ ಒಳಪಡಿಸಿದ ಹಾಗೂ ಸಮಾನತೆಯ ನೂತನ ಯುಗಕ್ಕೆ ನಾಂದಿ ಹಾಡಲಾಗಿದೆ’’ ಎಂದವರು ಹೇಳಿದ್ದಾರೆ.

ಎಲ್ಲಾ ಜಾತಿಗೆ ಸೇರಿದ ವ್ಯಕ್ತಿಗಳನ್ನು ದೇವಾಲಯಗಳಲ್ಲಿ ಅರ್ಚಕರಾಗಿ ತರಬೇತಿ ನೀಡುವ ಮತ್ತು ನೇಮಿಸುವ ಯೋಜನೆಯನ್ನು ಸ್ಟಾಲಿನ್ ಸರಕಾರ ಆರಂಭಿಸಿತ್ತು. ಈ ಯೋಜನೆಯಡಿ ತಿರುಚಿರಾಪ್ಪಳ್ಳಿಯ ಶ್ರೀರಂಗಂನ ಶ್ರೀರಂಗನಾಥರ್ ದೇವಾಲಯವು ನಡೆಸುತ್ತಿರುವ ಅರ್ಚಕರ ತರಬೇತಿ ಶಾಲೆಯಲ್ಲಿ ಮೂವರು ಮಹಿಳೆಯರು ತರಬೇತಿಯನ್ನು ಪೂರ್ಣಗೊಳಿಸಿದ್ದಾರೆ.

ಬ್ರಾಹ್ಮಣೇತರರನ್ನು ದೇವಾಲಯದಲ್ಲಿ ಅರ್ಚಕರ ಪಾತ್ರವನ್ನು ನಿರ್ವಹಿಸಲು ಅವಕಾಶ ನೀಡದೆ ಇರುವುದು ತನ್ನ ಹೃದಯಕ್ಕೆ ತಗಲಿದ ಮುಳ್ಳೆಂದು ದ್ರಾವಿಡ ಚಳವಳಿಯ ನಾಯಕ ದಿವಂಗತ ಪೆರಿಯಾರ್ ಇ.ರಾಮಸ್ವಾಮಿ ಅವರು ಈ ಹಿಂದೆ ಬಣ್ಣಿಸಿದ್ದರು.


Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News