ಸಶಸ್ತ್ರ ಪಡೆಗಳಲ್ಲಿಯ ವಸಾಹತುಶಾಹಿ ಆಚರಣೆಗಳನ್ನು ಕೈಬಿಡಲು ಚಿಂತನೆ: ವರದಿ

Update: 2024-09-29 11:49 GMT

ಸಾಂದರ್ಭಿಕ ಚಿತ್ರ (PTI)

ಹೊಸದಿಲ್ಲಿ: ವೃತ್ತಿಜೀವನದ ನಡುವೆ ಅಧಿಕಾರಿಗಳಿಗಾಗಿ ಭಾರತೀಯ ಸೇನಾಧಿಪತಿಗಳ ದಂಡಯಾತ್ರೆಗಳು ಮತ್ತು ಭಾರತೀಯ ದೊರೆಗಳ ಸಮುದ್ರಯುದ್ಧ ತಂತ್ರಗಳ ಅಧ್ಯಯನದ ಕೋರ್ಸ್‌ಗಳು, ಮೂರು ಪ್ರತ್ಯೇಕ ಸೇವಾ ಕಾಯ್ದೆಗಳ ಬದಲು ತ್ರಿಸೇವಾ ಕಾಯ್ದೆಯ ರಚನೆ, ಸೇನೆಯಲ್ಲಿ ಸ್ಕಾಟಿಷ್ ಮೂಲದ ಪೈಪ್ ಬ್ಯಾಂಡ್‌ಗಳ ಸಂಖ್ಯೆಯನ್ನು ಕಡಿಮೆ ಮಾಡುವುದು ಮತ್ತು ಸೇನೆಯ ಕೆಲವು ಘಟಕಗಳಿಗೆ ಹೆಚ್ಚಿನ ಪಾನ್-ಇಂಡಿಯಾ ಸ್ವರೂಪವನ್ನು ನೀಡುವುದು;ಇವು ಈಗಲೂ ಸಶಸ್ತ್ರ ಪಡೆಗಳ ಭಾಗವಾಗಿ ಮುಂದುವರಿದಿರುವ ವಸಾಹತುಶಾಹಿ ಯುಗದ ಕೊನೆಯ ಕುರುಹುಗಳನ್ನು ಕೈಬಿಡಲು ಭಾರತೀಯ ಸೇನೆಯೊಳಗೆ ಚರ್ಚೆಯಾಗುತ್ತಿರುವ ಕೆಲವು ಬದಲಾವಣೆಗಳಾಗಿವೆ ಎಂದು ಹಿರಿಯ ಸೇನಾಧಿಕಾರಿಗಳನ್ನು ಉಲ್ಲೇಖಿಸಿ indianexpress.com ವರದಿ ಮಾಡಿದೆ.

ಅಧಿಕಾರಿಗಳ ಪ್ರಕಾರ ಇವುಗಳಲ್ಲಿ ಕೆಲವು ಅಂಶಗಳು ಈ ತಿಂಗಳ ಪೂರ್ವಾರ್ಧದಲ್ಲಿ ಲಕ್ನೋದಲ್ಲಿ ನಡೆದ ಪ್ರಪ್ರಥಮ ಜಂಟಿ ಕಮಾಂಡರ್‌ಗಳ ಸಮ್ಮೇಳನದಲ್ಲಿ ರಕ್ಷಣಾ ಸಚಿವ ರಾಜನಾಥ ಸಿಂಗ್ ಅವರು ಬಿಡುಗಡೆಗೊಳಿಸಿದ ‘ವಸಾಹತುಶಾಹಿ ಆಚರಣೆಗಳು ಮತ್ತು ಸಶಸ್ತ್ರ ಪಡೆಗಳು-ಒಂದು ವಿಮರ್ಶೆ’ಕೃತಿಯಲ್ಲಿ ಒಳಗೊಂಡಿವೆ.

ಪಾಶ್ಚಿಮಾತ್ಯ ಮಿಲಿಟರಿ ಚಿಂತಕರು ಮತ್ತು ಬರಹಗಾರರು ಪ್ರಚಾರಿಸಿದ ವಿಷಯಗಳನ್ನು ಮಾತ್ರ ಸೇರಿಸುವ ಬದಲು ಪ್ರಾಚೀನ ಭಾರತೀಯ ತಂತ್ರಜ್ಞರು ಬರೆದ ಪಠ್ಯಪುಸ್ತಕಗಳನ್ನು ಸೇರಿಸಿ ಯುವ ಮಿಲಿಟರಿ ಅಧಿಕಾರಿಗಳಲ್ಲಿ ಭಾರತ ಕೇಂದ್ರಿತ ಕಾರ್ಯತಂತ್ರದ ಚಿಂತನೆಯನ್ನು ಮೈಗೂಡಿಸಲು ಪ್ರಯತ್ನಗಳು ನಡೆಯುತ್ತಿವೆ ಎಂದು ಅಧಿಕಾರಿಗಳು ಹೇಳಿದರು.

ಈ ನಿಟ್ಟಿನಲ್ಲಿ ಸಿಕಂದರಾಬಾದ್‌ನ ಕಾಲೇಜ್ ಆಫ್ ಡಿಫೆನ್ಸ್ ಮ್ಯಾನೇಜ್‌ಮೆಂಟ್(ಸಿಡಿಎಂ) ಗುಜರಾತ್ ವಿವಿಯ ಇಂಡಿಕ್ ಸ್ಟಡೀಸ್ ವಿಭಾಗದೊಂದಿಗೆ ಸಮಾಲೋಚನೆಯೊಂದಿಗೆ ಪಠ್ಯಕ್ರಮವನ್ನು ರಚಿಸುತ್ತಿದೆ ಮತ್ತು ಇದನ್ನು ಮೂರು ಸಶಸ್ತ್ರಪಡೆಗಳ ಅಧಿಕಾರಿಗಳು ಭಾಗವಹಿಸುವ ಮಧ್ಯಂತರ ಕೋರ್ಸ್‌ಗಳ ಕಡ್ಡಾಯ ಭಾಗವನ್ನಾಗಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದರು.

ಇದು ಐಎನ್‌ಎ,ಮರಾಠರು ಅಥವಾ ಸಿಖ್‌ರಂತಹ ಚರಿತ್ರೆಯಲ್ಲಿನ ಭಾರತೀಯ ಜನರಲ್‌ಗಳ ದಂಡಯಾತ್ರೆಗಳು,ಪ್ರಾಚೀನ ಸಮುದ್ರ ತಂತ್ರಜ್ಞಾನಗಳು ಹಾಗೂ ಒಂದನೇ ರಾಜ ರಾಜ ಚೋಳ ಮತ್ತು ಆತನ ಪುತ್ರ ರಾಜೇಂದ್ರ ಚೋಳ,ಕೊಲಾಚೆಲ್ ದೊರೆ ಮಾರ್ತಾಂಡ ವರ್ಮಾ ಮತ್ತು ನಾಲ್ಕನೇ ಕುಂಜಾಲಿ ಮರಕ್ಕರ್ ಅವರಂತಹ ಪ್ರಾಚೀನ ಭಾರತೀಯ ದೊರೆಗಳ ಸಮುದ್ರ ತಂತ್ರಗಳ ಅಧ್ಯಯನವನ್ನು ಒಳಗೊಂಡಿರಲಿದೆ. ಚಕ್ರವರ್ತಿ ಚಂದ್ರಗುಪ್ತ ಮೌರ್ಯನ ಆಡಳಿತ ಮಾದರಿಯೂ ಈ ಅಧ್ಯಯನದ ಭಾಗವಾಗಿರಬಹುದು.

ಇದರ ಜೊತೆಗೆ ಇತರ ವೃತ್ತಿಪರ ಮಿಲಿಟರಿ ಶಿಕ್ಷಣ ಸಂಸ್ಥೆಗಳು ಸ್ಥಳೀಯ ನೀತಿಶಾಸ್ತ್ರ,ಕಾನೂನು ಮತ್ತು ಯುದ್ಧನೌಕೆಗಳ ಪರಿಕಲ್ಪನೆಗಳನ್ನು ಬಿಂಬಿಸಲು ಹಿರಿಯ ಭಾರತ ಶಾಸ್ತ್ರಜ್ಞರಿಂದ ನಿಯಮಿತ ವಿಚಾರ ಸಂಕಿರಣಗಳನ್ನು ನಡೆಸುತ್ತಿವೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News