ಪೂಂಚ್: ಸೇನೆಯ ವಿಚಾರಣೆ ವೇಳೆ ಮೂವರು ನಾಗರಿಕರ ಸಾವಿಗೆ ಹಿಂಸೆ ಕಾರಣ ಎಂದು ಕಂಡುಕೊಂಡ ಆಂತರಿಕ ತನಿಖೆ
ಹೊಸದಿಲ್ಲಿ: ಡಿಸೆಂಬರ್ 2023ರಲ್ಲಿ ಜಮ್ಮು ಕಾಶ್ಮೀರದಲ್ಲಿನ ಪೂಂಚ್ ನಲ್ಲಿ ನಡೆದ ಉಗ್ರ ದಾಳಿಯಲ್ಲಿ ನಾಲ್ಕು ಸೈನಿಕರು ಬಲಿಯಾದ ನಂತರ ನಡೆದ ಮೂವರು ನಾಗರಿಕರ ಶಂಕಿತ ಹತ್ಯೆಗಳಿಗೆ ಸಂಬಂಧಿಸಿ ಸೇನೆ ನಡೆಸಿದ ಆಂತರಿಕ ತನಿಖೆಯು ಕೆಲ ಅಧಿಕಾರಿಗಳ ಸಹಿತ ಏಳೆಂಟು ಸೇನಾ ಸಿಬ್ಬಂದಿಗಳ ನಡವಳಿಕೆಯಲ್ಲಿ ಗಂಭೀರ ಲೋಪಗಳನ್ನು ಕಂಡುಹಿಡಿದಿದೆ ಎಂದು ವರದಿಯಾಗಿದೆ.
ಸೇನೆಯು ವಿಚಾರಣೆ ನಡೆಸುತ್ತಿದ್ದ ಮೂವರು ನಾಗರಿಕರು ವಿಚಾರಣೆ ವೇಳೆ ಎದುರಿಸಿದ ಹಿಂಸೆಯಿಂದ ಮೃತಪಟ್ಟಿದ್ದರೆಂದು ತನಿಖೆಯಿಂದ ತಿಳಿದು ಬಂದಿದೆ ಎಂದು indianexpress.com ಮೂಲಗಳನ್ನಾಧರಿಸಿ ವರದಿ ಮಾಡಿದೆ.
ಉಗ್ರ ದಾಳಿಯು ಡಿಸೆಂಬರ್ 21ರಂದು ನಡೆದಿದ್ದರೆ ಮರುದಿನ ಪೂಂಚ್ ಜಿಲ್ಲೆಯ ತಾಪಾ ಪಿರ್ ಎಂಬಲ್ಲಿಂದ ಎಂಟು ನಾಗರಿಕರನ್ನು ಹಾಗೂ ರಜೌರಿ ಜಿಲ್ಲೆಯ ತಾನಾಮಂಡಿ ಎಂಬಲ್ಲಿನ ಐದು ಮಂದಿಯನ್ನು ಸೇನೆ ವಶಪಡಿಸಿಕೊಂಡಿತ್ತು, ತೋಪಾ ಪಿರ್‌ನ ಎಂಟು ಮಂದಿಯ ಪೈಕಿ ಮೂವರು ವಿಚಾರಣೆ ವೇಳೆ ನೀಡಲಾದ ಹಿಂಸೆಯಿಂದ ಮೃತಪಟ್ಟಿದ್ದಾರೆಂದು ಆರೋಪಿಸಲಾಗಿತ್ತು.
ಇಬ್ಬರು ಅಧಿಕಾರಿಗಳ ಸಹಿತ ವಿಚಾರಣೆಯಲ್ಲಿ ನೇರ ಅಥವಾ ಪರೋಕ್ಷವಾಗಿ ಶಾಮೀಲಾದವರ ವಿರುದ್ಧ ಆಡಳಿತಾತ್ಮಕ ಮತ್ತು ಶಿಸ್ತು ಕ್ರಮಕ್ಕೆ ಶಿಫಾರಸು ಮಾಡಲಾಗಿದೆ.
ಆರೋಪಿತ ಅಧಿಕಾರಿಗಳಲ್ಲಿ 13 ಸೆಕ್ಟರ್ ಆರ್‌ಆರ್‌ನ ಬ್ರಿಗೇಡ್ ಕಮಾಂಡರ್ ಮತ್ತು 48 ರಾಷ್ಟ್ರೀಯ ರೈಫಲ್ಸ್‌ನ ಕಮಾಂಡಿಂಗ್ ಅಧಿಕಾರಿ ಸೇರಿದ್ದಾರೆ.
ವಿಚಾರಣೆ ವೇಳೆ ಬ್ರಿಗೇಡ್ ಕಮಾಂಡರ್ ಖುದ್ದು ಉಪಸ್ಥಿತರಿರಲಿಲ್ಲ ಮತ್ತು ಕಮಾಂಡಿಂಗ್ ಅಧಿಕಾರಿ ರಜೆಯ ಮೇಲಿದ್ದರೂ ಅವರನ್ನು ನಂತರ ವರ್ಗಾವಣೆಗೊಳಿಸಲಾಗಿದೆ. ,ಅವರು ನೇರ ಶಾಮೀಲಾಗಿಲ್ಲದೇ ಇದ್ದರೂ ಅವರ ವಿರುದ್ಧ ಕ್ರಮಕ್ಕೆ ಶಿಫಾರಸು ಮಾಡಲಾಗಿದೆ. ಸ್ಥಳದಲ್ಲಿರದೇ ಇದ್ದರೂ ಕೆಲವೊಂದು ಸೂಚನೆಗಳ ಪಾಲನೆಯಾಗುವಂತೆ ನೋಡಿಕೊಳ್ಳುವುದು ಅವರ ಜವಾಬ್ದಾರಿಯಾಗಿದೆ ಎಂದು ಹೇಳಲಾಗಿದೆ.