ವಯನಾಡ್ ನ ಭೂಕುಸಿತ ಪ್ರದೇಶದ ರೆಸಾರ್ಟ್ ಒಂದರಲ್ಲಿ ಸಿಲುಕಿಕೊಂಡಿದ್ದ 19 ಮಂದಿಯನ್ನು ರಕ್ಷಿಸಿದ ಸೇನೆ

Update: 2024-07-31 08:38 GMT

Photo: PTI

ವಯನಾಡ್: ಬುಧವಾರ ಭಾರತೀಯ ಸೇನೆಯ ಯೋಧರು, ಕೇರಳದ ವಯನಾಡ್ ಜಿಲ್ಲೆಯಲ್ಲಿ ಭೂಕುಸಿತದಡಿ ಸಿಲುಕಿರುವ ಮುಂಡಕ್ಕೈ ಗ್ರಾಮದಲ್ಲಿನ ಇಳಾ ರೆಸಾರ್ಟ್ ಹಾಗೂ ವನ ರಾಣಿ ರೆಸಾರ್ಟ್ ನಲ್ಲಿ ಸಿಲುಕಿದ್ದ 19 ಮಂದಿ ನಾಗರಿಕರನ್ನು ರಕ್ಷಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಅರಣ್ಯಾಧಿಕಾರಿಗಳು ಹಾಗೂ ಗ್ರಾಮಸ್ಥರ ಮಾಹಿತಿಯನ್ನು ಆಧರಿಸಿ, 12 ಮಂದಿ ಯೋಧರೊಂದಿಗೆ ಸಬ್ ಗಿಜಿಲ್, ಸಬ್ ಜಯೇಶ್ ಹಾಗೂ ಎನ್ ಸಬ್ ಅನಿಲ್ ಕುಮಾರ್ ನೇತೃತ್ವದ 122 ಇನ್ ಫ್ಯಾಂಟ್ರಿ ಬೆಟಾಲಿಯನ್ (ಟಿಎ) ಮದ್ರಾಸ್ ತುಕಡಿಯು ಅಸಾಮಾನ್ಯ ಶೌರ್ಯ ಪ್ರದರ್ಶಿಸಿತು.

ನದಿಯ ಪ್ರವಾಹವು ಒಡ್ಡಿದ ಸವಾಲಿನ ಹೊರತಾಗಿಯೂ ಹಗ್ಗಗಳನ್ನು ಬಳಸಿಕೊಂಡು ಮಾನವ ಸೇತುವೆಯನ್ನು ನಿರ್ಮಿಸಿದ ಯೋಧರು, ಎಲ್ಲ ನಾಗರಿಕರು ಚೂರಲ್ ಮಾಲಾಗೆ ಸುರಕ್ಷಿತವಾಗಿ ತೆರವುಗೊಳ್ಳುವುದನ್ನು ಖಾತರಿಪಡಿಸಿದರು ಎಂದು ಸೇನೆಯ ಸಾರ್ವಜನಿಕ ಸಂಪರ್ಕಾಧಿಕಾರಿಯೊಬ್ಬರು ತಿಳಿಸಿದರು.

ಇದಕ್ಕೂ ಮುನ್ನ, ಮುಂಡಕ್ಕೈ ಗ್ರಾಮದ ಅವಶೇಷಗಳಡಿ ಸಿಲುಕಿದ್ದ ಎರಡು ಮೃತದೇಹಗಳನ್ನು 122 ಇನ್ ಫ್ಯಾಂಟ್ರಿ ಬೆಟಾಲಿಯನ್ ವಶಪಡಿಸಿಕೊಂಡಿದೆ ಎಂದು ಬುಧವಾರ ಬೆಳಗ್ಗೆ ಸೇನೆಯ ಸಾರ್ವಜನಿಕ ಸಂಪರ್ಕಾಧಿಕಾರಿ ತಿಳಿಸಿದ್ದರು.

ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸಾರ್ವಜನಿಕ ಆಸ್ಪತ್ರೆಗಳಿಗೆ ಸಾಗಿಸಲಾಗಿದೆ.

ಕೇರಳ ವಯನಾಡ್ ಜಿಲ್ಲೆಯಲ್ಲಿ ಸಂಭವಿಸಿರುವ ಈ ಭೀಕರ ಭೂ ಕುಸಿತದಲ್ಲಿ 150ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದು, 200ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಮೃತರ ಸಂಖ್ಯೆ ಮತ್ತಷ್ಟು ಏರಿಕೆಯಾಗುವ ಸಾಧ್ಯುತೆ ಇದೆ ಎಂದು ನಿರೀಕ್ಷಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News