ಅಯೋಧ್ಯೆಯಲ್ಲಿ ಸೇನೆಯ ಫೈರಿಂಗ್ ರೇಂಜ್ ಇರುವ ಭೂಮಿಗೆ ಕುತ್ತು: ವರದಿ
ಅಯೋಧ್ಯೆ: ಅಯೋಧ್ಯೆಯಲ್ಲಿ ನಿರ್ಮಾಣ ಹಂತದಲ್ಲಿರುವ ಸೇನೆಯ ಫೀಲ್ಡ್ ಫೈರಿಂಗ್ ರೇಂಜ್‌ನ್ನು ಅಸುರಕ್ಷಿತವೆಂದು ಪರಿಗಣಿಸಲಾಗಿದೆ.
‘ಅಯೋಧ್ಯೆಯಲ್ಲಿ ನೂತನ ವಿಮಾನ ನಿಲ್ದಾಣವು ತಲೆಯೆತ್ತಿದ್ದು, ಈ ಫೈರಿಂಗ್ ರೇಂಜ್ ವಿಮಾನದ ಹಾರಾಟ ಪಥದಲ್ಲಿದೆ. ಈ ರೇಂಜ್‌ನ ಬಳಕೆಯನ್ನು ಮುಂದುವರಿಸುವುದು ಸುರಕ್ಷಿತವಲ್ಲ. ಇಂತಹ ಸಂದರ್ಭಗಳಲ್ಲಿ ನಾವು ಪರ್ಯಾಯ ಸ್ಥಳಗಳನ್ನು ಕೋರುತ್ತೇವೆ ಮತ್ತು ಫೈರಿಂಗ್ ಡ್ರಿಲ್‌ಗಳನ್ನು ನಡೆಸುತ್ತೇವೆ’ ಎಂದು ತಿಳಿಸಿದ ಸೇನೆಯ ಅಧಿಕಾರಿಯೋರ್ವರು, ‘ಟ್ಯಾಂಕ್‌ಗಳು ಮತ್ತು ಪದಾತಿ ದಳದ ಯುದ್ಧವಾಹನ(ಐಸಿವಿ)ಗಳು ಸೇರಿದಂತೆ ಭಾರೀ ಶಸ್ತ್ರಾಸ್ತ್ರಗಳ ಪ್ರಯೋಗಗಳನ್ನು ನಡೆಸಲು ಸೇನೆಗೆ ಫೈರಿಂಗ್ ರೇಂಜ್‌ಗಳು ಅಗತ್ಯವಾಗಿವೆ. ನಾವು ಲಭ್ಯವಿರುವ ರೇಂಜ್‌ಗಳ ಬಳಕೆಯನ್ನು ಮುಂದುವರಿಸುತ್ತೇವೆ. ಇದೇ ವೇಳೆ ದೇಶದ ಅಭಿವೃದ್ಧಿಯೂ ಮುಖ್ಯವಾಗಿದೆ’ ಎಂದು ಹೇಳಿದರು.
ಮಾರ್ಗಸೂಚಿಯ ಪ್ರಕಾರ ರಕ್ಷಣಾ ಭೂಮಿಯನ್ನು ವರ್ಗಾಯಿಸಲು ಸಿದ್ಧ ಮಾದರಿಯಿದ್ದು, ಭೂಮಿಯನ್ನು ಸ್ವಾಧೀನ ಪಡಿಸಿಕೊಳ್ಳುವ ಸರಕಾರಿ ಸಂಸ್ಥೆಯು ಸಮಾನ ವಿಸ್ತೀರ್ಣದ ಅಥವಾ ಸಮಾನ ಮೌಲ್ಯದ ಮತ್ತೊಂದು ಸೂಕ್ತವಾದ ಜಾಗದಲ್ಲಿ ಮೂಲಸೌಕರ್ಯ ಅಭಿವೃದ್ಧಿಯನ್ನು ಕೈಗೊಳ್ಳುತ್ತದೆ. ಸೇನೆಯು ಪೂರ್ವ ವಿಭಾಗದಲ್ಲಿ ಹೊಸ ಫೈರಿಂಗ್ ರೇಂಜ್‌ನ್ನೂ ಶೀಘ್ರವೇ ಪಡೆಯಲಿದೆ ಎಂದು The Hindu ವರದಿ ಮಾಡಿದೆ.
ಫೀಲ್ಡ್ ಫೈರಿಂಗ್ ರೇಂಜ್‌ಗಳು ನೂತನ ಸೇನಾ ಸಿಬ್ಬಂದಿಗಳಿಗೆ ತರಬೇತಿ ನೀಡುವಲ್ಲಿ ಮತ್ತು ಅವರನ್ನು ಯುದ್ಧ ಸನ್ನದ್ಧರನ್ನಾಗಿಸುವಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತವೆ.
ಸದ್ರಿ ಪ್ರದೇಶದಲ್ಲಿ ಹಲವಾರು ಗಣ್ಯರು ಭೂಮಿಯನ್ನು ಖರೀದಿಸಿದ್ದಾರೆ ಎಂಬ ಆರೋಪಗಳ ಹಿನ್ನೆಲೆಯಲ್ಲಿ ಫೈರಿಂಗ್ ಅಭ್ಯಾಸಕ್ಕಾಗಿ ಬಳಕೆಯಾದ ಭೂಮಿಯನ್ನು ಡಿ-ನೋಟಿಫೈ ಮಾಡುವ ಅಯೋಧ್ಯೆ ಅಭಿವೃದ್ಧಿ ಪ್ರಾಧಿಕಾರ(ಎಡಿಎ)ದ ಇತ್ತೀಚಿನ ಕ್ರಮಕ್ಕೆ ತೀಕ್ಷ್ಣ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ.
ಅಧಿಕೃತವಾಗಿ ಮಹರ್ಷಿ ವಾಲ್ಮೀಕಿ ಇಂಟರ್‌ನ್ಯಾಷನಲ್ ಏರ್‌ಪೋರ್ಟ್, ಅಯೋಧ್ಯಾ ಧಾಮ ಎಂದು ಕರೆಯಲಾಗುವ ಅಯೋಧ್ಯೆ ವಿಮಾನ ನಿಲ್ದಾಣವು ಅಯೋಧ್ಯೆ ಮತ್ತು ಫೈಜಾಬಾದ್ ಅವಳಿ ನಗರಗಳಿಗೆ ಸೇವೆ ಸಲ್ಲಿಸುತ್ತದೆ. ಅಯೋಧ್ಯೆಯಲ್ಲಿ ಸೇನಾ ತರಬೇತಿಗಾಗಿ ಮೀಸಲು ವಲಯ ಎಂದು ಗುರುತಿಸಲಾಗಿದ್ದ ಭೂಮಿಯನ್ನು ಉತ್ತರ ಪ್ರದೇಶದ ರಾಜ್ಯಪಾಲರಾದ ಆನಂದಿ ಬೆನ್ ಪಟೇಲ್ ಅವರು ಡಿ-ನೋಟಿಫೈ ಮಾಡಿದ್ದಾರೆ. ಪ್ರದೇಶದ ನಕ್ಷೆಯನ್ನು ಗುರುತಿಸಲು ತಾನು ಅವಕಾಶ ನೀಡುವುದಾಗಿ ಮತ್ತು ನಿರ್ಮಾಣ ಹಾಗೂ ವಾಣಿಜ್ಯ ಬಳಕೆಗಾಗಿ ಸಾರ್ವಜನಿಕವಾಗಿ ಮುಕ್ತಗೊಳಿಸುವುದಾಗಿ ಎಡಿಎ ಹೇಳಿದೆ.
ಮಾಧ್ಯಮ ವರದಿಯಂತೆ ಇನ್ನೂ 10 ದಂಡುಪ್ರದೇಶಗಳನ್ನು ಡಿ-ನೋಟಿಫಿಕೇಷನ್‌ಗಾಗಿ ಗುರುತಿಸಲಾಗಿದೆ. ಈ ಭಾಗಗಳಲ್ಲಿಯ ನಾಗರಿಕ ಪ್ರದೇಶಗಳನ್ನು ಪಕ್ಕದ ನಗರಸಭೆಗಳೊಂದಿಗೆ ವಿಲೀನಗೊಳಿಸಲಾಗುವುದು.