ಲೋಕಸಭಾ ಚುನಾವಣೆಯ ಮತದಾನಕ್ಕೆ ಮುನ್ನ ನಮ್ಮ ಕಾರ್ಯಕರ್ತರ ಬಂಧನ : ಎನ್‌ಸಿ, ಪಿಡಿಪಿ ಆರೋಪ

Update: 2024-05-12 15:52 GMT

ಸಾಂದರ್ಭಿಕ ಚಿತ್ರ

ಶ್ರೀನಗರ: ಜಮ್ಮು-ಕಾಶ್ಮೀರ ಪೋಲಿಸರು ಕಾಶ್ಮೀರ ಪ್ರದೇಶದಲ್ಲಿ ಲೋಕಸಭಾ ಚುನಾವಣೆಯ ಮುನ್ನ ತಮ್ಮ ಕಾರ್ಯಕರ್ತರನ್ನು ಬಂಧಿಸಿದ್ದಾರೆ ಎಂದು ನ್ಯಾಷನಲ್ ಕಾನ್ಫರೆನ್ಸ್(ಎನ್‌ಸಿ) ಮತ್ತು ಪಿಡಿಪಿ ಆರೋಪಿಸಿವೆ.

ನಿನ್ನೆಯಿಂದಲೂ ಪೋಲಿಸರು ನಮ್ಮ ಪಕ್ಷದ ಕಾರ್ಯಕರ್ತರನ್ನು ವಶಕ್ಕೆ ತೆಗೆದುಕೊಳ್ಳುತ್ತಿದ್ದಾರೆ ಎಂದು ರವಿವಾರ ಇಲ್ಲಿ ಆರೋಪಿಸಿದ ಶ್ರೀನಗರ ಲೋಕಸಭಾ ಕ್ಷೇತ್ರದ ಎನ್‌ಸಿ ಅಭ್ಯರ್ಥಿ ರಹುಲ್ಲಾ ಮೆಹ್ದಿ ಅವರು, ಈ ಬಗ್ಗೆ ಚುನಾವಣಾ ಆಯೋಗವು ವಿವರಣೆಯನ್ನು ನೀಡಬೇಕು ಎಂದು ಆಗ್ರಹಿಸಿದರು.

‘ನಮ್ಮ ಕಾರ್ಯಕರ್ತರನ್ನು ಮತ್ತು ಪಿಡಿಪಿ ಕಾರ್ಯಕರ್ತರ ಬಂಧನದ ವರದಿಗಳು ನಿಜವಾಗಿದ್ದರೆ ಅವರನ್ನೂ ತಕ್ಷಣ ಬಿಡುಗಡೆಗೊಳಿಸಬೇಕು’ ಎಂದೂ ಅವರು ಒತ್ತಾಯಿಸಿದರು.

ಕ್ಷೇತ್ರದಲ್ಲಿಯ ತನ್ನ ಪಕ್ಷದ ಮತಗಟ್ಟೆ ಏಜೆಂಟರನ್ನು ಪೋಲಿಸರು ಬಂಧಿಸುತ್ತಿದ್ದಾರೆ ಮತ್ತು ಕಾನೂನುಬಾಹಿರವಾಗಿ ವಶಕ್ಕೆ ತೆಗೆದುಕೊಳ್ಳುತ್ತಿದ್ದಾರೆ ಎಂದು ಶ್ರೀನಗರ ಲೋಕಸಭಾ ಕ್ಷೇತ್ರದ ಪಿಡಿಪಿ ಅಭ್ಯರ್ಥಿ ವಹೀದ್ ಪಾರಾ ಅವರೂ ಶನಿವಾರ ಆರೋಪಿಸಿದ್ದರು.

ಶ್ರೀನಗರ ಲೋಕಸಭಾ ಕ್ಷೇತ್ರದಲ್ಲಿ ಸೋಮವಾರ ನಾಲ್ಕನೇ ಹಂತದಲ್ಲಿ ಮತದಾನ ನಡೆಯಲಿದೆ.

‘ಮತಗಟ್ಟೆಗಳಲ್ಲಿ ಹಸ್ತಕ್ಷೇಪಗಳು, ಬಂಧನಗಳು ಮತ್ತು ನಮ್ಮ ಕಾರ್ಯಕರ್ತರ ಮೇಲೆ ದಾಳಿಗಳು, ಪಿಡಿಪಿ ಪ್ರದೇಶಗಳಲ್ಲಿ ಬಲವಂತದ ಬಹಿಷ್ಕಾರಗಳು ರಾಷ್ಟ್ರೀಯ ಹಿತಾಸಕ್ತಿಗಳಿಗೆ ವಿರುದ್ಧವಾಗಿದ್ದು, ವಿಶ್ವಾಸದ ಕೊರತೆಯನ್ನು ಹೆಚ್ಚಿಸುತ್ತದೆ. ಇಂತಹ ಕೃತ್ಯಗಳಿಗೆ ಕಾರಣರಾದ ಅಧಿಕಾರಿಗಳು ಭಾರತೀಯ ಹಿತಾಸಕ್ತಿಗಳಿಗೆ ದ್ರೋಹ ಬಗೆಯುತ್ತಿದ್ದಾರೆ ಮತ್ತು ಕಾಶ್ಮೀರಿ ಯುವಜನರ ಭರವಸೆಗಳನ್ನು ಹುಸಿಗೊಳಿಸುತ್ತಿದ್ದಾರೆ ’ ಎಂದು ಪಾರಾ ರವಿವಾರ ಸಾಮಾಜಿಕ ಮಾಧ್ಯಮದಲ್ಲಿ ಆರೋಪಿಸಿದ್ದಾರೆ.

ಮುಕ್ತ ಮತ್ತು ನ್ಯಾಯಸಮ್ಮತ ಚುನಾವಣೆಯನ್ನು ನಿರಾಕರಿಸುವುದು ‘1987ರ ಕಠೋರ ಪ್ರತಿಧ್ವನಿ’ಯಾಗಿದೆ ಮತ್ತು ಪ್ರಜಾಪ್ರಭುತ್ವಕ್ಕೆ ಬೆದರಿಕೆಯಾಗಿದೆ ಎಂದು ಅವರು ಆರೋಪಿಸಿದ್ದಾರೆ.

ಪಾರಾ 1987ರ ಜಮ್ಮು-ಕಾಶ್ಮೀರ ವಿಧಾನಸಭಾ ಚುನಾವಣೆಗಳನ್ನು ಉಲ್ಲೇಖಿಸಿದ್ದಾರೆ. ಆ ಚುನಾವಣೆಯಲ್ಲಿ ವಿವಿಧ ಸಾಮಾಜಿಕ-ರಾಜಕೀಯ ಮತ್ತು ಧಾರ್ಮಿಕ ಗುಂಪುಗಳ 11 ಪಕ್ಷಗಳ ‘ಮುಸ್ಲಿಮ್ ಯುನೈಟೆಡ್ ಫ್ರಂಟ್ (ಎಂಯುಎಫ್) ’ಮೈತ್ರಿಕೂಟವು ಎನ್‌ಸಿ ಮತ್ತು ಕಾಂಗ್ರೆಸ್ ಮೈತ್ರಿಕೂಟದ ವಿರುದ್ಧ ಸ್ಪರ್ಧಿಸಿತ್ತು. ಸೋಲನ್ನು ಗ್ರಹಿಸಿದ್ದ ಎನ್‌ಸಿ-ಕಾಂಗ್ರೆಸ್ ಮೈತ್ರಿಕೂಟವು ಮತಗಟ್ಟೆಗಳಲ್ಲಿ ಅಕ್ರಮಗಳನ್ನು ನಡೆಸಿತ್ತು ಮತ್ತು ಚುನಾವಣಾ ಫಲಿತಾಂಶದ ಬಳಿಕ ಎಂಯುಎಫ್‌ನ ಕಾರ್ಯಕರ್ತರನ್ನು ಜೈಲಿಗೆ ತಳ್ಳಿತ್ತು ಎಂದು ಆರೋಪಿಸಲಾಗಿತ್ತು.

1987ರ ಚುನಾವಣಾ ಅಕ್ರಮಗಳ ಪುನರಾವರ್ತನೆಯನ್ನು ಮತ್ತು ಶ್ರೀನಗರದಲ್ಲಿ ಸರಕಾರಿ ಪ್ರಾಯೋಜಿತ ಬೆದರಿಕೆಯನ್ನು ತಡೆಯುವಂತೆ ಪಿಡಿಪಿ ಅಧ್ಯಕ್ಷೆ ಮೆಹಬೂಬ ಮುಫ್ತಿ ಅವರೂ ರವಿವಾರ ಚುನಾವಣಾ ಆಯೋಗವನ್ನು ಕೋರಿಕೊಂಡಿದ್ದಾರೆ.

ಆರೋಪಗಳಿಗೆ ಪ್ರತಿಕ್ರಿಯಿಸಿರುವ ಜಮ್ಮು-ಕಾಶ್ಮೀರ ಮುಖ್ಯ ಚುನಾವಣಾಧಿಕಾರಿಗಳು, ರಾಜಕೀಯ ಕಾರ್ಯಕರ್ತರಿಗೆ ಬೆದರಿಕೆ ಆರೋಪಗಳನ್ನು ಚುನಾವಣಾ ಆಯೋಗವು ಗಮನಿಸಿದೆ ಎಂದು ಹೇಳಿದ್ದಾರೆ.

ಕಾಶ್ಮೀರ ಪ್ರದೇಶದ ಇತರ ಎರಡು ಲೋಕಸಭಾ ಕ್ಷೇತ್ರಗಳಾದ ಬಾರಾಮುಲ್ಲಾ ಮತ್ತು ಅನಂತನಾಗ್-ರಜೌರಿಯಲ್ಲಿ ಈ ತಿಂಗಳ ಉತ್ತರಾರ್ಧದಲ್ಲಿ ಚುನಾವಣೆಗಳು ನಡೆಯಲಿವೆ.

ಜಮ್ಮು ಪ್ರದೇಶದ ಎರಡು ಲೋಕಸಭಾ ಕ್ಷೇತ್ರಗಳಲ್ಲಿ ಎಪ್ರಿಲ್‌ನಲ್ಲಿ ಮತದಾನ ನಡೆದಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News