'59 ಮಕ್ಕಳ ಕಳ್ಳಸಾಗಣಿಕೆ' ಆರೋಪದ ಮೇಲೆ ಬಂಧಿತರಾಗಿದ್ದ 5 ಮದರಸಾ ಶಿಕ್ಷಕರ ವಿರುದ್ಧದ ಪ್ರಕರಣ ವಜಾ

Update: 2024-05-29 05:58 GMT

ಸಾಂದರ್ಭಿಕ ಚಿತ್ರ (credit: indiatvnews.com)

ಹೊಸದಿಲ್ಲಿ: ಬಿಹಾರದಿಂದ ಮಹಾರಾಷ್ಟ್ರಾಗೆ 59 ಮಕ್ಕಳ ಕಳ್ಳಸಾಗಣಿಕೆ ನಡೆಸಿದ ಆರೋಪದ ಮೇಲೆ ಮೇ 2023ರಲ್ಲಿ ಬಂಧಿತರಾಗಿದ್ದ ಮತ್ತು ನಾಲ್ಕು ವಾರಗಳ ಕಾಲ ಜೈಲಿನಲ್ಲಿದ್ದ ಐದು ಮಂದಿ ಮದರಸಾ ಶಿಕ್ಷಕರ ವಿರುದ್ಧದ ಎರಡು ಕ್ರಿಮಿನಲ್‌ ಪ್ರಕರಣಗಳನ್ನು ಮನ್ಮಾಡ್‌ ಮತ್ತು ಭುಸವಲ್‌ನ ಸರ್ಕಾರಿ ರೈಲ್ವೆ ಪೊಲೀಸರ ಕೈಬಿಟ್ಟಿದ್ದಾರೆ. ಈ ಮಕ್ಕಳನ್ನು ಬಾಲಕಾರ್ಮಿಕರಾಗಿ ಬಳಸಲು ಕರೆದೊಯ್ಯಲಾಗುತ್ತಿತ್ತು ಎಂದು ಆರೋಪಿಸಲಾಗಿತ್ತು. ತಪ್ಪು ಅಭಿಪ್ರಾಯದಿಂದಾಗಿ ಎಫ್‌ಐಆರ್‌ಗಳು ದಾಖಲಾಗಿವೆ ಎಂದು ಹೇಳಿ ಪ್ರಕರಣವನ್ನು ಈ ವರ್ಷದ ಮಾರ್ಚ್‌ನಲ್ಲಿ ಮುಚ್ಚಲಾಗಿದೆ ಎಂದು ಜಿಆರ್‌ಪಿ ಅಧಿಕಾರಿಗಳು ತಿಳಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.

ಮಹಾರಾಷ್ಟ್ರದ ರೈಲ್ವೆ ಮಹಾನಿರ್ದೇಶಕರಾದ ಪ್ರದ್ನ್ಯಾ ಸರವಡೆ ಕೂಡ ಈ ಮಾಹಿತಿಯನ್ನು ದೃಢಪಡಿಸಿದ್ದಾರೆ.

ಮೇ 30, 2023ರಂದು 59 ಮಕ್ಕಳು ಬಿಹಾರದ ಅರಾರಿಯಾ ಜಿಲ್ಲೆಯಿಂದ ಪುಣೆ ಮತ್ತು ಸಾಂಗ್ಲಿಗೆ ರೈಲಿನಲ್ಲಿ ತೆರಳುತ್ತಿದ್ದರು. ಮದರಸಾಗಳಲ್ಲಿ ಇಸ್ಲಾಮಿಕ್ ಧರ್ಮಶಾಸ್ತ್ರ ಶಿಕ್ಷಣಕ್ಕಾಗಿ ಈ 8-17 ವಯೋಮಿತಿಯ ಮಕ್ಕಳು ತೆರಳುತ್ತಿದ್ದರು. ದಿಲ್ಲಿಯ ಬಾಲಾಪರಾಧಿಗಳ ನ್ಯಾಯ ಮಂಡಳೀಯ ಹಿರಿಯ ಅಧಿಕಾರಿಯೊಬ್ಬರು ನೀಡಿದ ಮಾಹಿತಿಯ ಆಧಾರದಲ್ಲಿ ರೈಲ್ವೆ ರಕ್ಷಣಾ ಪಡೆಯು ಎನ್‌ಜಿಒ ಒಂದರ ಸಹಕಾರದೊಂದಿಗೆ ಈ ಮಕ್ಕಳನ್ನು ಭುಸವಲ್‌ ಮತ್ತು ಮನ್ಮಾದ್‌ ನಿಲ್ದಾಣಗಳಲ್ಲಿ ತಡೆದು ವಶಕ್ಕೆ ಪಡೆದಿದ್ದರು.

ಮಕ್ಕಳನ್ನು ನಾಶಿಕ್‌ ಮತ್ತು ಭುಸವಲ್‌ನಲ್ಲಿರುವ ಆಶ್ರಯತಾಣಗಳಲ್ಲಿ 12 ದಿನಗಳ ಕಾಲ ಇರಿಸಲಾಗಿತ್ತು. ಅವರನ್ನು ಬಾಲಕಾರ್ಮಿಕರಾಗಿ ದುಡಿಸಲು ಕರೆದೊಯ್ಯಲಾಗುತ್ತಿತ್ತು ಎಂದು ಅಧಿಕಾರಿಗಳು ಶಂಕಿಸಿದ್ದರು. ಮಕ್ಕಳ ಹೆತ್ತವರು ಅವರನ್ನು ವಾಪಸ್‌ ತಮ್ಮ ವಶಕ್ಕೆ ನೀಡುವಂತೆ ಆಗ್ರಹಿಸಿದ ನಂತರ ನಾಶಿಕ್‌ ಜಿಲ್ಲಾಡಳಿತ ಮಕ್ಕಳನ್ನು ಮತ್ತೆ ಬಿಹಾರಕ್ಕೆ ವಾಪಸ್‌ ಕಳಿಸಿತ್ತು.

ಈ ಮಕ್ಕಳ ಜೊತೆಗಿದ್ದ ಐದು ಮಂದಿ ಮದರಸಾ ಪ್ರತಿನಿಧಿಗಳು ತಾವು ಪ್ರಯಾಣಿಸುತ್ತಿದ್ದ ಉದ್ದೇಶ ಹಾಗೂ ಅದಕ್ಕೆ ಪೂರಕ ದಾಖಲೆಗಳನ್ನು ಒದಗಿಸಲು ವಿಫಲರಾಗಿದ್ದರಿಂದ ಮಾನವ ಕಳ್ಳಸಾಗಣಿಕೆಗೆ ಸಂಬಂಧಿಸಿದಂತೆ ಐಪಿಸಿ ಸೆಕ್ಷನ್‌ 370 ಹಾಗೂ ಸೆಕ್ಷನ್‌ 34 ಅಡಿ ಅವರ ವಿರುದ್ಧ ಪ್ರಕರಣ ದಾಖಲಾಗಿತ್ತು.

ಬಂಧಿತರನ್ನು ಸಾಂಗ್ಲಿ ನಿವಾಸಿ ಮೊಹಮ್ಮದ್‌ ಅಂಜೂರ್‌ ಆಲಂ ಮೊಹಮ್ಮದ್‌ ಸೆಯ್ಯದ್‌ ಅಲಿ (34), ಅರಾರಿಯಾ ನಿವಾಸಿಗಳಾದ ಸದ್ದಾಂ ಹುಸೈನ್‌ ಸಿದ್ದೀಖಿ (23), ನೋಮನ್‌ ಆಲಂ ಸಿದ್ದೀಖಿ (28), ಇಜಾಝ್‌ ಝಿಯಾಬುಲ್‌ ಸಿದ್ದೀಖಿ (40) ಮತ್ತು ಮುಹಮ್ಮದ್‌ ಶಹನವಾಝ್‌ ಹರೂನ್‌ (22) ಎಂದು ಗುರುತಿಸಲಾಗಿತ್ತು.

ತನಿಖೆಯ ಭಾಗವಾಗಿ ಜಿಆರ್‌ಪಿ ಅಧಿಕಾರಿಗಳು ಅರಾರಿಯಾಗೆ ತೆರಳಿ ಆರೋಪಿಗಳು ಮತ್ತು ಮಕ್ಕಳ ದಾಖಲೆಗಳನ್ನು ಪರಿಶೀಲಿಸಿದ್ದರು ಹಾಗೂ ಈ ಮಕ್ಕಳು ಹೋಗಬೇಕಿದ್ದ ಮದರಸಾವನ್ನೂ ಪರಿಶೀಲಿಸಿದ್ದರು.

ಪರಿಶೀಲನೆ ಹಾಗೂ ತನಿಖೆಯ ನಂತರ ಮಾನವ ಕಳ್ಳಸಾಗಣಿಕೆ ಉದ್ದೇಶವಿಲ್ಲ ಎಂದು ತಿಳಿದು ಬಂದ ನಂತರ ಸಿ-ಸಮ್ಮರಿ ಮುಚ್ಚುಗಡೆ ವರದಿ ನ್ಯಾಯಾಲಯಕ್ಕೆ ಸಲ್ಲಿಸಲಾಯಿತು ಎಂದು ಜಿಆರ್‌ಪಿ ಇನ್‌ಸ್ಪೆಕ್ಟರ್‌ ಶರದ್‌ ಜೋಗದಂದ್‌ ಹೇಳಿದ್ದಾರೆ.

ಐದು ಮಂದಿ ಮದರಸಾ ಶಿಕ್ಷಕರ ವಿರುದ್ಧ ಪ್ರಕರಣ ಕೈಬಿಡಲಾಗಿದೆಯಾದರೂ ಇದರಿಂದ ಅವರಿಗೆ ತೀವ್ರ ಮಾನಸಿಕ ಯಾತನೆಯಾಗಿದೆ. ಘಟನೆಯ ನಂತರ ಕುಟುಂಬ ಅದೆಷ್ಟು ಭಯಗೊಂಡಿತ್ತೆಂದರೆ ಉದ್ಯೋಗಕ್ಕಾಗಿ ಸೌದಿ ಅರೇಬಿಯಾಗೆ ತೆರಳುವ ನಿರ್ಧಾರ ಕೈಬಿಡಬೇಕಾಯಿತು ಎಂದು ಮೊಹಮ್ಮದ್‌ ಶಾನವಾಝ್‌ ಹರೂನ್‌ ಹೇಳುತ್ತಾರೆ.

ಮಕ್ಕಳ ಆಧಾರ್‌ ಕಾರ್ಡ್‌ಗಳೆಲ್ಲವೂ ಇದ್ದವು, ಅವರ ಹೆತ್ತವರ ಜೊತೆ ಮಾತನಾಡಿಸುವುದಾಗಿ ಪೊಲೀಸರಿಗೆ ತಿಳಿಸಿದರೂ ಸ್ಥಳೀಯ ಸರಪಂಚ ಅಥವಾ ಹೆತ್ತವರ ಪತ್ರಗಳನ್ನು ಪೊಲೀಸರು ಕೇಳಿದ್ದರು. ಅದು ನಮ್ಮ ಬಳಿ ಇರಲಿಲ್ಲ ಎಂದು ಸದ್ದಾಂ ಹುಸೈನ್‌ ಸಿದ್ದೀಖಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News