ಅರುಣಾಚಲ ಪ್ರದೇಶ ಭಾರತದ ಅವಿಭಾಜ್ಯ ಭಾಗವಾಗಿದೆ : ಚೀನಾವನ್ನು ತರಾಟೆಗೆತ್ತಿಕೊಂಡ ಕೇಂದ್ರ

Update: 2024-04-02 15:12 GMT

ಹೊಸದಿಲ್ಲಿ : ಅರುಣಾಚಲ ಪ್ರದೇಶದ ವಿವಿಧ ಸ್ಥಳಗಳಿಗೆ ಮರುನಾಮಕರಣ ಮಾಡಿದ್ದಕ್ಕಾಗಿ ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಚೀನಾವನ್ನು ತರಾಟೆಗೆತ್ತಿಕೊಂಡಿದೆ. ಹೊಸ ಹೆಸರುಗಳನ್ನು ನೀಡುವುದು ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಭಾಗವಾಗಿದೆ ಎನ್ನುವ ಸತ್ಯವನ್ನು ಬದಲಿಸುವುದಿಲ್ಲ ಎಂದು ಅದು ಪ್ರತಿಪಾದಿಸಿದೆ.

ಭಾರತದ ಅರುಣಾಚಲ ಪ್ರದೇಶದಲ್ಲಿಯ ಸ್ಥಳಗಳನ್ನು ಮರುನಾಮಕರಣಗೊಳಿಸುವ ತನ್ನ ಅರ್ಥಹೀನ ಪ್ರಯತ್ನಗಳನ್ನು ಚೀನಾ ಮುಂದುವರಿಸಿದೆ ಎಂದು ಹೇಳಿಕೆಯಲ್ಲಿ ತಿಳಿಸಿರುವ ಸಚಿವಾಲಯವು,ಅರುಣಾಚಲ ಪ್ರದೇಶವು ಭಾರತದ ಅವಿಭಾಜ್ಯ ಮತ್ತು ಬೇರ್ಪಡಿಸಲಾಗದ ಭಾಗವಾಗಿ ಮುಂದುವರಿಯಲಿದೆ ಎಂದು ಒತ್ತಿ ಹೇಳಿದೆ.

ಅರುಣಾಚಲ ಪ್ರದೇಶದಲ್ಲಿಯ ವಿವಿಧ ಸ್ಥಳಗಳಿಗೆ 30 ಹೊಸ ಹೆಸರುಗಳ ನಾಲ್ಕನೇ ಪಟ್ಟಿಯನ್ನು ಚೀನಾ ಬಿಡುಗಡೆಗೊಳಿಸಿದ ಹಿನ್ನೆಲೆಯಲ್ಲಿ ಸೋಮವಾರ ವಿದೇಶಾಂಗ ವ್ಯವಹಾರಗಳ ಸಚಿವ ಎಸ್.ಜೈಶಂಕರ್ ಅವರು ಅದರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದರು. ಕೆಲವು ದಿನಗಳ ಹಿಂದಷ್ಟೇ ಅವರು ಅರುಣಾಚಲದ ಮೇಲೆ ಚೀನಾದ ಹಕ್ಕು ಸಾಧನೆಯನ್ನು ತಳ್ಳಿ ಹಾಕಿದ್ದರು.

ಅರುಣಾಚಲ ಪ್ರದೇಶದಲ್ಲಿಯ ಸ್ಥಳಗಳಿಗೆ ಚೀನಾ ಮರುನಾಮಕರಣ ಮಾಡುವುದನ್ನು ತಿರಸ್ಕರಿಸುತ್ತಲೇ ಬಂದಿರುವ ಭಾರತವು , ರಾಜ್ಯವು ದೇಶದ ಅವಿಭಾಜ್ಯ ಭಾಗವಾಗಿದೆ ಮತ್ತು ‘ಆವಿಷ್ಕರಿಸಿದ’ ಹೆಸರುಗಳನ್ನು ನೀಡುವುದರಿಂದ ಈ ವಾಸ್ತವವು ಬದಲಾಗುವುದಿಲ್ಲ ಎಂದು ಪ್ರತಿಪಾದಿಸಿದೆ.

ಚೀನಾದ ನಾಗರಿಕ ವ್ಯವಹಾರಗಳ ಸಚಿವಾಲಯವು ಝಂಗ್ನಾನ್ನಲ್ಲಿ ಪ್ರಮಾಣೀಕೃತ ಭೌಗೋಳಿಕ ಹೆಸರುಗಳ ನಾಲ್ಕನೇ ಪಟ್ಟಿಯನ್ನು ಬಿಡುಗಡೆಗೊಳಿಸಿದೆ ಎಂದು ಸರಕಾರಿ ಸ್ವಾಮ್ಯದ ಗ್ಲೋಬಲ್ ಟೈಮ್ಸ್ ರವಿವಾರ ವರದಿ ಮಾಡಿತ್ತು. ಮೇ 1ರಿಂದ ಈ ಹೆಸರುಗಳು ಜಾರಿಗೆ ಬರಲಿವೆ ಎಂದು ಅದು ತಿಳಿಸಿತ್ತು.

ಅರುಣಾಚಲ ಪ್ರದೇಶವನ್ನು ‘ಝಂಗ್ನಾನ್’ ಎಂದು ಕರೆಯುವ ಚೀನಾ ಅದು ದಕ್ಷಿಣ ಟಿಬೆಟ್ನ ಭಾಗವಾಗಿದೆ ಮತ್ತು 90,000 ಚ.ಕಿ.ಮೀ.ಪ್ರದೇಶವು ತನಗೆ ಸೇರಿದ್ದು ಎಂದು ವಾದಿಸುತ್ತಿದೆ.

ಸೇಲಾ ಸುರಂಗದ ಉದ್ಘಾಟನೆಗಾಗಿ ಪ್ರಧಾನಿ ನರೇಂದ್ರ ಮೋದಿಯವರ ಅರುಣಾಚಲ ಪ್ರದೇಶಕ್ಕೆ ಭೇಟಿಯ ಕುರಿತು ಭಾರತಕ್ಕೆ ರಾಜತಾಂತ್ರಿಕ ಪ್ರತಿಭಟನೆ ಯನ್ನು ಸಲ್ಲಿಸುವುದರೊಂದಿಗೆ ಚೀನಾ ರಾಜ್ಯದ ಮೇಲೆ ತನ್ನ ಹಕ್ಕನ್ನು ಪುನರುಚ್ಚರಿಸಿ ಹೇಳಿಕೆಗಳನ್ನು ನೀಡುವುದನ್ನು ಮತ್ತೆ ಆರಂಭಿಸಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News