ಹೈಕೋರ್ಟುಗಳಲ್ಲಿ ವಿಲೇವಾರಿಗೆ ಕಾಯುತ್ತಿದೆ 30 ವರ್ಷಕ್ಕಿಂತ ಹಳೆಯ 62 ಸಾವಿರ ಪ್ರಕರಣಗಳು ; ವರದಿ
ಹೊಸದಿಲ್ಲಿ : ವಿವಿಧ ರಾಜ್ಯಗಳ ಹೈಕೋರ್ಟುಗಳಲ್ಲಿ 30 ವರ್ಷಕ್ಕಿಂತ ಹಳೆಯದಾದ ಸುಮಾರು 62 ಸಾವಿರ ಪ್ರಕರಣಗಳು ಇನ್ನೂ ಇತ್ಯರ್ಥವಾಗದೇ ಬಾಕಿ ಉಳಿದಿವೆ ಎಂದು ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ (ಎನ್‌ಜೆಡಿಜಿ) ವರದಿ ತಿಳಿಸಿದೆ.
ಹೈಕೋರ್ಟ್‌ಗಳಲ್ಲಿ ಬಾಕಿ ಉಳಿದಿರುವ ಒಟ್ಟು 58.59 ಲಕ್ಷ ಪ್ರಕರಣಗಳ ಪೈಕಿ 42.64 ಲಕ್ಷ ಸಿವಿಲ್ ಮತ್ತು 15.94 ಲಕ್ಷ ಕ್ರಿಮಿನಲ್ ಪ್ರಕರಣಗಳಾಗಿವೆ. ರಾಷ್ಟ್ರೀಯ ನ್ಯಾಯಾಂಗ ದತ್ತಾಂಶ ಗ್ರಿಡ್ (ಎನ್‌ಜೆಡಿಜಿ) ಪ್ರಕಾರ ಹೈಕೋರ್ಟ್‌ಗಳಲ್ಲಿ 20ರಿಂದ 30 ವರ್ಷಗಳಷ್ಟು ಹಳೆಯದಾದ ಸುಮಾರು 2.45 ಲಕ್ಷ ಪ್ರಕರಣಗಳು ಬಾಕಿಯಿದೆ.
ಅಧಿಕೃತ ಮಾಹಿತಿಯ ಪ್ರಕಾರ, 1952ರಿಂದ 3 ಪ್ರಕರಣಗಳು ವಿಲೇವಾರಿಗೆ ಕಾಯುತ್ತಿವೆ. 1954ರಿಂದ 4 ಮತ್ತು 1955ರಿಂದ 9 ಪ್ರಕರಣಗಳು ಬಾಕಿ ಉಳಿದಿವೆ.1952ರಿಂದ ಬಾಕಿ ಉಳಿದಿರುವ ಮೂರು ಪ್ರಕರಣಗಳಲ್ಲಿ ಕಲ್ಕತ್ತ ಹೈಕೋರ್ಟ್‌ನಲ್ಲಿ ಎರಡು ಮತ್ತು ಮದ್ರಾಸ್ ಹೈಕೋರ್ಟ್‌ನಲ್ಲಿ ಒಂದು ಪ್ರಕರಣವಿದೆ.
ಜಿಲ್ಲಾ ನ್ಯಾಯಾಲಯಗಳು, ಹೈಕೋರ್ಟ್‌ಗಳು ಮತ್ತು ಸುಪ್ರೀಂ ಕೋರ್ಟ್ ಸೇರಿದಂತೆ ದೇಶದಾದ್ಯಂತ ವಿವಿಧ ನ್ಯಾಯಾಲಗಳಲ್ಲಿ ಐದು ಕೋಟಿಗೂ ಅಧಿಕ ಪ್ರಕರಣಗಳು ಬಾಕಿ ಉಳಿದಿವೆ ಎಂದು ತಿಳಿದು ಬಂದಿದೆ.