10 ವರ್ಷಗಳ ಹಿಂದೆ ಭಾರತ ಈಗಿನಂತೆ ಇರಲಿಲ್ಲ: ಪ್ರಧಾನಿ ಮೋದಿ, ಸಿಎಂ ಆದಿತ್ಯನಾಥ್ ಅವರನ್ನು ಹೊಗಳಿದ ಉಪರಾಷ್ಟ್ರಪತಿ ಜಗದೀಪ್ ಧನ್ಕರ್
ಗೋರಖ್‌ಪುರ : 680 ಶತಕೋಟಿ ಡಾಲರ್‌ಗಳ ವಿದೇಶಿ ವಿನಿಮಯ ಸಂಗ್ರಹದೊಂದಿಗೆ ಭಾರತವು ಆರ್ಥಿಕ ಬಿಕ್ಕಟ್ಟಿನಿಂದಾಗುವ ಏರಿಳಿತಕ್ಕೆ ಚಿನ್ನವನ್ನು ಒತ್ತೆ ಇಡಬೇಕಾದ ಸಮಯದಿಂದ ಬಹಳ ದೂರ ಸಾಗಿದೆ ಎಂದು ಉಪಾಧ್ಯಕ್ಷ ಜಗದೀಪ್ ಧನ್ಕರ್ ಶನಿವಾರ ಹೇಳಿದ್ದಾರೆ.
ಗೋರಖ್‌ಪುರದ ಉತ್ತರ ಪ್ರದೇಶದ ಸೈನಿಕ ಶಾಲೆಯ ಉದ್ಘಾಟನಾ ಕಾರ್ಯಕ್ರಮದಲ್ಲಿ ಉಪರಾಷ್ಟ್ರಪತಿ ಧನ್ಕರ್ ಮಾತನಾಡುತ್ತಿದ್ದರು.
"10 ವರ್ಷಗಳ ಹಿಂದೆ ಭಾರತ ಈಗಿನಂತೆ ಇರಲಿಲ್ಲ . 'ಬಂಗಾರದ ಹಕ್ಕಿ' ಎಂದೇ ಹೆಸರಾಗಿದ್ದ ದೇಶವು ವಿದೇಶಿ ಬ್ಯಾಂಕ್‌ಗಳಲ್ಲಿ ಚಿನ್ನವನ್ನು ಒತ್ತೆ ಇಡಬೇಕಾದ ಸಮಯವಿತ್ತು. ಆಗ ನಮ್ಮ ವಿದೇಶಿ ವಿನಿಮಯ 1 ಶತಕೋಟಿ ಡಾಲರ್ ಮತ್ತು 2 ಶತಕೋಟಿ ಡಾಲರ್ ನಡುವೆಯಿತ್ತು. ಇಂದು ಆ ಸಂಖ್ಯೆ 680 ಶತಕೋಟಿ ಡಾಲರ್ ಆಗಿದೆ. 10 ವರ್ಷಗಳಲ್ಲಿ ನಾವು ಮಾಡಿದ ಪ್ರಗತಿಯನ್ನೊಮ್ಮೆ ನೋಡಿ," ಎಂದು ಅವರು ಹೇಳಿದರು.
ಆ.30 ರಂದು ಕೊನೆಗೊಂಡ ವಾರದಲ್ಲಿ ಭಾರತದ ವಿದೇಶಿ ವಿನಿಮಯ ಸಂಗ್ರಹವು 2.299 ಶತಕೋಟಿ ಡಾಲರ್ ನಿಂದ 683.987 ಶತಕೋಟಿ ಡಾಲರ್ ಗೆ ಜಿಗಿದಿದೆ.
ಉಪರಾಷ್ಟ್ರಪತಿಯವರು ಪ್ರಧಾನಿ ನರೇಂದ್ರ ಮೋದಿಯವರಿಂದಾಗಿ ಭಾರತದ ಅರ್ಥಿಕತೆ ಈ ದಿಕ್ಕಿನಲ್ಲಿ ಸಾಗಿದೆ ಎಂದು ಶ್ಲಾಘಿಸಿದರು. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ನೇತೃತ್ವದಲ್ಲಿ ಉತ್ತರ ಪ್ರದೇಶವೂ ಈ ಬೆಳವಣಿಗೆಯಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸಿದೆ ಎಂದು ಜಗದೀಪ್ ಧನ್ಕರ್ ಹೇಳಿದರು.
"1990ರಲ್ಲಿ ನಾನು ಕಾಶ್ಮೀರಕ್ಕೆ ಭೇಟಿ ನೀಡಿದಾಗ ಅಲ್ಲಿ ಪ್ರವಾಸಿಗರೇ ಇರಲಿಲ್ಲ. ನಿರ್ಜನವಾಗಿದ್ದ ಶ್ರೀನಗರ ನನ್ನನ್ನು ಸ್ವಾಗತಿಸಿತು. ಈಗ, ಕಳೆದ ಎರಡರಿಂದ ಮೂರು ವರ್ಷಗಳಲ್ಲಿ, ಎರಡು ಕೋಟಿ ಪ್ರವಾಸಿಗರು ಕಾಶ್ಮೀರಕ್ಕೆ ಭೇಟಿ ನೀಡಿದ್ದಾರೆ" ಎಂದು ಅವರು ಹೇಳಿದರು.
ಸಂವಿಧಾನ ರಚನೆಯ ಸಮಯದಲ್ಲಿ ʼತಾತ್ಕಾಲಿಕʼ ಎಂದಿದ್ದ 370 ನೇ ವಿಧಿಯನ್ನು ಕೆಲವರು ʼಶಾಶ್ವತʼ ಎಂದು ಪರಿಗಣಿಸಿದ್ದಾರೆ. ಈಗ ಅದನ್ನು ರದ್ದುಗೊಳಿಸಲಾಗಿದೆ. ಇದು ಇಂದಿನ ಭಾರತ ಎಂದು ಉಪ ರಾಷ್ಟ್ರಪತಿ ಧನ್ಕರ್ ಉಲ್ಲೇಖಿಸಿದರು.
ರಾಷ್ಟ್ರೀಯತೆಯೊಂದಿಗೆ ರಾಜಿ ಮಾಡಿಕೊಂಡರೆ ದೇಶಕ್ಕೆ ದ್ರೋಹ ಬಗೆದಂತಾಗುತ್ತದೆ. ಈ ರೀತಿ ಮಾಡುವವರಿಗೆ ತಿಳುವಳಿಕೆ ನೀಡಬೇಕು.ಇಲ್ಲದಿದ್ದರೆ ಸಾರ್ವಜನಿಕರು ಅವರ ವಿರುದ್ಧ ಆಧ್ಯಾತ್ಮಿಕವಾಗಿ ಪ್ರತೀಕಾರ ತೀರಿಸಿಕೊಳ್ಳಬೇಕಾಗುತ್ತದೆ. ಯಾರಾದರೂ ರಾಷ್ಟ್ರವನ್ನು ಪ್ರಶ್ನಿಸಿದಾಗ, ನಾವು ಅದನ್ನು ಸಹಿಸುವುದಿಲ್ಲ. ಈ ರೀತಿ ಭಾರತದಲ್ಲಿ ಸಂಭವಿಸುವುದಿಲ್ಲ ಎಂದು ನನಗೆ ಖಾತ್ರಿಯಿದೆ ಎಂದು ಉಪರಾಷ್ಟ್ರಪತಿಗಳು ಹೇಳಿದರು.
ಉತ್ತರ ಪ್ರದೇಶವನ್ನು "ಉತ್ತಮ ಪ್ರದೇಶ" ಎಂದು ಕರೆದ ಧನ್ಕರ್, ಆದಿತ್ಯನಾಥ್ ಸರಕಾರದ ಅಭಿವೃದ್ಧಿಗೆ ಪ್ರಶಂಸೆ ವ್ಯಕ್ತಪಡಿಸಿದರು."ಇಂದು, ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ, ಉತ್ತರ ಪ್ರದೇಶವು ಭಾರತದ ಬೆಳವಣಿಗೆಯಲ್ಲಿ ಗುಣಾತ್ಮಕ ಕೊಡುಗೆಯನ್ನು ನೀಡಿದೆ" ಎಂದು ಅವರು ಹೇಳಿದರು.
ಆದಿತ್ಯನಾಥ್ ನೇತೃತ್ವದಲ್ಲಿ ಉತ್ತರ ಪ್ರದೇಶದ ಬದಲಾವಣೆಗಳನ್ನು ಉಲ್ಲೇಖಿಸಿದ ಉಪರಾಷ್ಟ್ರಪತಿಗಳು, 2017 ರ ನಂತರ ಶಿಕ್ಷಣ, ವೈದ್ಯಕೀಯ, ಉದ್ಯಮಶೀಲತೆ ಮತ್ತು ಇತರ ಕ್ಷೇತ್ರಗಳಲ್ಲಿ ರಾಜ್ಯದಲ್ಲಿ ಗುಣಾತ್ಮಕ ಬೆಳವಣಿಗೆ ಕಂಡುಬಂದಿದೆ ಎಂದು ಹೇಳಿದರು.
ಅದಕ್ಕೂ ಮುನ್ನ ಉತ್ತರ ಪ್ರದೇಶ ಭಯದ ಸುಳಿಯಲ್ಲಿತ್ತು. ಕಾನೂನು ಸುವ್ಯವಸ್ಥೆ ಸರಿಯಾಗಿಲ್ಲ, ಜನಸಾಮಾನ್ಯರು ತೊಂದರೆಗೀಡಾಗಿದ್ದರು ಎಂದು ಆರೋಪಿಸಿದರು.