‌ಖ್ಯಾತ ಸಾಹಿತಿ ಅರುಂಧತಿ ರಾಯ್‌ ಅವರಿಗೆ ಪ್ರತಿಷ್ಠಿತ ʼಪೆನ್‌ ಪಿಂಟರ್‌ʼ ಪ್ರಶಸ್ತಿ

Update: 2024-06-27 10:31 GMT

ಅರುಂಧತಿ ರಾಯ್‌ (PTI)

ಹೊಸದಿಲ್ಲಿ: ಖ್ಯಾತ ಭಾರತೀಯ ಲೇಖಕಿ, ಹೋರಾಟಗಾರ್ತಿ ಅರುಂಧತಿ ರಾಯ್‌ ಅವರು ಪ್ರತಿಷ್ಠಿತ ʼಪೆನ್‌ ಪಿಂಟರ್‌ʼ ಪ್ರಶಸ್ತಿಯನ್ನು ಗಳಿಸಿದ್ದಾರೆ. ರಂಗಕರ್ಮಿ ಹೆರೋಲ್ಡ್‌ ಪಿಂಟರ್‌ ಅವರ ಸ್ಮರಣಾರ್ಥ ನೀಡಲಾಗುವ ಈ ಪ್ರಶಸ್ತಿಯನ್ನು ಸಾಹಿತ್ಯದಲ್ಲಿ ಅಪರಿಮಿತ ಸಾಧನೆಗೈದವರಿಗೆ ನೀಡಲಾಗುತ್ತಿದೆ.

ಅನ್ಯಾಯದ ಕಥೆಗಳನ್ನು ಚಾತುರ್ಯ ಹಾಗೂ ಸುಂದರವಾಗಿ ತಿಳಿಸುವ ಅರುಂಧತಿ ರಾಯ್‌ ಅವರ ಅಪಾರ ಪ್ರತಿಭೆಯನ್ನು ಇಂಗ್ಲಿಷ್‌ ಪೆನ್‌ ಅಧ್ಯಕ್ಷ ರುತ್‌ ಬೊರ್ತ್‌ವಿಕ್‌ ಶ್ಲಾಘಿಸಿದ್ದಾರೆ.

62 ವರ್ಷದ ಅರುಂಧತಿ ರಾಯ್‌ ಅವರು ಪೆನ್‌ ಪಿಂಟರ್‌ ಪ್ರಶಸ್ತಿಯನ್ನು ಅಕ್ಟೋಬರ್‌ 10ರಂದು ಬ್ರಿಟಿಷ್‌ ಲೈಬ್ರರಿ ಸಹಯೋಗದಲ್ಲಿ ನಡೆಯುವ ಸಮಾರಂಭದಲ್ಲಿ ಸ್ವೀಕರಿಸಲಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಸಮರ್ಥಿಸುವ ಮತ್ತು ಸಾಹಿತ್ಯವನ್ನು ಸಂಭ್ರಮಿಸುವ ಚ್ಯಾರಿಟಿ ಸಂಸ್ಥೆ ಇಂಗ್ಲಿಷ್‌ ಪೆನ್‌ ಈ ಪ್ರಶಸ್ತಿಯನ್ನು 2009ರಲ್ಲಿ ಸ್ಥಾಪಿಸಿತ್ತು.

ಈ ಪ್ರಶಸ್ತಿಗೆ ಆಯ್ಕೆಯಾಗಿರುವುದಕ್ಕೆ ಅರುಂಧತಿ ರಾಯ್‌ ಸಂತೋಷ ವ್ಯಕ್ತಪಡಿಸಿದ್ದಾರೆ. 1997ರಲ್ಲಿ ಅರುಂಧತಿ ರಾಯ್‌ ತಮ್ಮ ʼದಿ ಗಾಡ್‌ ಆಪ್‌ ಸ್ಮಾಲ್‌ ಥಿಂಗ್ಸ್ʼ ಕಾದಂಬರಿಗೆ ಬೂಕರ್‌ ಪ್ರಶಸ್ತಿ ಪಡೆದಿದ್ದರು.

ತಮ್ಮ ನೇರ ನಿರ್ಭೀತಿಯ ಮಾತುಗಳಿಗೆ ಹೆಸರು ಪಡೆದಿರುವ ಅರುಂಧತಿ ರಾಯ್‌ 2010ರಲ್ಲಿ ಕಾಶ್ಮೀರ ಕುರಿತು ನೀಡಿದ ಹೇಳಿಕೆಗಳಿಗೆ ಇತ್ತೀಚೆಗೆ ಅವರ ವಿರುದ್ಧ ಯುಎಪಿಎ ಅಡಿ ಪ್ರಕರಣ ದಾಖಲಿಸಲು ದಿಲ್ಲಿಯ ಲೆಫ್ಟಿನೆಂಟ್‌ ಗವರ್ನರ್‌ ಅನುಮತಿ ನೀಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - Irshad Venur

contributor

Byline - ವಾರ್ತಾಭಾರತಿ

contributor

Similar News