ವಿಶ್ವಾಸಮತ ಗೆದ್ದ ಕೇಜ್ರಿವಾಲ್; 2029ರೊಳಗೆ ದೇಶವನ್ನು ಬಿಜೆಪಿ ಮುಕ್ತಗೊಳಿಸುವುದಾಗಿ ಹೇಳಿದ ದಿಲ್ಲಿ ಸಿಎಂ
ಹೊಸದಿಲ್ಲಿ: ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಇಂದು ವಿಧಾನಸಭೆಯಲ್ಲಿ ವಿಶ್ವಾಸಮತ ಗೆದ್ದಿದ್ದಾರೆ. ನಂತರ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದ್ದಾರೆ.
“ದಿಲ್ಲಿ ವಿಧಾನಸಭೆಯನ್ನು ಕೊನೆಗೊಳಿಸಬೇಕೆಂದು ಹೇಳಿಕೊಂಡು ಹೋಗಿ ಮತ ಯಾಚಿಸಿ,” ಎಂದು ಪ್ರಧಾನಿಗೆ ಹೇಳಿದ ಕೇಜ್ರಿವಾಲ್, “ಅವರು ವಿಧಾನಸಭೆಯನ್ನು ಕೊನೆಗಾಣಿಸಿದರೂ ನಾನು ನಿಮಗಾಗಿ (ದಿಲ್ಲಿ ಮತದಾರರಿಗೆ) ಶ್ರಮಿಸುತ್ತೇನೆ,” ಎಂದು ಹೇಳಿದರು.
“ಬಿಜೆಪಿ ತನ್ನ ಭವಿಷ್ಯದ ಬಗ್ಗೆ ಭಯಹೊಂದಿದ್ದರೆ ಅದು ಆಪ್‌ನಿಂದಾಗಿ ಮಾತ್ರ. ಆ ಕಾರಣದಿಂದಾಗಿಯೇ ಆಪ್ ಅನ್ನು ಒಡೆಯಲು ಅವರು ಯತ್ನಿಸುತ್ತಿದ್ದಾರೆ. ಬಿಜೆಪಿ 2024 ಲೋಕಸಭಾ ಚುನಾವಣೆಯನ್ನು ಸೋಲದೇ ಇದ್ದರೆ, 2029ರೊಳಗಾಗಿ ಆಪ್ ಈ ದೇಶವನ್ನು ಬಿಜೆಪಿಮುಕ್ತವನ್ನಾಗಿಸಲಿದೆ" ಎಂದು ಅವರು ಹೇಳಿದರು.
“ಆಪ್ 12 ವರ್ಷಗಳ ಹಿಂದೆ ಆರಂಭಗೊಂಡಿತ್ತು. ದೇಶದಲ್ಲಿ ಸುಮಾರು 1,350 ಪಕ್ಷಗಳಿವೆ. ಆಪ್ ತನ್ನ ನೋಂದಣಿಗೆ ನವೆಂಬರ್ 26, 2012ರಂದು ಅರ್ಜಿ ಸಲ್ಲಿಸಿತ್ತು. ಇಗ ಅದು ಬಿಜೆಪಿ ಮತ್ತು ಕಾಂಗ್ರೆಸ್ ನಂತರ ದೇಶದ ಮೂರನೇ ಅತಿ ದೊಡ್ಡ ಪಕ್ಷವಾಗಿದೆ,” ಎಂದು ಹೇಳಿದರು.
“ಯಾವುದೇ ಆಪ್ ಶಾಸಕ ಪಕ್ಷಾಂತರ ಮಾಡಿಲ್ಲ, ಇಬ್ಬರು ಜೈಲಿನಲ್ಲಿದ್ದಾರೆ, ಕೆಲವರಿಗೆ ಅಸೌಖ್ಯವಿದೆ ಮತ್ತು ಕೆಲವರು ಹೊರ ಊರಿನಲ್ಲಿದ್ದಾರೆ,” ಎಂದು ಕೇಜ್ರಿವಾಲ್ ಹೇಳಿದರು.
ದಿಲ್ಲಿ ವಿಧಾನಸಭೆಯಲ್ಲಿ ಆಪ್‌ಗೆ ಬಹುಮತವಿದ್ದು 70 ಸದಸ್ಯರ ಸದನದಲ್ಲಿ 62 ಶಾಸಕರ ಬಲವಿದೆ. ಬಿಜೆಪಿಗೆ ಎಂಟು ಶಾಸಕರಿದ್ದು ಅವರಲ್ಲಿ ಏಳು ಮಂದಿ ಅಮಾನತುಗೊಂಡಿದ್ದಾರೆ.