ರೈಲುಗಳಲ್ಲಿ ಪ್ರಯಾಣಿಕರು ಜಾನುವಾರುಗಳಂತೆ ಪ್ರಯಾಣಿಸುವ ವಾತಾವರಣ ಸೃಷ್ಟಿಯಾಗಿರುವುದು ನಾಚಿಕಗೇಡು: ಬಾಂಬೆ ಹೈಕೋರ್ಟ್
ಮುಂಬೈ: ಮುಂಬೈ ಪ್ರದೇಶದ ಜೀವನಾಡಿ ಎನಿಸಿರುವ ಸ್ಥಳೀಯ ರೈಲುಗಳಲ್ಲಿ ಪ್ರಯಾಣಿಕರು ಜಾನುವಾರುಗಳಂತೆ ಪ್ರಯಾಣಿಸುವ ವಾತಾವರಣ ಸೃಷ್ಟಿಯಾಗಿರುವುದು ನಾಚಿಕಗೇಡು ಎಂದು ಬಾಂಬೆ ಹೈಕೋರ್ಟ್ ಆಕ್ಷೇಪಿಸಿದೆ.
ಅಧಿಕ ದಟ್ಟಣೆಯ ರೈಲುಗಳಿಂದ ಬಿದ್ದು ಪ್ರಯಾಣಿಕರು ಸಾಯುವ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಲ್ಲಿಕೆಯಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ "ಇದು ತೀರಾ ಗಂಭೀರ ಪ್ರಕರಣ; ಇದನ್ನು ಸೂಕ್ತವಾಗಿ ನಿಭಾಯಿಸಬೇಕಾದ ಅಗತ್ಯವಿದೆ" ಎಂದು ಸ್ಪಷ್ಟವಾಗಿ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಡಿ.ಕೆ.ಉಪಾಧ್ಯಾಯ ಮತ್ತು ನ್ಯಾಯಮೂರ್ತಿ ಅಮಿತ್ ಬೋರ್ಕರ್ ಅವರನ್ನೊಳಗೊಂಡ ವಿಭಾಗೀಯ ಪೀಠ, "ಮುಂಬೈನ ಈ ದಯನೀಯ ಸ್ಥಿತಿಗೆ ಕೇಂದ್ರ ಮತ್ತು ಪಶ್ಚಿಮ ರೈಲ್ವೆ ನೇರ ಹೊಣೆ" ಎಂದು ಹೇಳಿದೆ. ಯತಿನ್ ಜಾಧವ್ ಎಂಬುವವರು ಈ ಪಿಐಎಲ್ ದಾಖಲಿಸಿದ್ದರು.
"ಈ ಪಿಐಎಲ್‍ನಲ್ಲಿ ತೀರಾ ಗಂಭೀರ ವಿಚಾರವನ್ನು ಪ್ರಸ್ತಾಪಿಸಲಾಗಿದೆ. ಆದ್ದರಿಂದ ನೀವು ಇದನ್ನು ಬಗೆಹರಿಸಲೇಬೇಕು. ನಗರದಲ್ಲಿ ದೊಡ್ಡ ಸಂಖ್ಯೆಯ ಜನ ಇರುವುದರಿಂದ ನಾವು ಇದು ಮಾಡುವಂತಿಲ್ಲ; ಅದು ಮಾಡುವಂತಿಲ್ಲ ಎಂದು ನುಣುಚಿಕೊಳ್ಳಲು ಸಾಧ್ಯವಿಲ್ಲ. ನೀವು ಜನರನ್ನು ಜಾನುವಾರುಗಳಂತೆ ಒಯ್ಯುತ್ತೀರಿ. ಪ್ರಯಾಣಿಕರಿಗೆ ಇಂಥ ಪ್ರಯಾಣದ ಸ್ಥಿತಿಯನ್ನು ಹೇರಿರುವ ರೀತಿ ನಾಚಿಕೆಗೇಡು" ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.
ಪಶ್ಚಿಮ ಮತ್ತು ಕೇಂದ್ರ ರೈಲ್ವೆ ಪ್ರಧಾನ ವ್ಯವಸ್ಥಾಪಕರಿಗೆ ಈ ಬಗ್ಗೆ ಸ್ಪಷ್ಟ ಸೂಚನೆ ನೀಡಿರುವ ಹೈಕೋರ್ಟ್, ಈ ಸಮಸ್ಯೆ ಬಗ್ಗೆ ಸಮಗ್ರವಾಗಿ ಗಮನ ಹರಿಸಿ ಅಫಿಡವಿಟ್ ಸಲ್ಲಿಸುವಂತೆ ಸೂಚಿಸಿದೆ. ಇಂಥ ಅವಗಢಗಳನ್ನು ತಡೆಯಲು ಯಾವ ಕ್ರಮಗಳನ್ನು ಕೈಗೊಳ್ಳಲಾಗುತ್ತದೆ ಎಂಬ ಬಗ್ಗೆ ಜಿಎಂಗಳು ಸ್ವತಃ ಅಫಿಡವಿಟ್‍ನಲ್ಲಿ ಸ್ಪಷ್ಟಪಡಿಸಬೇಕು ಎಂದು ಆದೇಶ ನೀಡಿದೆ.