ಅಸ್ಸಾಂ | ತೆರವು ಕಾರ್ಯಾಚರಣೆ ; 150ಕ್ಕೂ ಅಧಿಕ ಮನೆಗಳ ನೆಲಸಮ
ಗುವಾಹಟಿ : ಅಸ್ಸಾಂನ ಕಾಮರೂಪ್ ಮೆಟ್ರಾಪಾಲಿಟಿನ್ ಜಿಲ್ಲೆಯ ಕಚುಟಲಿ ಗ್ರಾಮದಲ್ಲಿ ಜಿಲ್ಲಾಡಳಿತ ಮಂಗಳವಾರ ನಡೆಸಿದ ತೆರವು ಕಾರ್ಯಾಚರಣೆಯಲ್ಲಿ 150 ಮನೆಗಳನ್ನು ನೆಲಸಮಗೊಳಿಸಲಾಗಿದೆ.
ತೆರವು ಕಾರ್ಯಾಚರಣೆ ವೇಳೆ ನಡೆದ ಹಿಂಸಾತ್ಮಕ ಪ್ರತಿಭಟನೆ ಸಂದರ್ಭ ಪೊಲೀಸರ ಗುಂಡಿಗೆ ಇಬ್ಬರು ಬಲಿಯಾದ ಒಂದು ವಾರಗಳ ಒಳಗೆ ಈ ತೆರವು ಕಾರ್ಯಾಚರಣೆ ನಡೆದಿದೆ.
ಜಿಲ್ಲಾಡಳಿತದ ಅಧಿಕಾರಿಗಳು ಸೆಪ್ಟಂಬರ್ 9ರಂದು ಸುಮಾರು 240 ಮನೆಗಳನ್ನು ನೆಲಸಮಗೊಳಿಸಿದ್ದರು. ಇವುಗಳಲ್ಲಿ ಅತ್ಯಧಿಕ ಸಂಖ್ಯೆಯ ಮನೆಗಳು ಮೊರಿಗಾಂವ್ ಜಿಲ್ಲೆಯ ಬಂಗಾಳಿ ಮೂಲದ ಮುಸ್ಲಿಮರದ್ದಾಗಿತ್ತು. ಇವರು ಕಳೆದ ಕೆಲವು ದಶಕಗಳಿಂದ ಈ ತಗ್ಗು ಪ್ರದೇಶಗಳಲ್ಲಿ ಮನೆಗಳನ್ನು ನಿರ್ಮಿಸಿಕೊಂಡಿದ್ದರು.
ಮೂರು ದಿನಗಳ ಬಳಿಕ ಸೆಪ್ಟಂಬರ್ 12ರಂದು ಅಧಿಕಾರಿಗಳು ಮತ್ತೆ ಅಲ್ಲಿಗೆ ತೆರಳಿದ್ದರು. ಅಲ್ಲದೆ, ಅವರಿಗೆ ಅಲ್ಲಿನ ಭೂಮಿಯಿಂದ ತೆರವುಗೊಳ್ಳಲು 2 ಗಂಟೆಗಳ ಕಾಲಾವಕಾಶ ನೀಡಿದ್ದರು. ಇದು ನಿವಾಸಿಗಳು ಹಾಗೂ ಪೊಲೀಸರ ನಡುವಿನ ಘರ್ಷಣೆಗೆ ಕಾರಣವಾಗಿತ್ತು. ಈ ಘರ್ಷಣೆ ಸಂದರ್ಭ ಪೊಲೀಸರು ಹಾರಿಸಿದ ಗುಂಡಿಗೆ ಇಬ್ಬರು ಮೃತಪಟ್ಟಿದ್ದರು. 22 ಸರಕಾರಿ ಅಧಿಕಾರಿಗಳು ಹಾಗೂ ಪೊಲೀಸ್ ಅಧಿಕಾರಿಗಳು ಸೇರಿದಂತೆ 33 ಮಂದಿ ಗಾಯಗೊಂಡಿದ್ದರು.
ತೆರವುಗೊಳ್ಳುವಂತೆ ತಮಗೆ ಸೆಪ್ಟಂಬರ್ 13ರಂದು ನೀಡಲಾದ ನೋಟಿಸ್ ಅನ್ನು ಇಲ್ಲಿನ ನಿವಾಸಿಗಳು ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದರು. ಈ ಭೂಮಿ ಮೇಲೆ ತಮಗೆ ಹಕ್ಕಿದೆ ಎಂದು ಪ್ರತಿಪಾದಿಸಿದ್ದರು. ಬಳಿಕ ಉಚ್ಚ ನ್ಯಾಯಾಲಯ ಹಲವು ಕುಟುಂಬಗಳ ತೆರವಿಗೆ ಶುಕ್ರವಾರ ತಡೆ ನೀಡಿತ್ತು.
ಮಂಗಳವಾರ ತೆರವುಗೊಳಿಸಲಾದ ಮನೆಗಳು ಉಚ್ಚ ನ್ಯಾಯಾಲಯದಿಂದ ತೆರವಿಗೆ ತಡೆ ತಂದ ಕುಟುಂಬಗಳಿಗೆ ಸೇರಿಲ್ಲ ಎಂದು ಸೋನಾಪುರ ಸರ್ಕಲ್ ಅಧಿಕಾರಿ ನಿತುಲ್ ಖಟನಿಯಾರ್ ತಿಳಿಸಿದ್ದಾರೆ.
‘‘ಮೊದಲ ಹಂತದಲ್ಲಿ ನಾವು ಸರಕಾರಿ ಭೂಮಿಯಿಂದ ತೆರವು ಕಾರ್ಯಾಚರಣೆ ನಡೆಸಿದೆವು. ಇದು ಎರಡನೇ ಹಂತ. ಈಗ ವೈಯುಕ್ತಿಕ ಪಟ್ಟಾ ಭೂಮಿಯಿಂದ ತೆರವು ಕಾರ್ಯಾಚರಣೆ ನಡೆಸುತ್ತಿದ್ದೇವೆ’’ ಎಂದು ಅವರು ತಿಳಿಸಿದ್ದಾರೆ.