ಐಐಟಿ ಸೀಟು ವಂಚಿತ ದಲಿತ ಯುವಕನಿಗೆ ಸುಪ್ರೀಂ ಕೋರ್ಟ್ ನೆರವಿನ ಭರವಸೆ

Update: 2024-09-25 16:38 GMT

 ಸುಪ್ರೀಂ ಕೋರ್ಟ್ | PC  ; PTI

ಹೊಸದಿಲ್ಲಿ : ಪ್ರತಿಷ್ಠಿತ ಜೆಇಇ ಅಡ್ವಾನ್ಸ್‌ ಪರೀಕ್ಷೆಯಲ್ಲಿ ಕೊನೆಯ ಪ್ರಯತ್ನದಲ್ಲಿ ತೇರ್ಗಡೆಯಾಗಿ ಗಡುವಿನ ಒಳಗೆ 17,500 ರೂ. ಠೇವಣಿ ಇರಿಸಲು ವಿಫಲನಾಗಿ ಸೀಟು ಕಳೆದುಕೊಂಡಿರುವ ಬಡ ದಲಿತ ಯುವಕನಿಗೆ ಸುಪ್ರೀಂ ಕೋರ್ಟ್ ಬುಧವಾರ ನೆರವಿನ ಭರವಸೆ ನೀಡಿದೆ.

‘‘ನಾವು ಸಾಧ್ಯವಾದ ಮಟ್ಟಿಗೆ ನೆರವು ನೀಡುತ್ತೇವೆ. ಆದರೆ, ಶುಲ್ಕ ಠೇವಣಿ ಇರಿಸಲು ಜೂನ್ 24 ಕೊನೆಯ ದಿನವಾಗಿದ್ದಾಗಲೂ ಈ ಹಿಂದಿನ ಮೂರು ತಿಂಗಳು ನೀವು ಏನು ಮಾಡಿದಿರಿ’’ ಎಂದು ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್ ಹಾಗೂ ಮುಖ್ಯ ನ್ಯಾಯಮೂರ್ತಿಗಳಾದ ಜೆ.ಬಿ. ಪರ್ದಿಪಾಲ, ಮನೋಜ್ ಮಿಶ್ರಾ ಅವರನ್ನು ಒಳಗೊಂಡ ಪೀಠ 18 ವಯಸ್ಸಿನ ಅತುಲ್ ಕುಮಾರ್ ಅವರ ವಕೀಲರನ್ನು ಮಂಗಳವಾರ ಪ್ರಶ್ನಿಸಿತು.

ಅತುಲ್ ಕುಮಾರ್ ಅವರ ಬಡ ಕುಟುಂಬ ಉತ್ತರಪ್ರದೇಶದ ಮುಝಪ್ಫರ್‌ನಗರದ ಟಿಟೋರಾ ಗ್ರಾಮದಲ್ಲಿ ನೆಲಸಿದ್ದು, ತಂದೆ ದಿನಗೂಲಿ ಕಾರ್ಮಿಕರಾಗಿದ್ದಾರೆ. ಹಂಚಿಕೆಯಾದ ಸೀಟನ್ನು ಬ್ಲಾಕ್ ಮಾಡಲು ಜೂನ್ 24ರ ಒಳಗೆ 17,500 ರೂ.ಶುಲ್ಕವನ್ನು ಠೇವಣಿಯಾಗಿ ಇರಿಸಲು ಅತುಲ್ ಕುಮಾರ್ ಅವರ ಪಾಲಕರು ವಿಫಲರಾಗಿದ್ದರು.

ತಮ್ಮ ಸೀಟನ್ನು ಉಳಿಸಿಕೊಳ್ಳಲು ಅತುಲ್ ಕುಮಾರ್ ಅವರ ಪೋಷಕರು ರಾಷ್ಟ್ರೀಯ ಪರಿಶಿಷ್ಟ ಜಾತಿಗಳ ಆಯೋಗ, ಜಾರ್ಖಂಡ್ ಕಾನೂನು ಸೇವಾಗಳ ಪ್ರಾಧಿಕಾರವನ್ನು ಸಂಪರ್ಕಿಸಿದ್ದರು. ಪರೀಕ್ಷೆ ನಡೆಸಿದ್ದು ಐಐಟಿ ಮದ್ರಾಸ್. ಆದುದರಿಂದ ನೆರವು ಕೋರಿ ಮದ್ರಾಸ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸುವಂತೆ ಪ್ರಾಧಿಕಾರ ತಿಳಿಸಿತ್ತು. ಈ ವಿಷಯದ ಕುರಿತಂತೆ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸುವಂತೆ ಮದ್ರಾಸ್ ಉಚ್ಚ ನ್ಯಾಯಾಲಯ ತಿಳಿಸಿತ್ತು.

ಅತುಲ್ ಕುಮಾರ್ ಜೆಇಇ ಅಡ್ವಾನ್ಸ್‌ ಪರೀಕ್ಷೆಯನ್ನು ಎರಡನೇಯ ಹಾಗೂ ಕೊನೆಯ ಪ್ರಯತ್ನದಲ್ಲಿ ಉತ್ತೀರ್ಣರಾಗಿದ್ದಾರೆ. ಈ ಸಂದರ್ಭ ಆತನಿಗೆ ನೆರವು ನೀಡಲು ನ್ಯಾಯಾಲಯ ಮನಸು ಮಾಡಬೇಕು. ಯಾಕೆಂದರೆ, ಆತನಿಗೆ ಇನ್ನೊಮ್ಮೆ ಪರೀಕ್ಷೆ ಬರೆಯಲು ಅವಕಾಶ ಇಲ್ಲ ಎಂದು ಅತುಲ್ ಕುಮಾರ್ ಅವರ ನ್ಯಾಯವಾದಿ ಸುಪ್ರೀಂ ಕೋರ್ಟ್‌ಗೆ ತಿಳಿಸಿದರು.

ಸಂಕ್ಷಿಪ್ತ ವಾದ- ಪ್ರತಿವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್ ಈ ವರ್ಷ ಪರೀಕ್ಷೆ ನಡೆಸಿದ ಐಐಟಿ ಮದ್ರಾಸ್‌ನ ಐಐಟಿ ಪ್ರವೇಶಾತಿಯ ಜಂಟಿ ಸೀಟು ಹಂಚಿಕೆ ಪ್ರಾಧಿಕಾರಕ್ಕೆ ನೋಟಿಸು ಜಾರಿ ಮಾಡಿತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News