ಮಧ್ಯಪ್ರದೇಶ | ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿ ಬುಲ್ಡೋಝರ್ ಕಾರ್ಯಾಚರಣೆ

Update: 2024-09-25 14:58 GMT

PC ; PTI

ಭೋಪಾಲ್ : ಬುಲ್ಡೋಝರ್ ಕಾರ್ಯಾಚರಣೆ ನಡೆಸುವುದಕ್ಕೂ ಮುನ್ನ ತನ್ನ ಅನುಮತಿ ಪಡೆಯಬೇಕು ಎಂದು ಸೆಪ್ಟೆಂಬರ್ 17ರಂದು ಸುಪ್ರೀಂ ಕೋರ್ಟ್ ನೀಡಿದ್ದ ತೀರ್ಪನ್ನು ಉಲ್ಲಂಘಿಸಿರುವ ಮಧ್ಯಪ್ರದೇಶ ಸರಕಾರ, ಸೆಪ್ಟೆಂಬರ್ 24ರಂದು 70 ವರ್ಷದ ವಿಧವೆ ಬರ್ಕತ್ ಬಾಯಿ ಎಂಬ ಮಹಿಳೆಯ ನಿವಾಸವನ್ನು ಅತಿಕ್ರಮಣ ಎಂದು ಘೋಷಿಸಿ, ನೆಲಸಮಗೊಳಿಸಿರುವ ಘಟನೆ ನಡೆದಿದೆ.

2008ರಲ್ಲಿ ಮುಖ್ಯಮಂತ್ರಿ ಆಶ್ರಯ ಯೋಜನೆಯಡಿಯಲ್ಲಿ ಮಧ್ಯಪ್ರದೇಶದ ನೀಮುಚ್ ಜಿಲ್ಲೆಯಲ್ಲಿ ಶಿವರಾಜ್ ಸಿಂಗ್ ಚೌಹಾಣ್ ಸರಕಾರ ಮಂಜೂರು ಮಾಡಿದ್ದ ತುಂಡು ಭೂಮಿಯನ್ನು ಮಂಗಳವಾರ ಬೆಳಗ್ಗೆ ತೆರವುಗೊಳಿಸಲಾಗಿದೆ.

ಬರ್ಕತ್ ಬಾಯಿ ಅವರು ತಮ್ಮ ಅನಾರೋಗ್ಯಕ್ಕೆ ಚಿಕಿತ್ಸೆ ಪಡೆಯಲು ಹತ್ತಿರದ ಮತ್ತೊಂದು ಜಿಲ್ಲೆಗೆ ತೆರಳಿದ್ದ ಸಂದರ್ಭದಲ್ಲಿ ಅವರ ನಿವಾಸವನ್ನು ಮಹಾನಗರ ಪಾಲಿಕೆಯು ತೆರವುಗೊಳಿಸಿದೆ ಎಂದು ಅವರ ಕುಟುಂಬದ ಸದಸ್ಯರು ಆರೋಪಿಸಿದ್ದಾರೆ.

ಬರ್ಕತ್ ಬಾಯಿ ಅವರ ನಿವಾಸವನ್ನು ಯಾವುದೇ ನೋಟಿಸ್ ನೀಡದೆ ನೆಲಸಮಗೊಳಿಸಲಾಗಿದೆ ಎಂದು ಅವರ ಅಳಿಯ ಮುಹಮ್ಮದ್ ರಿಯಾಸ್ ಆರೋಪಿಸಿದ್ದಾರೆ. ಆಕೆ ತಮ್ಮ ನಿವಾಸವನ್ನು ತೊರೆಯುವಾಗ, ಮನೆಯ ಕಡೆ ಜೋಪಾನ ಎಂದು ಹೇಳಿ ಹೋಗಿದ್ದರು ಎಂದೂ ಅವರು ತಿಳಿಸಿದ್ದಾರೆ.

ಸರಕಾರಿ ಯೋಜನೆಯಡಿ ಸರಕಾರ ಮಂಜೂರು ಮಾಡಿರುವ ತುಂಡು ಭೂಮಿ ಅದು ಹೇಗೆ ಅತಿಕ್ರಮಣವಾಗುತ್ತದೆ ಎಂದು ಅವರು ಪ್ರಶ್ನಿಸಿದ್ದಾರೆ.

ಭೂದಾಖಲೆಗಳ ಪ್ರಕಾರ, ಮನೆ ನಿರ್ಮಿಸಿಕೊಳ್ಳಲು ಆಕೆಗೆ ಪರ್ಯಾಯ ವ್ಯವಸ್ಥೆ ಮಾಡುವವರೆಗೂ ಆಕೆಯನ್ನು ಆ ಜಾಗದಿಂದ ತೆರವುಗೊಳಿಸಲು ಸಾಧ್ಯವಿಲ್ಲ ಎಂದೂ ಅವರು ಹೇಳಿದ್ದಾರೆ.

ಬರ್ಕತ್ ಬಾಯಿ ನಿವಾಸವನ್ನು ನೆಲಸಮಗೊಳಿಸಿದ ಬೆನ್ನಿಗೇ ನೀಮುಚ್ ಜಿಲ್ಲಾಧಿಕಾರಿಗೆ ಲಿಖಿತ ದೂರು ನೀಡಿರುವ ಸ್ಥಳೀಯರು, ದೀರ್ಘ ಸಮಯದಿಂದ ಬರ್ಕತ್ ಬಾಯಿಯನ್ನು ಇಲ್ಲಿಂದ ತೆರವುಗೊಳಿಸಲು ಮಹಾನಗರ ಪಾಲಿಕೆ ಅಧಿಕಾರಿಗಳು ಪ್ರಯತ್ನಿಸುತ್ತಿದ್ದಾರೆ. ಆಕೆ ತಮ್ಮ ಮನೆ ನಿರ್ಮಿಸಿಕೊಳ್ಳಲು ಪ್ರಧಾನ ಮಂತ್ರಿ ಆವಾಸ್ ಯೋಜನೆ ಅಡಿ ಮಂಜೂರಾಗಿದ್ದ 2.5 ಲಕ್ಷ ರೂಪಾಯಿ ಅನುದಾನವನ್ನೂ ತಡೆ ಹಿಡಿದಿದ್ದಾರೆ ಎಂದು ಆರೋಪಿಸಿದ್ದಾರೆ.

ಮನೆ ತೊರೆಯುವಂತೆ ಆಕೆಯ ಮೇಲೆ ಒತ್ತಡ ಹೇರಲು ಆಕೆಯ ಮನೆಯ ಮುಂದೆ ಮಹಾನಗರ ಪಾಲಿಕೆ ಅಧಿಕಾರಿಗಳು ನಾಲೆಯನ್ನು ತೋಡಿ, ಆಕೆಯ ಚಲನವಲನಕ್ಕೆ ಅಡ್ಡಿಯುಂಟು ಮಾಡಿದ್ದರು. ಆಕೆ ಚಿಕಿತ್ಸೆಗೆ ಹತ್ತಿರದ ಜಿಲ್ಲೆಗೆ ತೆರಳಿದ ನಂತರ, ಆಕೆಯ ನಿವಾಸವನ್ನು ಸದ್ದಿಲ್ಲದೆ ತೆರವುಗೊಳಿಸಿದ್ದಾರೆ. ನೆಲಸಮ ಕಾರ್ಯಾಚರಣೆಯನ್ನು ಸ್ಥಳೀಯರು ಪ್ರಶ್ನಿಸಿದಾಗ, ಅಧಿಕಾರಿಗಳು ಅನುಚಿತವಾಗಿ ವರ್ತಿಸಿದ್ದಾರೆ ಎಂದೂ ದೂರಿನಲ್ಲಿ ಆರೋಪಿಸಲಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಮಹಾನಗರ ಪಾಲಿಕೆ ಮುಖ್ಯಾಧಿಕಾರಿ ಮಹೇಂದ್ರ ವಶಿಷ್ಠ, “ಅಗ್ನಿಶಾಮಕ ದಳದ ಕಚೇರಿಯನ್ನು ನಿರ್ಮಿಸಲು ಈ ಜಾಗಕ್ಕೆ ಅನುಮೋದನೆ ನೀಡಲಾಗಿದೆ. ಹೀಗಾಗಿ, ಎಲ್ಲ ಅತಿಕ್ರಮಣಗಳನ್ನೂ ತೆರವುಗೊಳಿಸಲಾಗುತ್ತಿದೆ” ಎಂದು ಸ್ಪಷ್ಟೀಕರಣ ನೀಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News