ಲೆಬನಾನ್‍ನಲ್ಲಿ ನಾಗರಿಕರ ಸಾವಿನ ಬಗ್ಗೆ ವಿಶ್ವಸಂಸ್ಥೆ ಕಳವಳ
ವಿಶ್ವಸಂಸ್ಥೆ: ಲೆಬನಾನ್‍ನಲ್ಲಿ ಈಗ ನೆಲೆಸಿರುವ ಉದ್ವಿಗ್ನ ಪರಿಸ್ಥಿತಿ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ನಿರಾಶ್ರಿತರಿಗೆ ಸಂಬಂಧಿಸಿದ ವಿಶ್ವಸಂಸ್ಥೆಯ ಏಜೆನ್ಸಿ ಯುಎನ್‍ಎಚ್‍ಸಿಆರ್ ಬುಧವಾರ ಹೇಳಿದೆ.
ಲೆಬನಾನ್‍ನಲ್ಲಿ ಹೆಚ್ಚಿನ ಪ್ರಮಾಣದಲ್ಲಿ ನಾಗರಿಕರ ಸಾವು-ನೋವಿನ ಪ್ರಕರಣ ಅತ್ಯಂತ ಕಳವಳಕಾರಿಯಾಗಿದೆ. ಅಂತರಾಷ್ಟ್ರೀಯ ಮಾನವೀಯ ಕಾನೂನನ್ನು ಎತ್ತಿಹಿಡಿಯಬೇಕು ಮತ್ತು ನಾಗರಿಕರ ಭದ್ರತೆಯನ್ನು ಖಾತರಿಪಡಿಸುವುದು ಮಹತ್ವದ, ನಿರ್ಣಾಯಕ ಬಾಧ್ಯತೆಯಾಗಿದೆ. ಈ ನಿರ್ಣಾಯಕ ಸಮಯದಲ್ಲಿ ಲೆಬನಾನ್ ಪರ ನಿಲ್ಲಲು ನಾವು ಬದ್ಧರಾಗಿದ್ದೇವೆ' ಎಂದು ಯುಎನ್‍ಎಚ್‍ಸಿಆರ್ ವಕ್ತಾರರು ಟ್ವೀಟ್ ಮಾಡಿದ್ದಾರೆ. ಇಸ್ರೇಲ್‍ನ ತೀವ್ರ ದಾಳಿ ದಕ್ಷಿಣ ಲೆಬನಾನ್‍ನ ನಾಗರಿಕರಲ್ಲಿ ಗಾಭರಿ, ಆತಂಕ ಮೂಡಿಸಿದ್ದು ಸುಮಾರು 27,000 ಮಂದಿಯನ್ನು ತಾತ್ಕಾಲಿಕ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಹಲವರು ಕಾರುಗಳಲ್ಲಿ, ಪಾರ್ಕ್‍ಗಳಲ್ಲಿ ಹಾಗೂ ಬೀಚ್‍ಗಳಲ್ಲಿ ರಾತ್ರಿ ಕಳೆದಿದ್ದಾರೆ ಎಂದು ವಿಶ್ವಸಂಸ್ಥೆ ಅಧಿಕಾರಿಗಳು ಹೇಳಿದ್ದಾರೆ.
ಲೆಬನಾನ್‍ನಾದ್ಯಂತ ಇಸ್ರೇಲ್‍ನ ತೀವ್ರ ಬಾಂಬ್‍ದಾಳಿ ಮುಂದುವರಿದಿದ್ದು ಮೃತರ ಸಂಖ್ಯೆ 569ಕ್ಕೇರಿದೆ. ಸಾವಿರಾರು ಜನರು ನೆಲೆ ಕಳೆದುಕೊಂಡಿದ್ದು ಸ್ಥಳಾಂತರಗೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದಾರೆ ಎಂದು ಲೆಬನಾನ್‍ನ ಆರೋಗ್ಯ ಸಚಿವಾಲಯ ಬುಧವಾರ ಹೇಳಿದೆ. ಲೆಬನಾನ್ ವಿರುದ್ಧದ ಇಸ್ರೇಲ್‍ನ ಆಕ್ರಮಣವನ್ನು ಈಜಿಪ್ಟ್, ಇರಾಕ್ ಮತ್ತು ಜೋರ್ಡಾನ್‍ನ ವಿದೇಶಾಂಗ ಸಚಿವರು ಖಂಡಿಸಿದ್ದು ಇದು ಪ್ರದೇಶವನ್ನು ಪೂರ್ಣಪ್ರಮಾಣದ ಯುದ್ಧದತ್ತ ತಳ್ಳುತ್ತಿದೆ ಎಂದು ಎಚ್ಚರಿಸಿದ್ದಾರೆ.
ಈ ಮಧ್ಯೆ ` ಇಸ್ರೇಲ್ ತನ್ನ ಅಭಿಯಾನದ ಹೊಸ ಹಂತವನ್ನು ಪ್ರವೇಶಿಸಿದೆ. ಹಿಜ್ಬುಲ್ಲಾದ ಸಾಮಥ್ರ್ಯಕ್ಕೆ ಚೇತರಿಸಿಕೊಳ್ಳಲಾಗದ ಪ್ರಹಾರ ನೀಡಿದ್ದೇವೆ. ಅವರ ಕ್ಷಿಪಣಿ ಮತ್ತು ಡ್ರೋನ್ ದಾಳಿ ಸಾಮಥ್ರ್ಯವನ್ನು ಗುರಿಯಾಗಿಸಿ ಆಘಾತ ನೀಡಲಾಗಿದೆ. ಹಿಜ್ಬುಲ್ಲಾಗಳ ಕಮಾಂಡರ್‍ಗಳು ಮತ್ತು ಕಾರ್ಯಕರ್ತರ ಮೇಲೆ ಗಮನಾರ್ಹ ಹೊಡೆತ ನೀಡಲಾಗಿದೆ. ಇನ್ನಷ್ಟು ಕ್ಷಿಪ್ರ ಕ್ರಿಯೆಗೆ ನಾವು ಸನ್ನದ್ಧರಾಗಬೇಕು' ಎಂದು ಇಸ್ರೇಲ್‍ನ ಉತ್ತರ ಕಮಾಂಡ್ ಮುಖ್ಯಸ್ಥ ಮೇಜರ್ ಜನರಲ್ ಓರಿ ಗಾರ್ಡಿನ್‍ರನ್ನು ಉಲ್ಲೇಖಿಸಿ ಇಸ್ರೇಲ್ ಸೇನೆ ಹೇಳಿಕೆ ನೀಡಿದೆ.