ಮೀಸಲಾತಿ ಕುರಿತು ಹೇಳಿಕೆ | ರಾಹುಲ್ ಗಾಂಧಿ ಪಾಸ್‌ಪೋರ್ಟ್ ರದ್ದು ಕೋರಿ ಸ್ಪೀಕರ್‌ಗೆ ಪತ್ರ

Update: 2024-09-25 16:04 GMT

ರಾಹುಲ್ ಗಾಂಧಿ | PC : PTI

ಹೊಸದಿಲ್ಲಿ : ಇತ್ತೀಚೆಗೆ ಅಮೆರಿಕ ಪ್ರವಾಸದ ಸಂದರ್ಭ ಸಿಕ್ಖ್ ಸಮುದಾಯದ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಹಾಗೂ ಮೀಸಲಾತಿ ಕುರಿತು ವಿವಾದಾತ್ಮ ಹೇಳಿಕೆ ನೀಡಿರುವ ಆರೋಪದಲ್ಲಿ ಲೋಕಸಭೆಯ ಪ್ರತಿ ಪಕ್ಷದ ನಾಯಕ ರಾಹುಲ್ ಗಾಂಧಿ ಅವರ ಪಾಸ್‌ಪೋರ್ಟ್ ರದ್ದುಗೊಳಿಸುವಂತೆ ಕೋರಿ ಬಿಜೆಪಿ ಸಂಸದ ಸಿ.ಪಿ. ಜೋಷಿ ಲೋಕಸಭೆಯ ಸ್ಪೀಕರ್ ಅವರಿಗೆ ಪತ್ರ ಬರೆದಿದ್ದಾರೆ.

ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರಿಗೆ ಬರೆದೆ ಪತ್ರದಲ್ಲಿ, ಚಿತ್ತೋರ್‌ಗಢದ ಸಂಸದ ಸಿ.ಪಿ. ಜೋಷಿ ಅವರು ರಾಹುಲ್ ಗಾಂಧಿ ತಮ್ಮ ಸ್ಥಾನವನ್ನು ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಹೇಳಿದ್ದಾರೆ. ಅಲ್ಲದೆ, ಅವರು ಪ್ರತಿಪಕ್ಷದ ನಾಯಕನ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ರಾಹುಲ್ ಗಾಂಧಿ ಅವರು ಈ ತಿಂಗಳ ಆರಂಭದಲ್ಲಿ ಅಮೆರಿಕಕ್ಕೆ ನಾಲ್ಕು ದಿನಗಳ ಅನೌಪಚಾರಿಕ ಪ್ರವಾಸ ಕೈಗೊಂಡಿದ್ದರು. ಈ ಸಂದರ್ಭ ಅವರು ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಹಾಗೂ ಭಾರತೀಯ ಪ್ರಜೆಗಳೊಂದಿಗೆ ಸಂವಹನ ನಡೆಸಿದ್ದರು.

ಭಾರತದಲ್ಲಿ ನಿರುದ್ಯೋಗ ಹಾಗೂ ಆರೆಸ್ಸೆಸ್‌ ಕುರಿತು ಅಮೆರಿಕದಲ್ಲಿ ನೀಡಿದ ಹೇಳಿಕೆ ಕುರಿತಂತೆ ಬಿಜೆಪಿ ಹಾಗೂ ಅದರ ಮಿತ್ರ ಪಕ್ಷ ಟಿಡಿಪಿ ರಾಹುಲ್ ಗಾಂಧಿ ಅವರನ್ನು ತರಾಟೆಗೆ ತೆಗೆದುಕೊಂಡಿದೆ. ರಾಹುಲ್ ಗಾಂಧಿ ಅವರು ಚೀನಾವನ್ನು ಪ್ರಶಂಶಿಸಿದ್ದಾರೆ. ದೇಶದ ಗೌರವಕ್ಕೆ ಧಕ್ಕೆ ತಂದಿದ್ದಾರೆ ಎಂದು ಆರೋಪಿಸಿದೆ. ಅಲ್ಲದೆ, ರಾಹುಲ್ ಗಾಂಧಿ ಅವರನ್ನು ಭಾರತೀಯ ಪ್ರಜಾಪ್ರಭುತ್ವದ ಕಪ್ಪು ಚುಕ್ಕೆ ಎಂದು ಕರೆದಿದೆ.

ರಾಹುಲ್ ಗಾಂಧಿ ಅವರ ಹೇಳಿಕೆಗಳು ಕೇವಲ ರಾಜಕೀಯವಲ್ಲ. ಅವರ ದೇಶ ವಿರೋಧಿ ಮನಸ್ಥಿತಿಯ ಭಾಗವಾಗಿದೆ. ಅವರ ಹೇಳಿಕೆಗಳಿಂದ ದೇಶದ ಸ್ಥಿರತೆ ಮತ್ತು ಅಂತರ ರಾಷ್ಟ್ರೀಯ ಸಂಬಂಧಗಳಿಗೆ ಧಕ್ಕೆ ಉಂಟಾಗುವ ಸಾಧ್ಯತೆ ಇದೆ ಎಂದು ಜೋಷಿ ಪತ್ರದಲ್ಲಿ ತಿಳಿಸಿದ್ದಾರೆ.

ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ದೇಶದ ಪ್ರತಿಷ್ಠೆಗೆ ಧಕ್ಕೆ ತರುವ ಹೇಳಿಕೆಗಳನ್ನು ಸಮರ್ಥಿಸಲು ಸಾಧ್ಯವಿಲ್ಲ. ಆದುದರಿಂದ ಕೂಡಲೇ ರಾಹುಲ್ ಗಾಂಧಿ ಅವರ ಪಾಸ್ ಪೋರ್ಟ್ ಅನ್ನು ರದ್ದುಗೊಳಿಸಬೇಕು ಎಂದು ಜೋಷಿ ಆಗ್ರಹಿಸಿದ್ದಾರೆ.

ಇದಲ್ಲದೆ ರಾಹುಲ್ ಗಾಂಧಿ ಅವರು ಪ್ರತಿಪಕ್ಷದ ನಾಯಕನ ತನ್ನ ಸ್ಥಾನಕ್ಕೆ ರಾಜೀನಾಮೆ ನೀಡುವುದು ಕೂಡ ಅಷ್ಟೇ ಮುಖ್ಯವಾದುದು ಎಂದು ಜೋಷಿ ಹೇಳಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News