ಬಿಎಂಸಿ ಅಧಿಕಾರಿಗೆ ಹಲ್ಲೆ:ಶಿವಸೇನೆ (ಯುಬಿಟಿ) ನಾಯಕ ಅನಿಲ್ ಪರಬ್ ವಿರುದ್ಧ ಪ್ರಕರಣ

Update: 2023-06-27 17:16 GMT

Anil Parab | Photo: ANI/Twitter

ಮುಂಬೈ: ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ)ಯ ಅಧಿಕಾರಿಯ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ)ಯ ಎಂಎಲ್ಸಿ ಅನಿಲ್ ಪರಬ್ ಮತ್ತು ಇತರ ನಾಲ್ವರ ವಿರುದ್ಧ ಮುಂಬೈ ಪೊಲೀಸರು ಮಂಗಳವಾರ ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ಪಕ್ಷದ ಕಚೇರಿಯನ್ನು ನೆಲಸಮಗೊಳಿಸಿದ್ದನ್ನು ಪ್ರತಿಭಟಿಸಲು ಮಹಾರಾಷ್ಟ್ರದ ಮಾಜಿ ಸಚಿವರೂ ಆಗಿರುವ ಪರಬ್ ಸೋಮವಾರ ಇತರ ಶಿವಸೇನೆ (ಯುಬಿಟಿ) ಪದಾಧಿಕಾರಿಗಳೊಂದಿಗೆ ಬಿಎಂಸಿಯ ಎಚ್-ಪೂರ್ವ ವಾರ್ಡ್ ಗೆ ಭೇಟಿ ನೀಡಿದ್ದರು.

ನೆಲಸಮ ಕಾರ್ಯಾಚರಣೆಯ ಮುನ್ನ ಪಕ್ಷದ ಕಚೇರಿಯನ್ನು ತೆರವುಗೊಳಿಸಲು ತಮಗೆ ಅವಕಾಶ ನೀಡುವಂತೆ ಪಕ್ಷದ ಕಾರ್ಯಕರ್ತರು ಬಿಎಂಸಿ ಅಧಿಕಾರಿಗಳನ್ನು ಆಗ್ರಹಿಸಿದ್ದರು,ಆದರೆ ಅವರಿಗೆ ಸಮಯಾವಕಾಶ ನೀಡಿರಲಿಲ್ಲ ಎಂದು ಮಾಜಿ ಕಾರ್ಪೊರೇಟರ್ ಹಾಜಿ ಹಲೀಂ ಖಾನ್ ಅವರನ್ನು ಉಲ್ಲೇಖಿಸಿ ಮಾಧ್ಯಮಗಳು ವರದಿ ಮಾಡಿವೆ.

ಕಚೇರಿಯಲ್ಲಿ ಮರಾಠಾ ದೊರೆ ಶಿವಾಜಿ ಮತ್ತು ಶಿವಸೇನೆ ಸ್ಥಾಪಕ ಬಾಳಾ ಠಾಕ್ರೆಯವರ ಚಿತ್ರಗಳಿದ್ದವು,ಹೀಗಿದ್ದರೂ ಕಚೇರಿಯನ್ನು ಧ್ವಂಸಗೊಳಿಸಿದ್ದೇಕೆ ಎಂದು ಪ್ರತಿಭಟನಾಕಾರರು ಪ್ರಶ್ನಿಸಿದ್ದರು. ಸಹಾಯಕ ಇಂಜಿನಿಯರ್ ಅಜಯ್ ಪಾಟೀಲ್ ಮೇಲೆ ಹಲ್ಲೆ ನಡೆಸಿದ್ದ ಪರಬ್ ಮತ್ತು ಇತರ ಕೆಲವರು,ಗಂಭೀರ ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂಬ ಬೆದರಿಕೆಯನ್ನು ಒಡ್ಡಿದ್ದರು ಎನ್ನಲಾಗಿದೆ.

ಈ ಬಗ್ಗೆ ಬಿಎಂಸಿ ಪೊಲೀಸ್ ದೂರು ದಾಖಲಿಸಿತ್ತು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News