ಅತಿಶಿಗೆ ದಿಲ್ಲಿ ಸರಕಾರದ ಸೇವೆಗಳ ನಿರ್ವಹಣೆ ಹೊಣೆ: ಸಿಎಂ ಕೇಜ್ರಿವಾಲ್ ರಿಂದ ಲೆ. ಗವರ್ನರ್ ಗೆ ಪ್ರಸ್ತಾವನೆ
ಹೊಸದಿಲ್ಲಿ: ದಿಲ್ಲಿ ಸರಕಾರದ ಸೇವೆಗಳು ಹಾಗೂ ಜಾಗೃತದಳ ವಿಭಾಗಗಳ ನಿರ್ವಹಣೆಯ ಉಸ್ತುವಾರಿಯನ್ನು ಸಚಿವೆ ಅತಿಶಿಗೆ ಹಸ್ತಾಂತರಿಸುವ ಪ್ರಸ್ತಾವನೆಯನ್ನು ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಲೆ.ಗವರ್ನರ್ ವಿ.ಕೆ.ಸಕ್ಸೇನಾ ಅವರಿಗೆ ಸಲ್ಲಿಸಿದ್ದಾರೆ.
ರಾಷ್ಟ್ರ ರಾಜಧಾನಿಯಲ್ಲಿ ಉನ್ನತ ಅಧಿಕಾರಿವರ್ಗದ ಮೇಲೆ ಕೇಂದ್ರ ಸರಕಾರಕ್ಕೆ ನಿಯಂತ್ರಣವನ್ನು ನೀಡುವ ದಿಲ್ಲಿ ರಾಷ್ಟ್ರ ರಾಜಧಾನಿ ಪ್ರಾಂತ (ತಿದ್ದುಪಡಿ) ವಿಧೇಯಕ 2023ಯನ್ನು ರಾಜ್ಯಸಭೆಯು ಸೋಮವಾರ ಅಂಗೀಕರಿಸಿದೆ. 131 ಸಂಸದರು ಪರವಾಗಿ ಹಾಗೂ 102 ಸಂಸದರು ವಿರುದ್ಧವಾಗಿ ಮತ ಚಲಾಯಿಸಿದ್ದರು.ಇದರೊಂದಿಗೆ ಈ ವಿಧೇಯಕಕ್ಕೆ ಸಂಸತ್ನ ಉಭಯ ಸದನಗಳ ಅನುಮೋದನೆ ದೊರೆತಂತಾಗಿದೆ.
ದಿಲ್ಲಿ ರಾಷ್ಟ್ರ ರಾಜಧಾನಿ ಪ್ರಾಂತ (ತಿದ್ದುಪಡಿ) ವಿಧೇಯಕವು ಗುರುವಾರ ಲೋಕಸಭೆಯಲ್ಲಿ ಅಂಗೀಕಾರಗೊಂಡಿತ್ತು.
ದಿಲ್ಲಿ ಆರೋಗ್ಯ ಹಾಗೂ ಜಲ ಸಚಿವ ಸೌರಭ್ ಭಾರಧ್ವಜ್ ಪ್ರಸಕ್ತ ದಿಲ್ಲಿ ಸೇವೆಗಳು ಹಾಗೂ ಜಾಗೃತಿದಳ ಖಾತೆಯನ್ನು ಹೊಂದಿದ್ದಾರೆ.
ಈ ಮಧ್ಯೆ ದಿಲ್ಲಿ ಸೇವೆಗಳು ಹಾಗೂ ಜಾಗೃತಿದಳ ಖಾತೆಗೆ ಅತಿಶಿಯವರನ್ನು ನೇಮಿಸುವ ಪ್ರಸ್ತಾವನೆಯಿರುವ ಕಡತವನ್ನು ತಾನು ಸ್ವೀಕರಿಸಿರುವುದಾಗಿ ಲೆಫ್ಟಿನೆಂಟ್ ಗವರ್ನರ್ ಅವರ ಕಾರ್ಯಾಲಯವು ತಿಳಿಸಿದೆ.
ದಿಲ್ಲಿ ಸರಕಾರದ ಏಕೈಕ ಸಚಿವೆಯಾದ ಅತಿಶಿ ಅವರು ಪ್ರಸಕ್ತ ಸಾರ್ವಜನಿಕ ಕಾಮಗಾರಿ, ವಿತ್ತ, ಕಂದಾಯ, ಯೋಜನಾ ಮಹಿಳಾ ಹಾಗೂ ಶಿಶು ಕಲ್ಯಾಣ ಸೇರಿಂತೆ 14 ಖಾತೆಗಳನ್ನು ಹೊಂದಿದ್ದಾರೆ.