ಸಂಸತ್ ಮೇಲಿನ ದಾಳಿ : ಆರೋಪಿಗಳು ವಿಭಿನ್ನ ಶೈಕ್ಷಣಿಕ, ಸಾಮಾಜಿಕ ಹಿನ್ನೆಲೆಯಿಂದ ಬಂದವರು

Update: 2023-12-14 16:05 GMT

ಹೊಸದಿಲ್ಲಿ: ಲೋಕಸಭೆಯಲ್ಲಿ ಬುಧವಾರ ಸದನಕ್ಕೆ ನುಗ್ಗಿ ಹೊಗೆಬಾಂಬ್ ಸಿಡಿಸಿ ಆತಂಕ ಸೃಷ್ಟಿಸಿದ ಪ್ರಕರಣದ ಆರೋಪಿಗಳು ವೈವಿಧ್ಯಮಯ ಶೈಕ್ಷಣಿಕ ಹಿನ್ನೆಲೆ, ಸಮಾಜದ ವಿಭಿನ್ನ ಶ್ರೇಣಿಗಳಿಂದ ಬಂದವರು ಹಾಗೂ ದೇಶದ ವಿವಿಧ ಭಾಗಗಳಿಗೆ ಸೇರಿದವರಾಗಿದ್ದಾರೆ. ಅಲ್ಲದೆ ಅವರ ವಯೋಮಾನ ಕೂಡಾ ವಿಭಿನ್ನವಾಗಿದ್ದು, 25 ವರ್ಷಗಳಿಂದ ಹಿಡಿದು 35 ವರ್ಷದೊಳಗಿನವರಾಗಿದ್ದಾರೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಆರೋಪಿಗಳಾದ ಸಾಗರ್ ಶರ್ಮಾ, ನೀಲಂ ಆಝಾದ್, ಮನೋರಂಜನ್ ಡಿ., ಅಮೋಲ್ ಶಿಂಧೆ, ವಿಕ್ಕಿ ಶರ್ಮಾ ಹಾಗೂ ಲಲಿತ್ ಝಾ ನಡುವೆ ಯಾವುದೇ ಸಾಮಾನ್ಯವಾದ ನಂಟು ಇರುವಂತೆ ಮೇಲ್ನೋಟಕ್ಕೆ ಕಂಡುಬರುವುದಿಲ್ಲ. ಆದರೆ ಅವರೆಲ್ಲರೂ ‘ಭಗತ್ ಸಿಂಗ್ ಫ್ಯಾನ್ ಕ್ಲಬ್’ ಎಂಬ ಫೇಸ್ಬುಕ್ ಪೇಜಿನ ಸದಸ್ಯರಾಗಿದ್ದಾರೆ. ಇವರ ಪೈಕಿ ನೀಲಂ ಆಝಾದ್ ಹಾಗೂ ಅಮೋಲ್ ಶಿಂಧೆ ಅವರಿಗೆ ಹಲವು ಬಾರಿ ಪ್ರಯತ್ನಿಸಿದರೂ ಉದ್ಯೋಗ ಪಡೆಯುವಲ್ಲಿ ವಿಫಲರಾಗಿದ್ದರು ಎಂಬುದು ತನಿಖೆಯಿಂದ ತಿಳಿದುಬಂದಿದೆ.

ತಾವು ನಿರುದ್ಯೋಗ, ಹಣದುಬ್ಬರ ಹಾಗೂ ಮಣಿಪುರ ಹಿಂಸಾಚಾರದಂತಹ ಜ್ವಲಂತ ಸಮಸ್ಯೆಗಳ ಬಗ್ಗೆ ಬೆಳಕುಚೆಲ್ಲಲು ಹಾಗೂ ಅವುಗಳ ಬಗ್ಗೆ ಸಂಸತ್ ನಲ್ಲಿ ಚರ್ಚೆಯಾಗುವಂತೆ ಮಾಡಲು ಸಂಸತ್‌ ಭವನದಲ್ಲಿ ಭದ್ರತಾ ಉಲ್ಲಂಘನೆ ಮಾಡುವ ಸಂಚನ್ನು ರೂಪಿಸಿದ್ದಾಗಿ ಆರೋಪಿಗಳು ಪೊಲೀಸರಿಗೆ ತಿಳಿಸಿದ್ದಾರೆ.

ಸಾಗರ್ ಶರ್ಮಾ

 

ಲೋಕಸಭೆಯ ಚೇಂಬರ್ಗೆ ವೀಕ್ಷಕರ ಗ್ಯಾಲರಿಯಿಂದ ಜಿಗಿದ ಇಬ್ಬರು ಯುವಕರಲ್ಲಿ ಒಬ್ಬನಾದ 27 ವರ್ಷ ವಯಸ್ಸಿನ ಸಾಗರ್ ಶರ್ಮಾ ದಿಲ್ಲಿಯಲ್ಲಿ ಜನಿಸಿದ್ದು, ಲಕ್ನೋದಲ್ಲಿ ತನ್ನ ತಂದೆತಾಯಿ ಹಾಗೂ ಕಿರಿಯ ಸಹೋದರಿ ಜೊತೆ ವಾಸವಾಗಿದ್ದ. ಆತ ಸಾಮಾಜಿಕ ಜಾಲತಾಣಗಳಲ್ಲಿ ಮಾಡಿದ ಪೋಸ್ಟ್ ಗಳಲ್ಲಿ ಸ್ವಾತಂತ್ರ್ಯ ಹೋರಾಟಗಾರ ಭಗತ್ ಸಿಂಗ್ ಹಾಗೂ ಮಾರ್ಕ್ಸಿಸ್ಟ್ ಕ್ರಾಂತಿಕಾರಿ ಚೆಗುವೆರಾ ಅವರನ್ನು ಉಲ್ಲೇಖಿಸುತ್ತಿದ್ದುದಾಗಿ ತಿಳಿದುಬಂದಿದೆ.

ಲೋಕಸಭೆಯಲ್ಲಿ ಹೊಗೆಬಾಂಬ್ ಸಿಡಿಸಲು ದಿಲ್ಲಿಗೆ ಆಗಮಿಸುವ ಮುನ್ನ ಆತ ತಾನು ಪ್ರತಿಭಟನೆಯೊಂದರಲ್ಲಿ ಪಾಲ್ಗೊಳ್ಳಲು ದಿಲ್ಲಿಗೆ ತೆರಳುತ್ತಿರುವುದಾಗಿ ಮನೆಯವರಿಗೆ ತಿಳಿಸಿದ್ದನೆನ್ನಲಾಗಿದೆ.

ಮನೋರಂಜನ್

ಮನೋರಂಜನ್ ಡಿ. ಮೈಸೂರಿನ ಯುವಕನಾಗಿದ್ದು, ಆತ ಕಂಪ್ಯೂಟರ್ ಎಂಜಿನಿಯರಿಂಗ್ ನಲ್ಲಿ ಪದವಿ ಪಡೆದಿದ್ದ. 34 ವರ್ಷದ ಮನೋರಂಜನ್ ಲೋಕಸಭೆಯ ಸಂದರ್ಶಕರ ಗ್ಯಾಲರಿಯಿಂದ ಶರ್ಮಾನ ಜೊತೆ ಸದನಕ್ಕೆ ಜಿಗಿದಿದ್ದ. ಮನೋರಂಜನ್ ಎಂಜಿನಿಯರಿಂಗ್ ಓದಿದ ಬಳಿಕ ಆತ ಯಾವುದಾದರೂ ಕೆಲಸದಲ್ಲಿದ್ದನೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ.

ನೀಲಂ ಆಝಾದ್

 

ಹರ್ಯಾಣದ ಹಿಸಾರ್ನವರಾದ ನೀಲಂ ಆಝಾದ್ ಎಂ.ಫಿಲ್ ಪದವಿ ಪಡೆದಿದ್ದಳು. ಶಿಕ್ಷಕಿ ಹುದ್ದೆಯನ್ನು ಪಡೆಯಲು ಅಗತ್ಯವಿರುವ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿಯೂ ಉತ್ತೀರ್ಣಳಾಗಿದ್ದಳು. ಆದರೆ ಉದ್ಯೋಗವನ್ನು ಪಡೆಯುವಲ್ಲಿ ವಿಫಲಳಾಗಿದ್ದಳು. ಸಂಸತ್‌ ಭವನದೊಳಗೆ ಹಳದಿಬಣ್ಣದ ಹೊಗೆಬಾಂಬ್ ಗಳನ್ನು ಸಿಡಿಸುವ ಸಂಚಿನಲ್ಲಿ ಈಕೆ ಭಾಗಿಯಾಗಿದ್ದಳು. ಅಲ್ಲದೆ ಈ ಘಟನೆ ನಡೆದ ಸಂದರ್ಭ ಸಂಸತ್ ಭವನದ ಹೊರಗೆ ಹೊಗೆಬಾಂಬ್ ಸಿಡಿಸಿ, ‘ಸರ್ವಾಧಿಕಾರಕ್ಕೆ ಧಿಕ್ಕಾರ’ ಎಂಬ ಘೋಷಣೆಗಳನ್ನು ಕೂಗಿ ಬಂಧನಕ್ಕೊಳಗಾಗಿದ್ದಳು.

2021ರಲ್ಲಿ ಕೇಂದ್ರ ಸರಕಾರದ ನೂತನ ಕೃಷಿ ಕಾಯ್ದೆಗಳ ವಿರುದ್ಧ ವರ್ಷವಿಡೀ ನಡೆದ ಪ್ರತಿಭಟನೆಗಳಲ್ಲಿ ನೀಲಂ ಭಾಗವಹಿಸಿದ್ದಳು. ಅಲ್ಲದೆ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ದರವನ್ನು ನಿಗದಿಪಡಿಸುವಂತೆ ಆಗ್ರಹಿಸಿ ಈ ವರ್ಷ ನಡೆದ ಧರಣಿಗಳಲ್ಲಿಯೂ ಆಕೆ ಪಾಲ್ಗೊಂಡಿದ್ದಳು. ಮಹಿಳಾ ಅತ್ಲೀಟ್ ಗಳಿಗೆ ಲೈಂಗಿಕ ಕಿರುಕುಳದ ಆರೋಪದ ಎದುರಿಸುತ್ತಿರುವ ಭಾರತೀಯ ಕುಸ್ತಿ ಫೆಡರೇಶನಿನ ಮುಖ್ಯಸ್ಥ ಹಾಗೂ ಬಿಜೆಪಿ ಸಂಸದ ಬ್ರಿಜ್ ಭೂಷಣ್ ವಿರುದ್ಧ ನಡೆದ ಪ್ರತಿಭಟನೆಗಳಲ್ಲಿಯೂ ಆಕೆ ಭಾಗವಹಿಸಿದ್ದರು.

‘‘ನೀಲಂ ಅತ್ಯುತ್ತಮವಾದ ಶೈಕ್ಷಣಿಕ ಅರ್ಹತೆಯನ್ನು ಹೊಂದಿದ್ದಳು. ಆದರೂ ಆಕೆಗೆ ಉದ್ಯೋಗ ದೊರೆತಿರಲಿಲ್ಲ. ಇದರಿಂದ ಆಕೆ ಎಷ್ಟೊಂದು ಹತಾಶಳಾಗಿದ್ದಳೆಂದರೆ, ತಾನು ಇಷ್ಟೊಂದು ಕಲಿಯುವುದರ ಬದಲು ಸತ್ತಿದ್ದರೆ ಒಳ್ಳೆಯದಿತ್ತು ಎಂದು ಹೇಳುತ್ತಿದ್ದಳು. ದಿನಕ್ಕೆ ಎರಡು ಹೊತ್ತಿನ ಊಟಕ್ಕೆ ಬೇಕಾದ ಹಣವನ್ನು ಸಂಪಾದಿಸಲು ಕೂಡಾ ಆಕೆಗೆ ಸಾಧ್ಯವಾಗಿರಲಿಲ್ಲ’’ ಎಂದು ನೀಲಂಳ ತಾಯಿ ಸರಸ್ವತಿ ಹೇಳುತ್ತಾರೆ.

‘‘ನೀಲಂ ಬಿಎ, ಎಂಎ ಹಾಗೂ ಎಂಫಿಲ್ ಪದವಿ ಪೂರ್ತಿಗೊಳಿಸಿದ್ದಳು ಹಾಗೂ ಎನ್ಇಟಿ ಕೂಡಾ ಪಾಸ್ ಮಾಡಿದ್ದಳು. ಆದರೂ ಆಕೆ ನಿರುದ್ಯೋಗಿಯಾಗಿದ್ದಳು. ಆರು ತಿಂಗಳುಗಳ ಹಿಂದೆ ಜಿಂದ್ ಗೆ ತೆರಳಿದ್ದ ಅವರು ಮಾಧ್ಯಮಿಕ ಶಿಕ್ಷಕರ ಅರ್ಹತಾ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದಳು’’ ಎಂದು ಆಕೆಯ ಸಹೋದರ ಹೇಳುತ್ತಾರೆ.

ಸೇನೆಯ ಆಕಾಂಕ್ಷಿ

ನೀಲಂ ಜೊತೆಗೂಡಿ ಸಂಸತ್ ಭವನದ ಹೊರಗೆ ಹೊಗೆಬಾಂಬ್ ಸಿಡಿಸುವ ಮೂಲಕ ಪ್ರತಿಭಟನೆ ನಡೆಸಿದ ದಲಿತ ಯುವಕ ಅಮೋಲ್ ಶಿಂಧೆ ಸೇನೆಯಲ್ಲಿ ಸೇವೆ ಸಲ್ಲಿಸುವ ಆಕಾಂಕ್ಷೆ ಹೊಂದಿದ್ದನು. ಮಹಾರಾಷ್ಟ್ರದ ಲಾತೂರ್ ಜಿಲ್ಲೆಯವನು. 25 ವರ್ಷದ ಅಮೋಲ್ ರೈತನ ಪುತ್ರನಾಗಿದ್ದು, ಹಲವಾರು ಪ್ರಯತ್‌ ನಗಳ ಹೊರತಾಗಿಯೂ ಪೊಲೀಸ್ ಹಾಗೂ ಸೇನಾ ನೇಮಕಾತಿ ಪರೀಕ್ಷೆಗಳಲ್ಲಿ ಉತ್ತೀರ್ಣಗೊಳ್ಳಲು ವಿಫಲನಾಗಿದ್ದನೆಂದು ಆತನ ತಂದೆ ಹೇಳುತ್ತಾರೆ.

‘‘ಅಮೋಲ್ ಡಿಸೆಂಬರ್ 9ರಂದು ಮನೆಯಿಂದ ನಿರ್ಗಮಿಸಿದ್ದನು. ತಾನು ಪೊಲೀಸ್ ನೇಮಕಾತಿ ಅಭಿಯಾನಕ್ಕೆ ಹೋಗುತ್ತಿರುವುದಾಗಿ ಆತ ತಿಳಿಸಿದ್ದನು. ಆತ ತುಂಬಾ ವೇಗವಾಗಿ ಓಡಬಲ್ಲವನಾಗಿದ್ದು, ಪೊಲೀಸ್ ಅಥವಾ ಸೇನೆಯನ್ನು ಸೇರಲು ಬಯಸಿದ್ದ. ಸಂಸತ್‌ ನಲ್ಲಿ ಏನಾಯಿತೆಂದು ನಮಗೆ ಗೊತ್ತಿಲ್ಲ. ನಾವು ಕಾರ್ಮಿಕರು. ಪೊಲೀಸರು ನಮ್ಮೊಂದಿಗೆ ಮಾತನಾಡಿದ್ದಾರೆ. ನಮಗೆ ಏನೂ ಗೊತ್ತಿಲ್ಲವೆಂದೇ ನಾವು ಅವರಲ್ಲಿ ತಿಳಿಸಿದ್ದೆವು ಎಂಬುದಾಗಿ ಆತನ ತಂದೆ ಹೇಳುತ್ತಾರೆ.

ಈ ನಾಲ್ವರು ಆರೋಪಿಗಳಿಗೆ ವಿಕಿ ಶರ್ಮಾ ಹಾಗೂ ಆತನ ಪತ್ನಿ ರೇಖಾ ಹರ್ಯಾಣದ ಗುರುಗ್ರಾಮದಲ್ಲಿರುವ ತಮ್ಮ ಮನೆಯಲ್ಲಿ ಆಶ್ರಯ ನೀಡಿದ್ದರು. ವಿಕಿ ಶರ್ಮಾ, ರಫ್ತು ಕಂಪೆನಿಯೊಂದರಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದಾನೆ.

ಲಲಿತ್ ಝಾ

 

ಬಿಹಾರ ಮೂಲದ ಲಲಿತ್ ಝಾ ಈ ಪ್ರಕರಣದಲ್ಲಿ ತಲೆಮರೆಸಿಕೊಂಡಿರುವ ಆರೋಪರಿಯಾಗಿದ್ದಾನೆ. ಸಂಸತ್ ಭವನದ ಹೊರಗೆ ನೀಲಂ ಆಝಾದ್ ಹಾಗೂ ಅಮೋಲ್ ಶಿಂಧೆ ಅವರು ಹಳದಿ ಬಣ್ಣದ ಹೊಗೆ ಬಾಂಬ್ ಎಸೆದು, ಸರ್ವಾಧಿಕಾರಕ್ಕೆ ಧಿಕ್ಕಾರ ಎಂಬ ಘೋಷಣೆಗಳನ್ನು ಕೂಗುತ್ತಿರುವ ದೃಶ್ಯಗಳ ವಿಡಿಯೋಗಳನ್ನು ಆತ ಚಿತ್ರೀಕರಿಸಿದ್ದ. ಆಗ ಉಂಟಾದ ಗೊಂದಲ ನಡುವೆ ಆತ ಸ್ಥಳದಿಂದ ಪರಾರಿಯಾಗಿದ್ದನು. ಕೋಲ್ಕತಾದ ನಿವಾಸಿಯಾ ಝಾ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಶಹೀದ್ ಭಗತ್ ಸಿಂಗ್ ಅವರ ಬದುಕಿನಿಂದ ಪ್ರಭಾವಿತನಾಗಿದ್ದ ಹಾಗೂ ದೇಶದ ಗಮನವು ತನ್ನೆಡೆಗೆ ಸೆಳೆಯುವಂತೆ ಮಾಡಲು ಏನಾದರೂ ಮಾಡಬೇಕೆಂದು ಆತ ಬಯಸಿದ್ದ.

ಆದರೆ ಈ ಎಲ್ಲಾ ಆರೋಪಿಗಳಿಗೂ ಯಾವುದೇ ಭಯೋತ್ಪಾದಕ ಗುಂಪಿನ ಜೊತೆ ನಂಟು ಇರಲಿಲ್ಲವೆಂಬುದು ತನಿಖೆಯಿಂದ ತಿಳಿದುಬಂದಿದೆಯೆಂದು ಪೊಲೀಸರು ತಿಳಿಸಿದ್ದಾರೆ.

ಆರೋಪಿಗಳಾದ ಸಾಗರ್ ಶರ್ಮಾ, ಡಿ. ಮನೋರಂಜನ್, ನೀಲಂ ದೇವಿ ಹಾಗೂ ಅಮೋಲ್ ಶಿಂಧೆ ಹಾಗೂ ವಿಕ್ಕಿ ಶರ್ಮಾ ಅವರು ಘಟನೆಗೆ ಮುನ್ನ ರವಿವಾರ ಬೆಳಗ್ಗೆ ಪರಸ್ಪರ ಭೇಟಿಯಾಗಿದ್ದರೆಂದು ಪೊಲೀಸರು ತಿಳಿಸಿದ್ದಾರೆ.

ಲೋಕಸಭೆಯಲ್ಲಿ ಭದ್ರತಾ ಲೋಪದ ಘಟನೆಗೆ ಸಂಬಂಧಿಸಿ, ವಿಕಿ ಶರ್ಮಾ ಹೊರತುಪಡಿಸಿ ಉಳಿದ 6 ಮಂದಿಯನ್ನು ಬಂಧಿಸಲಾಗಿದೆ.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News