ಯೋಧರ ಮೇಲೆ ದಾಳಿ : ಜಮ್ಮು-ಕಾಶ್ಮೀರದ ಪೂಂಛ್ ಮತ್ತು ರಜೌರಿ ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತ

Update: 2023-12-23 15:55 GMT

ಶ್ರೀನಗರ: ಗುರುವಾರ ಪೂಂಛ್‌ನಲ್ಲಿ ಎರಡು ಸೇನಾ ವಾಹನಗಳ ಮೇಲೆ ಹೊಂಚುದಾಳಿಯನ್ನು ನಡೆಸಿದ್ದ ಭಯೋತ್ಪಾದಕರಿಗಾಗಿ ಭದ್ರತಾ ಪಡೆಗಳು ನಡೆಸುತ್ತಿರುವ ಶೋಧ ಕಾರ್ಯಾಚರಣೆಗಳ ನಡುವೆ ಶನಿವಾರ ನಸುಕಿನಿಂದ ಪೂಂಛ್ ಮತ್ತು ರಜೌರಿ ಜಿಲ್ಲೆಗಳಲ್ಲಿ ಇಂಟರ್ನೆಟ್‌ನ್ನು ಸ್ಥಗಿತಗೊಳಿಸಲಾಗಿದೆ. ಈ ದಾಳಿಯಲ್ಲಿ ಐವರು ಯೋಧರು ಮೃತಪಟ್ಟಿದ್ದರು.

ಸೇನಾಪಡೆಯು ವಿಚಾರಣೆಗಾಗಿ ತನ್ನ ವಶಕ್ಕೆ ತೆಗೆದುಕೊಂಡಿತ್ತು ಎನ್ನಲಾದ ಮೂವರು ವ್ಯಕ್ತಿಗಳ ನಿಗೂಢ ಸಾವಿನ ಬಳಿಕ ಈ ಅವಳಿ ಗಡಿ ಜಿಲ್ಲೆಗಳಲ್ಲಿ ಇಂಟರ್ನೆಟ್ ಸ್ಥಗಿತಗೊಳಿಸಲಾಗಿದೆ. ಈ ಶಂಕಿತ ವ್ಯಕ್ತಿಗಳಿಗೆ ಚಿತ್ರಹಿಂಸೆಯನ್ನು ನೀಡುತ್ತಿರುವ ವೀಡಿಯೊಗಳು ಬಹಿರಂಗಗೊಂಡ ಬಳಿಕ ಸಾರ್ವಜನಿಕರಲ್ಲಿ ಅಸಮಾಧಾನವು ಭುಗಿಲೆದ್ದಿದೆ.

ಸೇನೆ ಮತ್ತು ಸರಕಾರಿ ಅಧಿಕಾರಿಗಳು ಪರಿಸ್ಥಿತಿಯ ಬಗ್ಗೆ ತುಟಿಪಿಟಕ್ಕೆಂದಿಲ್ಲ, ಆದರೆ ವದಂತಿಗಳ ಹರಡುವಿಕೆಯನ್ನು ನಿಗ್ರಹಿಸಲು ಹಾಗೂ ದುಷ್ಕರ್ಮಿಗಳಿಂದ ಕಾನೂನು ಮತ್ತು ಸುವ್ಯವಸ್ಥೆಗೆ ಸಂಭಾವ್ಯ ತೊಡಕುಗಳನ್ನು ತಡೆಯಲು ಇಂಟರ್ನೆಟ್ ಸೌಲಭ್ಯವನ್ನು ಸ್ಥಗಿತಗೊಳಿಸಲಾಗಿದೆ ಎಂದು ಅಧಿಕೃತ ಮೂಲಗಳು ತಿಳಿಸಿವೆ.

ಸೇನೆ,ಪೋಲಿಸ್ ಮತ್ತು ನಾಗರಿಕ ಆಡಳಿತದ ಹಿರಿಯ ಅಧಿಕಾರಿಗಳು ಪರಿಸ್ಥಿತಿಯ ಮೇಲೆ ನಿಕಟ ನಿಗಾಯಿರಿಸಿದ್ದಾರೆ. ಶಾಂತಿಯನ್ನು ಕಾಯ್ದುಕೊಳ್ಳಲು ಉಭಯ ಜಿಲ್ಲೆಗಳ ಸೂಕ್ಷ್ಮ ಪ್ರದೇಶಗಳಲ್ಲಿ ಹೆಚ್ಚುವರಿ ಪೋಲಿಸ್ ಮತ್ತು ಅರೆಸೇನಾ ಪಡೆ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ಗುರುವಾರ ಅಪರಾಹ್ನ ಪೂಂಛ್ ಸುರಾನಕೋಟ್ ಪೋಲಿಸ್ ಠಾಣಾ ವ್ಯಾಪ್ತಿಯ ಧಾತ್ಯಾರ ಮೋರ್ ಎಂಬಲ್ಲಿ ಸೇನೆಯ ಜಿಪ್ಸಿ ಮತ್ತು ಟ್ರಕ್‌ನ್ನು ಗುರಿಯಾಗಿಸಿಕೊಂಡು ಮೂರರಿಂದ ನಾಲ್ವರು ಭಯೋತ್ಪಾದಕರು ಹೊಂಚುದಾಳಿಯನ್ನು ನಡೆಸಿದ್ದರು. ಐವರು ಯೋಧರು ಮೃತಪಟ್ಟು, ಇಬ್ಬರು ಗಾಯಗೊಂಡಿದ್ದರು. ವರದಿಗಳು ತಿಳಿಸಿರುವಂತೆ ದಾಳಿಯ ಬಳಿಕ ಭಯೋತ್ಪಾದಕರು ಕನಿಷ್ಠ ಇಬ್ಬರು ಯೋಧರ ಶವಗಳನ್ನು ಛಿದ್ರವಿಚ್ಛಿದ್ರಗೊಳಿಸಿದ್ದರು ಮತ್ತು ಅವರ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಂಡಿದ್ದರು.

ಗುರುವಾರ ದಾಳಿಗೆ ಸಂಬಂಧಿಸಿದಂತೆ ವಶಕ್ಕೆ ತೆಗೆದುಕೊಳ್ಳಲಾಗಿದ್ದ ಬುಫ್ಲಿಯಾಜ್‌ನ ಟೋಪಾ ಪೀರ್ ಗ್ರಾಮದ ಸಫೀರ್ ಹುಸೇನ್, ಮುಹಮ್ಮದ್ ಶೌಕತ್, ಮತ್ತು ಶಬೀರ್ ಅಹ್ಮದ್ ಅವರು ನಿಗೂಢ ಸಾವನ್ನಪ್ಪಿರುವುದು ಪರಿಸ್ಥಿತಿಯನ್ನು ಇನ್ನಷ್ಟು ಸಂಕೀರ್ಣಗೊಳಿಸಿದೆ. ಅವರ ಮೃತದೇಹಗಳನ್ನು ಕುಟುಂಬಿಕರಿಗೆ ಹಸ್ತಾಂತರಿಸಲಾಗಿದ್ದು, ಅವರ ಸಾವುಗಳಿಗೆ ಕಾರಣವಾಗಿದ್ದ ಸಂದರ್ಭಗಳ ಕುರಿತು ತನಿಖೆ ಮುಂದುವರಿದಿದೆ.

Tags:    

Writer - ವಾರ್ತಾಭಾರತಿ

contributor

Editor - Thouheed

contributor

Byline - ವಾರ್ತಾಭಾರತಿ

contributor

Similar News