ಸನ್ನಿ ಡಿಯೋಲ್ ಬಂಗಲೆ ಹರಾಜು ನೋಟಿಸ್ ಅನ್ನು ಒಂದೇ ದಿನದಲ್ಲಿ ವಾಪಸ್ ಪಡೆದ ಬ್ಯಾಂಕ್ ಆಫ್ ಬರೋಡಾ
ಮುಂಬೈ: ಮುಂಬೈನ ಜುಹು ಪ್ರದೇಶದಲ್ಲಿರುವ ನಟ, ಬಿಜೆಪಿ ಸಂಸದ ಸನ್ನಿ ಡಿಯೋಲ್ ಅವರ ಬಂಗಲೆಯ ಹರಾಜು ನೋಟಿಸ್ ವಾಪಸ್ ಪಡೆದುಕೊಳ್ಳಲಾಗಿದೆ ಎಂದು ಬ್ಯಾಂಕ್ ಆಫ್ ಬರೋಡಾ ಇಂದು ಹೇಳಿದೆ.
ರವಿವಾರ ಬ್ಯಾಂಕ್ ಇ-ಹರಾಜು ಮೂಲಕ ಸನ್ನಿ ಅವರ ಆಸ್ತಿಯನ್ನು ಆಗಸ್ಟ್ 25 ರಂದು ಹರಾಜು ಹಾಕಿ ಬಾಕಿಯಿರುವ ರೂ. 56 ಕೋಟಿ ಮೊತ್ತವನ್ನು ಈ ಮೂಲಕ ವಸೂಲು ಮಾಡಲಾಗುವುದು ಎಂದು ಹೇಳಿತ್ತು. ಗುರುದಾಸ್ಪುರ್ ಕ್ಷೇತ್ರದ ಸಂಸದರಾಗಿರುವ ಸನ್ನಿ ಡಿಯೋಲ್ ಡಿಸೆಂಬರ್ 2022ರಿಂದ ಬ್ಯಾಂಕ್ ಆಫ್ ಬರೋಡಾಗೆ ಅವರು ವಾಪಸ್ ನೀಡಬೇಕಿರುವ ರೂ 55.99 ಕೋಟಿ ನೀಡಿಲ್ಲ.
ಸನ್ನಿಯ ಬಂಗಲೆ- ಸನ್ನಿ ವಿಲ್ಲಾ ಹೊರತಾಗಿ ಅದರ ಸುತ್ತ ಇರುವ 599.44 ಚದರ ಮೀಟರ್ ಪ್ರದೇಶ ಹಾಗೂ ನಟನ ಕುಟುಂಬದ ಒಡೆತನದ ಸನ್ನಿ ಸೌಂಡ್ಸ್ ಕಂಪೆನಿಯನ್ನೂ ಹರಾಜು ಹಾಕಲಾಗುವುದು ಎಂದು ಬ್ಯಾಂಕ್ ರವಿವಾರ ಹೇಳಿತ್ತು. ಈ ಸಂಸ್ಥೆ ಸಾಲಕ್ಕೆ ಗ್ಯಾರೆಂಟರ್ ಆಗಿದ್ದರೆ ಸನ್ನಿ ಡಿಯೋಲ್ ತಂದೆ ಧರ್ಮೇಂದ್ರ ವೈಯಕ್ತಿಕ ಗ್ಯಾರಂಟರ್ ಆಗಿದ್ದರು.
ಆದರೆ ಇಂದು ಏಕಾಏಕಿ ಬ್ಯಾಂಕ್ ತಾಂತ್ರಿಕ ಕಾರಣಗಳನ್ನು ಮುಂದೊಡ್ಡಿ ಹರಾಜು ನೋಟಿಸ್ ವಾಪಸ್ ಪಡೆದಿದೆ.
ಇದಕ್ಕೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ಕಾಂಗ್ರೆಸ್ ನೋಟಿಸ್ ವಾಪಸಾತಿಗೆ ಕಾರಣವಾದ ತಾಂತ್ರಿಕ ಸಮಸ್ಯೆಯನ್ನು ಯಾರು ಉಂಟು ಮಾಡಿದರು ಎಂದು ಪ್ರಶ್ನಿಸಿದೆ.
“ಬ್ಯಾಂಕ್ 24 ಗಂಟೆಗಳಿಗೂ ಕಡಿಮೆ ಅವಧಿಯಲ್ಲಿ ತನ್ನ ನೋಟಿಸ್ ವಾಪಸ್ ಪಡೆದಿರುವುದಕ್ಕೆ ಕಾರಣವೇನು” ಎಂದು ಪ್ರಶ್ನಿಸಿ ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಟ್ವೀಟ್ ಮಾಡಿದ್ದಾರೆ.