ನಿವೃತ್ತ ನ್ಯಾಯಮೂರ್ತಿಗಳಿಗೆ ಕನಿಷ್ಠ ಪಿಂಚಣಿ: ಸುಪ್ರೀಂಕೋರ್ಟ್ ಆಘಾತ
ಹೊಸದಿಲ್ಲಿ: ಕೆಲ ನಿವೃತ್ತ ನ್ಯಾಯಮೂರ್ತಿಗಳು ಕೇವಲ 6 ರಿಂದ 15 ಸಾವಿರ ರೂಪಾಯಿಯಷ್ಟು ಕಡಿಮೆ ಪಿಂಚಣಿ ಪಡೆಯುತ್ತಿರುವ ಬಗ್ಗೆ ಸುಪ್ರೀಂಕೋರ್ಟ್ ಗುರುವಾರ ತೀವ್ರ ಆಘಾತ ವ್ಯಕ್ತಪಡಿಸಿದೆ. ನ್ಯಾಯಮೂರ್ತಿಗಳಾದ ಬಿ.ಆರ್.ಗವಾಯಿ, ಪಿ.ಕೆ ಮಿಶ್ರಾ ಮತ್ತು ಕೆ.ವಿ.ವಿಶ್ವನಾಥನ್ ಅವರನ್ನೊಳಗೊಂಡ ನ್ಯಾಯಪೀಠ, ಕೇವಲ 15 ಸಾವಿರ ರೂಪಾಯಿ ಪಿಂಚಣಿ ಪಡೆಯುತ್ತಿರುವ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಸಲ್ಲಿಸಿದ ಅರ್ಜಿಯ ವಿಚಾರಣೆ ವೇಳೆ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಜಿಲ್ಲಾ ನ್ಯಾಯಾಲಯದಲ್ಲಿ 13 ವರ್ಷ ಕಲ ನ್ಯಾಯಾಂಗ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಬಳಿಕ ಇವರು ಅಲಹಾಬಾದ್ ಹೈಕೋರ್ಟ್ ನ್ಯಾಯಮೂರ್ತಿಯಾಗಿ ಬಡ್ತಿ ಪಡೆದಿದ್ದರು. ಇವರ ಪಿಂಚಣಿಯನ್ನು ನಿಗದಿಪಡಿಸುವ ವೇಳೆ ಅಧಿಕಾರಿಗಳು ಇವರ ನ್ಯಾಯಾಂಗ ಸೇವೆಗಳನ್ನು ಪರಿಗಣಿಸಿಲ್ಲ ಎನ್ನುವುದು ಅರ್ಜಿದಾರರ ವಾದ.
"ನಮ್ಮೆದುರು ಮಾಸಿಕ 6 ರಿಂದ 15 ಸಾವಿರ ರೂಪಾಯಿ ಪಿಂಚಣಿ ಪಡೆಯುತ್ತಿರುವ ನಿವೃತ್ತ ಹೈಕೋರ್ಟ್ ನ್ಯಾಯಮೂರ್ತಿಗಳಿದ್ದಾರೆ. ಇದು ಆಘಾತಕಾರಿ. ಅದು ಹೇಗೆ ಸಾಧ್ಯ?" ಎಂದು ನ್ಯಾಯಪೀಠ ಪ್ರಶ್ನಿಸಿದೆ. ಕೆಲ ರಾಜ್ಯಗಳಲ್ಲಿ ನಿವೃತ್ತಿ ಬಳಿಕದ ಸೌಲಭ್ಯಗಳು ಭಿನ್ನವಾಗುತ್ತವೆ. ಏಕೆಂದರೆ ಕೆಲ ರಾಜ್ಯಗಳು ಒಳ್ಳೆಯ ಸೌಲಭ್ಯಗಳನ್ನು ನೀಡುತ್ತಿವೆ ಎಂದು ನ್ಯಾಯಮೂರ್ತಿ ಗವಾಯಿ ಹೇಳಿದರು.
ಕಳೆದ ಮಾರ್ಚ್ ನಲ್ಲಿ ಪ್ರತ್ಯೇಕ ಅರ್ಜಿಯೊಂದರ ವಿಚಾರಣೆ ವೆಳೆ ಸುಪ್ರೀಂಕೋರ್ಟ್, ನಿವೃತ್ತ ಹೈಕೋರ್ಟ್ ಗಳ ನ್ಯಾಯಮೂರ್ತಿಗಳ ಪಿಂಚಣಿ ಸೌಲಭ್ಯಗಳನ್ನು ಲೆಕ್ಕಹಾಕುವ ವೇಳೆ ಯಾವುದೇ ತಾರತಮ್ಯ ಇರಬಾರದು ಎಂದು ಹೇಳಿತ್ತು. ಜಿಲ್ಲಾ ನ್ಯಾಯಾಂಗ ಇಲಾಖೆಯಿಂದ ಬಡ್ತಿ ಪಡೆದ ನ್ಯಾಯಮೂರ್ತಿಗಳ ವೇತನವನ್ನು ಕೂಡಾ ನ್ಯಾಯಮೂರ್ತಿಗಳು ನಿವೃತ್ತಿಯಾದ ದಿನ ಪಡೆದ ವೇತನದ ಆಧಾರದಲ್ಲಿ ಲೆಕ್ಕಹಾಕಬೇಕು ಎಂದು ಸ್ಪಷ್ಟಪಡಿಸಿತ್ತು.