ಕೋವಿಡ್ ಗುಣಪಡಿಸುವ ಸುಳ್ಳು ಪ್ರತಿಪಾದನೆ ಮೂಲಕ ರೆಡ್ ಲೈನ್ ದಾಟಿದ ರಾಮ್‍ದೇವ್: ಭಾರತೀಯ ವೈದ್ಯಕೀಯ ಸಂಘ
ಹೊಸದಿಲ್ಲಿ: ಕೋವಿಡ್-19 ಸೋಂಕು ಗುಣಪಡಿಸುವ ಸುಳ್ಳು ಪ್ರತಿಪಾದನೆ ಮೂಲಕ ಮತ್ತು ಆಧುನಿಕ ಔಷಧಿಗಳನ್ನು "ಮೂರ್ಖ ಹಾಗೂ ದಿವಾಳಿ ವಿಜ್ಞಾನ" ಎಂದು ಅವಹೇಳನ ಮಾಡುವ ಮೂಲಕ ಯೋಗಗುರು ರಾಮ್‍ದೇವ್ ಕೆಂಪು ಗೆರೆ ದಾಟಿದ್ದಾರೆ ಎಂದು ಭಾರತೀಯ ವೈದ್ಯಕೀಯ ಸಂಘದ ಅಧ್ಯಕ್ಷ ಡಾ.ಆರ್.ವಿ.ಅಶೋಕನ್ ಹೇಳಿದ್ದಾರೆ.
ಸುಳ್ಳು ಜಾಹೀರಾತುಗಳಿಗಾಗಿ ರಾಮ್‍ದೇವ್ ಮತ್ತು ಅವರ ಬಹುಕೋಟಿ ಡಆಲರ್ ಗ್ರಾಹಕ ಸರಕು ಸಾಮ್ರಾಜ್ಯವನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡ ಬಳಿಕ ಐಎಂಎ ನೀಡಿದ ಮೊದಲ ಪ್ರತಿಕ್ರಿಯೆ ಇದಾಗಿದೆ. ಪ್ರಕರಣದ ಬಗ್ಗೆ ಮುಂದಿನ ವಿಚಾರಣೆಗೆ ಸುಪ್ರೀಂಕೋರ್ಟ್ ನಿಗದಿಪಡಿಸಿದ ದಿನಾಂಕದ ಮುನ್ನಾ ದಿನ ಈ ಹೇಳಿಕೆ ನೀಡಿರುವುದು ವಿಶೇಷ ಮಹತ್ವ ಪಡೆದಿದೆ.
ಸುಪ್ರೀಂಕೋರ್ಟ್ ಐಎಂಎ ಮತ್ತು ಖಾಸಗಿ ವೈದ್ಯರ ಸೇವೆಯನ್ನು ಟೀಕಿಸಿರುವುದು ದುರದೃಷ್ಟಕರ ಎಂದು ಡಾ.ಅಶೋಕನ್ ಹೇಳಿದ್ದಾರೆ.
ಸುಪ್ರೀಂಕೋರ್ಟ್ ಐಎಂಎ 2022ರಲ್ಲಿ ಸಲ್ಲಿಸಿದ ಅರ್ಜಿಯ ವಿಚಾರಣೆ ನಡೆಸುತ್ತಿದೆ. ರಾಮ್‍ದೇವ್ ವಿರುದ್ಧ ಕೋವಿಡ್ ಲಸಿಕಾ ಅಭಿಯಾನದ ವಿರುದ್ಧ ಹಾಗೂ ಆಧುನಿಕ ವೈದ್ಯಪದ್ಧತಿ ವಿರುದ್ಧ ಅವಹೇಳನಕಾರಿ ಪ್ರಚಾರ ಮಾಡುತ್ತಿರುವ ಬಗ್ಗೆ ಐಎಂಎ ಸುಪ್ರೀಂಕೋರ್ಟ್‍ನ ಮೆಟ್ಟಿಲೇರಿತ್ತು. ತಪ್ಪುದಾರಿಗೆಳೆಯುವ ಜಾಹೀರಾತುಗಳ ಬಗ್ಗೆ ಸಾರ್ವಜನಿಕ ಕ್ಷಮೆ ಯಾಚಿಸುವಂತೆ ರಾಮದೇವ್ ಹಾಗೂ ಅವರ ಸಹವರ್ತಿ ಆಚಾರ್ಯ ಬಾಲಕೃಷ್ಣ, ಪತಂಜಲಿ ಆಯುರ್ವೇದ ಲಿಮಿಟೆಡ್‍ಗೆ ಸುಪ್ರೀಂಕೋರ್ಟ್ ಸೂಚನೆ ನೀಡಿತ್ತು.
ವಿಚಾರಣೆ ವೇಳೆ ದೇಶದ ಅತ್ಯುನ್ನತ ಕೋರ್ಟ್ ಪತಂಜಲಿಯ ಸಾರ್ವಜನಿಕ ಕ್ಷಮೆಯಾಚನೆ ಜಾಹೀರಾತನ್ನು ಕೂಡಾ ಪ್ರಶ್ನಿಸಿ, ತನ್ನ ಉತ್ಪನ್ನಗಳ ಜಾಹೀರಾತಿನ ಗಾತ್ರದ ಕ್ಷಮೆಯಾಚನೆ ಜಾಹೀರಾತನ್ನೂ ನೀಡಲಾಗಿದೆಯೇ ಎಂದು ಕೇಳಿತ್ತು. ಈ ವಿಚಾರವನ್ನು ನ್ಯಾಯಾಲಯ ಎಪ್ರಿಲ್ 30ರಂದು ಪರಿಗಣಿಸಲಿದೆ.
"ರಾಷ್ಟ್ರದ ಲಸಿಕಾ ಯೋಜನೆ ಅಭಿಯಾನದ ವೇಳೆ ಬಾಬಾ ರಾಮದೇವ್ ದೇಶದ ಹಿತಾಸಕ್ತಿ ವಿರುದ್ಧ ಪ್ರಚಾರ ನಡೆಸಿದ್ದಾರೆ. ಕೋವಿಡ್ ಲಸಿಕೆ ತಗೆದುಕೊಂಡ ಬಳಿಕ 20 ಸಾವಿರ ವೈದ್ಯರು ಮೃತಪಟ್ಟಿದ್ದಾರೆ ಎಂದು ರಾಮದೇವ್ ಆಪಾದಿಸಿದ್ದರು. ಅವರು ಹೇಳಿದ್ದನ್ನು ಜನ ನಂಬುತ್ತಾರೆ. ಇದು ಈ ಇಡೀ ಪ್ರಕರಣದ ದುರದೃಷ್ಟಕರ ಭಾಗ" ಎಂದು ಡಾ.ಅಶೋಕನ್ ಅವರು ಬಣ್ಣಿಸಿದ್ದಾರೆ.