ಬಾಬಾ ಸಿದ್ದೀಕಿ ಕೊಲೆ ಪ್ರಕರಣ | ಶಂಕಿತನನ್ನು ಸಲ್ಮಾನ್ ಖಾನ್ ಪ್ರಕರಣದಲ್ಲಿ ವಿಚಾರಣೆ ನಡೆಸಿ ಬಿಡಲಾಗಿತ್ತು!

Update: 2024-10-15 14:56 GMT

ಸಲ್ಮಾನ್ ಖಾನ್ | PC : PTI 

ಮುಂಬೈ : ಕಳೆದ ವಾರ ಮುಂಬೈನ ಬಾಂದ್ರಾದಲ್ಲಿ ನಡೆದ ಮಹಾರಾಷ್ಟ್ರದ ಮಾಜಿ ಸಚಿವ ಬಾಬಾ ಸಿದ್ದೀಕಿಯವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಂಬೈ ಪೋಲಿಸರು ಹುಡುಕಾಡುತ್ತಿರುವ ಶಂಕಿತರ ಪೈಕಿ ಓರ್ವನನ್ನು ಎಪ್ರಿಲ್‌ನಲ್ಲಿ ನಟ ಸಲ್ಮಾನ್ ಖಾನ್ ನಿವಾಸದ ಹೊರಗೆ ಗುಂಡು ಹಾರಾಟ ಘಟನೆಯ ಬಳಿಕ ವಿಚಾರಣೆಗೊಳಪಡಿಸಲಾಗಿತ್ತು, ಆದರೆ ಸಾಕ್ಷ್ಯಾಧಾರಗಳ ಕೊರತೆಯಿಂದಾಗಿ ಆತನನ್ನು ಬಿಡಲಾಗಿತ್ತು.

ಸಿದ್ದೀಕಿ ಕೊಲೆ ಪ್ರಕರಣದಲ್ಲಿ ತಮ್ಮ ತನಿಖೆಯು ಶುಭಂ ಲೋಣಕರ್‌ನನ್ನು ಪ್ರಮುಖ ಸಂಚುಕೋರರಲ್ಲಿ ಓರ್ವನೆಂದು ಬೆಟ್ಟು ಮಾಡಿದೆ ಎಂದು ಪೋಲಿಸರು ಹೇಳಿದ್ದಾರೆ. ಮೂರು ಬಾರಿ ಶಾಸಕರಾಗಿದ್ದ ಸಿದ್ದೀಕಿ ಎನ್‌ಸಿಪಿಯ ಅಜಿತ್ ಪವಾರ್ ಬಣದ ನಾಯಕರಾಗಿದ್ದರು.

ಬಾಂದ್ರಾದಲ್ಲಿಯ ಸಲ್ಮಾನ್ ಖಾನ್ ನಿವಾಸ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನ ಹೊರಗೆ ಗುಂಡಿನ ದಾಳಿಯ ಬಳಿಕ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಪ್ರಮುಖ ಸದಸ್ಯ ಎನ್ನಲಾಗಿರುವ ಲೋಣಕರ್‌ನನ್ನು ಪೋಲಿಸರು ವಿಚಾರಣೆಗಾಗಿ ವಶಕ್ಕೆ ತೆಗೆದುಕೊಂಡಿದ್ದರು. ಪ್ರಕರಣದಲ್ಲಿ ವಿಚಾರಣೆಗೊಳಪಟ್ಟಿದ್ದ ಹಲವರು ಲೋಣಕರ್ ಹೆಸರನ್ನು ಉಲ್ಲೇಖಿಸಿದ್ದರು ಎನ್ನಲಾಗಿದೆ. ಗುಂಡು ಹಾರಾಟ ಪ್ರಕರಣದಲ್ಲಿಯ ಶಂಕಿತರಿಗೆ ಲೋಣಕರ್ ಆಶ್ರಯ ಒದಗಿಸಿದ್ದ ಎಂದು ಆರೋಪಿಸಲಾಗಿತ್ತು,ಆದರೆ ಬಲವಾದ ಪುರಾವೆ ಇಲ್ಲದ್ದರಿಂದ ಪೋಲಿಸರು ಆತನನ್ನು ಬಿಟ್ಟು ಕಳುಹಿಸಿದ್ದರು.

ಲೋಣಕರ್ ಮತ್ತು ಆತನ ಸೋದರ ಪ್ರವೀಣ ಸಿದ್ದೀಕಿ ಹತ್ಯೆಯ ಇಬ್ಬರು ಪ್ರಮುಖ ಸಂಚುಕೋರರಾಗಿದ್ದಾರೆ ಮತ್ತು ಇಬ್ಬರು ಶೂಟರ್‌ಗಳಾದ ಧರ್ಮರಾಜ್ ಕಶ್ಯಪ್ ಮತ್ತು ಶಿವಕುಮಾರ್ ಗೌತಮ್ ಅವರನ್ನು ಸಂಚಿನಲ್ಲಿ ಸೇರಿಸಿಕೊಂಡಿದ್ದರು ಎಂದು ಪೋಲಿಸರು ಈ ಮೊದಲು ತಿಳಿಸಿದ್ದರು.

ರವಿವಾರ ಫೇಸ್‌ಬುಕ್ ಪೋಸ್ಟ್‌ನಲ್ಲಿ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್ ಸಿದ್ದೀಕಿ ಹತ್ಯೆಯ ಹೊಣೆಯನ್ನು ವಹಿಸಿಕೊಂಡಿತ್ತು. ಈ ಪೋಸ್ಟ್‌ ಲೋಣಕರ್ ಖಾತೆಯಿಂದ ಮಾಡಲಾಗಿತ್ತು ಎನ್ನಲಾಗಿದೆ.

ಪ್ರವೀಣ್ ನನ್ನು ಪೋಲಿಸರು ರವಿವಾರ ಸಂಜೆ ಪುಣೆಯಿಂದ ಬಂಧಿಸಿದ್ದರೆ, ಲೋಣಕರ್ ಈಗಲೂ ತಲೆಮರೆಸಿಕೊಂಡಿದ್ದಾನೆ.

ಸಿದ್ದೀಕಿ ಹತ್ಯೆಯ ಹಿಂದೆ ಬಿಷ್ಣೋಯಿ ಗ್ಯಾಂಗ್ ಇರಬಹುದು ಎಂದು ಸೋಮವಾರ ನ್ಯಾಯಾಲಯದಲ್ಲಿ ಮೊದಲ ಬಾರಿಗೆ ಅಧಿಕೃತವಾಗಿ ತಿಳಿಸಿದ್ದ ಪೋಲೀಸರು ಲೋಣಕರ್ ಸೋದರರ ಹೆಸರುಗಳನ್ನು ಉಲ್ಲೇಖಿಸಿದ್ದರು.

Tags:    

Writer - ವಾರ್ತಾಭಾರತಿ

contributor

Editor - Ismail

contributor

Byline - ವಾರ್ತಾಭಾರತಿ

contributor

Similar News