ಸರಕಾರಿ ನೌಕರರು ಆರೆಸ್ಸೆಸ್ ಸಭೆಗಳಲ್ಲಿ ಭಾಗವಹಿಸಲು ಇದ್ದ ನಿಷೇಧವನ್ನು ತೆಗೆದು ಹಾಕಲಾಗಿದೆ : ಕಾಂಗ್ರೆಸ್ ಆರೋಪ
ಹೊಸದಿಲ್ಲಿ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಭೆಗಳಲ್ಲಿ ಸರಕಾರಿ ಅಧಿಕಾರಿಗಳು ಭಾಗವಹಿಸಲು ಇದ್ದ ನಿಷೇಧವನ್ನು ತೆಗೆದು ಹಾಕಲಾಗಿದೆ ಎಂದು ಕಳೆದ ವಾರದ ಸರಕಾರದ ಆದೇಶವೊಂದನ್ನು ಉಲ್ಲೇಖಿಸಿ ರವಿವಾರ ಕಾಂಗ್ರೆಸ್ ಆರೋಪಿಸಿದೆ.
ಕಾಂಗ್ರೆಸ್ ನಾಯಕರು ಹಂಚಿಕೊಂಡಿರುವ ಈ ಸರಕಾರಿ ಆದೇಶದ ನೈಜತೆಯನ್ನು ತಕ್ಷಣವೇ ದೃಢಪಡಿಸಿಕೊಳ್ಳಲು ಸಾಧ್ಯವಾಗದಿದ್ದರೂ, ಅಂತಹುದೇ ಸರಕಾರಿ ಆದೇಶದ ಸ್ಕ್ರೀನ್ ಶಾಟ್ ಒಂದನ್ನು ಹಂಚಿಕೊಂಡಿರುವ ಬಿಜೆಪಿ ಐಟಿ ಘಟಕದ ಮುಖ್ಯಸ್ಥ ಅಮಿತ್ ಮಾಳವಿಯಾ, “58 ವರ್ಷಗಳ ಹಿಂದೆ ಹೊರಡಿಸಲಾಗಿದ್ದ ಅಸಾಂವಿಧಾನಿಕ ಆದೇಶವನ್ನು ಮೋದಿ ಸರಕಾರ ಹಿಂಪಡೆದಿದಿದೆ" ಎಂದು ಘೋಷಿಸಿದ್ದಾರೆ ಎಂದು indianexpress.com ವರದಿ ಮಾಡಿದೆ.
ಆರೆಸ್ಸೆಸ್ ಚಟುವಟಿಕೆಗಳಲ್ಲಿ ಸರಕಾರಿ ಅಧಿಕಾರಿಗಳು ಭಾಗವಹಿಸುವುದಕ್ಕೆ ಸಂಬಂಧಿಸಿದಂತೆ ಜುಲೈ 9ರಂದು ಸಿಬ್ಬಂದಿ, ಸಾರ್ವಜನಿಕ ಕುಂದುಕೊರತೆಗಳು ಹಾಗೂ ಪಿಂಚಣಿ ಸಚಿವಾಲಯವು ಹೊರಡಿಸಿರುವ ಕಚೇರಿ ಆದೇಶ ಹಂಚಿಕೊಂಡಿರುವ ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್, "ಗಾಂಧೀಜಿಯ ಹತ್ಯೆಯ ಬೆನ್ನಿಗೇ ಸರ್ದಾರ್ ವಲ್ಲಭ ಭಾಯಿ ಪಟೇಲ್ ಅವರು 1948ರಲ್ಲಿ ಆರೆಸ್ಸೆಸ್ ಅನ್ನು ನಿಷೇಧಿಸಿದ್ದರು. ಇದರ ನಂತರ, ಉತ್ತಮ ನಡವಳಿಕೆ ತೋರುವ ಆಶ್ವಾಸನೆಯ ಮೇರೆಗೆ ನಿಷೇಧವನ್ನು ಹಿಂಪಡೆಯಲಾಗಿತ್ತು. ಇದಾದ ನಂತರವೂ ಆರೆಸ್ಸೆಸ್ ತನ್ನ ನಾಗಪುರ ಕಚೇರಿಯ ಮೇಲೆ ತ್ರಿವರ್ಣ ಧ್ವಜವನ್ನು ಹಾರಿಸಲಿಲ್ಲ. 1966ರಲ್ಲಿ ಸರಕಾರಿ ನೌಕರರು ಆರೆಸ್ಸೆಸ್ ಚಟುವಟಿಕೆಗಳಿಲ್ಲ ಭಾಗವಹಿಸದಂತೆ ಸೂಕ್ತವಾಗಿಯೇ ನಿಷೇಧ ಹೇರಲಾಗಿತ್ತು" ಎಂದು ಬರೆದುಕೊಂಡಿದ್ದಾರೆ.
"ಜೂನ್ 4, 2024ರ ನಂತರ ಸ್ವಘೋಷಿತ ಅಜೈವಿಕ ಪ್ರಧಾನ ಮಂತ್ರಿ ಹಾಗೂ ಆರೆಸ್ಸೆಸ್ ನಡುವಿನ ಸಂಬಂಧ ಹದಗೆಟ್ಟಿತು. ಜುಲೈ 9, 2024ರಂದು ವಾಜಪೇಯಿ ಪ್ರಧಾನಿಯಾಗಿದ್ದಾಗಲೂ ಜಾರಿಯಲ್ಲಿದ್ದ 58 ವರ್ಷಗಳ ನಿಷೇಧವನ್ನು ಹಿಂಪಡೆಯಲಾಗಿದೆ. ಇನ್ನು ಮುಂದೆ ಸರಕಾರಿ ಅಧಿಕಾರಿಗಳು ಚೆಡ್ಡಿಯಲ್ಲೇ ಕಚೇರಿಗಳಿಗೆ ಬರಲೂಬಹುದು" ಎಂದು ಜೈರಾಮ್ ರಮೇಶ್ ವ್ಯಂಗ್ಯವಾಡಿದ್ದಾರೆ.
ರಾಷ್ಟ್ರೀಯ ಸ್ವಯಂಸೇವಕ ಸಂಘದ ಸಮವಸ್ತ್ರವಾಗಿದ್ದ ಖಾಕಿ ಚೆಡ್ಡಿಯನ್ನು ಗುರಿಯಾಗಿಸಿಕೊಂಡು ಅವರು ಮೇಲಿನಂತೆ ವ್ಯಂಗ್ಯವಾಡಿದ್ದಾರೆ. 2016ರಲ್ಲಿ ಚೆಡ್ಡಿಯ ಬದಲು ಪ್ಯಾಂಟ್ ಅನ್ನು ಸಮವಸ್ತ್ರವನ್ನಾಗಿ ಆರೆಸ್ಸೆಸ್ ಪರಿಚಯಿಸಿತ್ತು.
ಕಾಂಗ್ರೆಸ್ ಪಕ್ಷದ ಮಾಧ್ಯಮ ಹಾಗೂ ಪ್ರಚಾರ ವಿಭಾಗದ ಮುಖ್ಯಸ್ಥ ಪವನ್ ಖೇರಾ ಕೂಡಾ ಈ ಕ್ರಮವನ್ನು ಖಂಡಿಸಿದ್ದಾರೆ.